ರೈತರು ದೇಶದ್ರೋಹಿಗಳಲ್ಲ, ಕೆಂಪುಕೋಟೆ ಹಿಂಸಾಚಾರಕ್ಕೆ ಕೇಂದ್ರದ ಷಡ್ಯಂತ್ರವೂ ಕಾರಣ: ಅರವಿಂದ ಕೇಜ್ರಿವಾಲ್

Kisan Mahapanchayat in Meerut: ರೈತ ಪ್ರತಿಭಟನೆಕಾರರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ನಮ್ಮ ರೈತರು ಏನೇ ಆಗಿರಲಿ, ಅವರು ದೇಶದ್ರೋಹಿಗಳಲ್ಲ ಎಂದು ಕಿಸಾನ್ ಮಹಾಪಂಚಾಯತ್​ನಲ್ಲಿ ಮಾತನಾಡಿದ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ರೈತರು ದೇಶದ್ರೋಹಿಗಳಲ್ಲ, ಕೆಂಪುಕೋಟೆ ಹಿಂಸಾಚಾರಕ್ಕೆ ಕೇಂದ್ರದ ಷಡ್ಯಂತ್ರವೂ ಕಾರಣ: ಅರವಿಂದ ಕೇಜ್ರಿವಾಲ್
ಕಿಸಾನ್ ಮಹಾ ಪಂಚಾಯತ್​ನಲ್ಲಿ ಅರವಿಂದ ಕೇಜ್ರಿವಾಲ್
Follow us
ರಶ್ಮಿ ಕಲ್ಲಕಟ್ಟ
|

Updated on: Feb 28, 2021 | 4:51 PM

ಮೀರತ್: ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರದ ಹಿಂದೆ ಇರುವುದು ಕೇಂದ್ರ ಸರ್ಕಾರದ ಷಡ್ಯಂತ್ರ, ರೈತರದಲ್ಲ. ದೆಹಲಿಯ ರಸ್ತೆಗಳನ್ನೇ ಅರಿಯದ ರೈತರನ್ನು ಇಲ್ಲಿ ದಾರಿತಪ್ಪಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷ (AAP) ನಾಯಕ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಉತ್ತರ ಪ್ರದೇಶದ ಮೀರತ್​ನಲ್ಲಿ ಭಾನುವಾರ ನಡೆದ ಕಿಸಾನ್ ಮಹಾಪಂಚಾಯತ್ ನಲ್ಲಿ ಮಾತನಾಡಿದ ಕೇಜ್ರಿವಾಲ್, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಘೋಷಿಸಿದ್ದಾರೆ.

ರೈತರು ಟ್ರ್ಯಾಕ್ಟರ್ ಮೆರವಣಿಗೆ ನಡೆಸಿದ ದಿನ ಅಲ್ಲಿ ಏನಾಗಿತ್ತು ಎಂಬುದರ ಬಗ್ಗೆ ನನಗೆ ಅರಿವಿದೆ. ನಾನು ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿ. ನಮ್ಮ ದೇಶದ ರೈತರು ಅಸಮಧಾನಗೊಂಡಿದ್ದಾರೆ. ರೈತರು ತಮ್ಮ ಕುಟುಂಬದೊಂದಿಗೆ ದೆಹಲಿಯ ಗಡಿಭಾಗದಲ್ಲಿ 90 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ 250ಕ್ಕಿಂತಲೂ ಹೆಚ್ಚು ರೈತರು ಸಾವಿಗೀಡಾಗಿದ್ದಾರೆ. ಕೇಂದ್ರ ಸರ್ಕಾರ ಇಲ್ಲಿಯವರೆಗೆ ಏನೂ ಮಾಡಿಲ್ಲ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ಜೈ ಜವಾನ್, ಜೈ ಕಿಸಾನ್ ಮತ್ತು ಕಾಲಾ ಕಾನೂನ್ ವಾಪಸ್ ಲೋ (ಕಪ್ಪು ಕಾಯ್ದೆಗಳನ್ನು ಹಿಂಪಡೆಯಿರಿ) ಎಂಬ ಘೋಷಣೆ ಕಿಸಾನ್ ಮಹಾ ಪಂಚಾಯತ್​ನಲ್ಲಿ ಮೊಳಗಿದೆ. ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗುತ್ತಿದೆ. ಈ ರೀತಿಯ ಕಾನೂನನ್ನು ಬ್ರಿಟಿಷ್ ಸರ್ಕಾರವೇ ರದ್ದು ಮಾಡಿತ್ತು. ಆದರೆ ಈಗ ಪ್ರತಿಭಟನೆಕಾರರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ನಮ್ಮ ರೈತರು ಏನೇ ಆಗಿರಲಿ, ಅವರು ದೇಶದ್ರೋಹಿಗಳಲ್ಲ. ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗುತ್ತದೆ. ನಮ್ಮ ದೇಶದ ಒಬ್ಬ ಮಗ ದೇಶದ ಗಡಿಯಲ್ಲಿ ದೇಶ ಕಾಯುವಾಗ ಮತ್ತೊಬ್ಬ ದೆಹಲಿಯ ಗಡಿಭಾಗದಲ್ಲಿದ್ದಾನೆ ಎಂದಿದ್ದಾರೆ ಕೇಜ್ರಿವಾಲ್.

ಉತ್ತರ ಪ್ರದೇಶದಲ್ಲಿ 2022ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಈ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ಕೇಜ್ರಿವಾಲ್ ಜನವರಿಯಲ್ಲಿ ಹೇಳಿದ್ದರು. ಇತ್ತೀಚೆಗೆ ಟ್ವಿಟರ್​ನಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ಕೇಂದ್ರದ ಕೃಷಿ ಕಾಯ್ದೆಗಳನ್ನು ಕಪ್ಪು ಕಾಯ್ದೆಗಳು ಎಂದು ಹೇಳಿದ್ದಾರೆ. ಈ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುವ ರೈತರ ಪರ ಕೇಜ್ರಿವಾಲ್ ನಿಲ್ಲಲಿದ್ದಾರೆ ಎಂದು ಸಿಂಗ್ ವಿಡಿಯೊದಲ್ಲಿ ಹೇಳಿದ್ದರು.

ಕೇಜ್ರಿವಾಲ್ ಈ ಹಿಂದೆಯೇ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ, ರೈತರ ಪರ ದನಿಯೆತ್ತಿದ್ದರು. ಕಿಸಾನ್ ಮಹಾಪಂಚಾಯತ್ ನಲ್ಲಿ ಮಾತನಾಡಿದ ಅವರು ಕಪ್ಪು ಕಾಯ್ದೆಗಳು ರೈತರಿಗೆ ಡೆತ್ ವಾರಂಟ್ ಆಗಿದೆ. ಮಾರ್ಚ್ 21ರಂದು ಪಂಜಾಬ್​ನ ಮೊಗಾ ಜಿಲ್ಲೆಯಲ್ಲಿ ಕಿಸಾನ್ ಮಹಾ ಸಮ್ಮೇಳನ ಆಯೋಜಿಸಲು ಪಕ್ಷ ತೀರ್ಮಾನಿಸಿದೆ ಎಂದಿದ್ದಾರೆ ಆಪ್ ನಾಯಕ. 2020 ನವೆಂಬರ್ 26ರಿಂದ ಸಾವಿರಾರು ರೈತರು ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

 ಇದನ್ನೂ ಓದಿ: Disha Ravi Case: ರೈತರಿಗೆ ಬೆಂಬಲ ನೀಡುವುದು ಅಪರಾಧವಲ್ಲ: ಅರವಿಂದ ಕೇಜ್ರಿವಾಲ್