2 ಬಾರಿ ಗೆದ್ದ ಕ್ಷೇತ್ರದಿಂದಲೇ ಮತ್ತೆ ಸ್ಪರ್ಧೆಗಿಳಿಯಲಿದ್ದಾರೆ ಡಿಎಂಕೆ ಅಧ್ಯಕ್ಷ ಸ್ಟಾಲಿನ್; ತಾತ ಕರುಣಾನಿಧಿ ಕ್ಷೇತ್ರದಿಂದ ಟಿಕೆಟ್ ಬಯಸಿರುವ ಉದಯನಿಧಿ
Tamil Nadu Assembly Election 2021: ಕಳೆದ 2ದಿನಗಳ ಹಿಂದೆ ಸ್ಟಾಲಿನ್ ಪುತ್ರ, ಡಿಎಂಕೆ ಯುವ ಮೋರ್ಚಾ ಕಾರ್ಯದರ್ಶಿ ಉದಯನಿಧಿ, ಚೆಪಾಕ್ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಚೆಪಾಕ್ ಕ್ಷೇತ್ರ ಡಿಎಂಕೆಯ ಭದ್ರಕೋಟೆ.
ಚೆನ್ನೈ: ಏಪ್ರಿಲ್ 6ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ಡಿಎಂಕೆ ( ದ್ರಾವಿಡ ಮುನ್ನೇತ್ರ ಕಳಗಂ) ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಕೊಲಾಥೂರ್ ಕ್ಷೇತ್ರದಿಂದ ಸ್ಪರ್ಧಿಸಲು ಒಪ್ಪಿಕೊಂಡಿದ್ದಾರೆ. ಅರಿವಲಯಂನಲ್ಲಿರುವ ಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ, ಪಕ್ಷದ ಚುನಾವಣಾ ಸಮಿತಿಗೆ ಈ ಬಗ್ಗೆ ಅಧಿಕೃತವಾಗಿ ಲಿಖಿತ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಸತತವಾಗಿ ಎರಡು ಬಾರಿ ಇದೇ ಕ್ಷೇತ್ರದಿಂದ ಗೆದ್ದಿರುವ ಸ್ಟಾಲಿನ್ ಈಗ ಮೂರನೇ ಬಾರಿಗೆ ಕೊಲಾಥೂರ್ನಿಂದ ಸ್ಪರ್ಧಿಸುತ್ತಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
2011ಕ್ಕೂ ಮೊದಲು ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಸ್ಟಾಲಿನ್ 2011ರ ಚುನಾವಣೆಯಿಂದ ಕೊಲಾಥೂರ್ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಕಳೆದ 2ದಿನಗಳ ಹಿಂದೆ ಸ್ಟಾಲಿನ್ ಪುತ್ರ, ಡಿಎಂಕೆ ಯುವ ಮೋರ್ಚಾ ಕಾರ್ಯದರ್ಶಿ ಉದಯನಿಧಿ, ಚೆಪಾಕ್ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಚೆಪಾಕ್ ಕ್ಷೇತ್ರ ಡಿಎಂಕೆಯ ಭದ್ರಕೋಟೆಯೆಂದೇ ಪ್ರಸಿದ್ಧಿ. ಯಾಕೆಂದರೆ ಅತ್ಯಂತ ಪ್ರಭಾವಿ ರಾಜಕಾರಣಿ, ಡಿಎಂಕೆ ಸಂಸ್ಥಾಪಕ, ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರು ಮೂರು ಬಾರಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು.
ತಮಿಳುನಾಡಿನಲ್ಲಿ ಬಿಜೆಪಿ ಎಐಎಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೆ, ಡಿಎಂಕೆ ಜತೆ ಕಾಂಗ್ರೆಸ್ ಕೈಜೋಡಿಸಿದೆ. ಏಪ್ರಿಲ್ 6ರಂದು 234 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆಯಿದ್ದು, ಮೇ 2ರಂದು ಮತಎಣಿಕೆ ನಡೆಯಲಿದೆ.