ಪೂಜಾ ಚೌವಾಣ್ ಆತ್ಮಹತ್ಯೆ ಪ್ರಕರಣ: ಮಹಾರಾಷ್ಟ್ರದ ಅರಣ್ಯ ಸಚಿವ ಸಂಜಯ್ ರಾಥೋಡ್ ರಾಜೀನಾಮೆ
Sanjay Rathod Resignation: ಟಿಕ್ಟಾಕ್ ಸ್ಟಾರ್ ಪೂಜಾ ಚೌವಾಣ್ ಆತ್ಮಹತ್ಯೆ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಸಂಜಯ್ ರಾಥೋಡ್ ಭಾನುವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮುಂಬೈ: ಮಹಾರಾಷ್ಟ್ರದ ಅರಣ್ಯ ಸಚಿವ ಸಂಜಯ್ ರಾಥೋಡ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಟಿಕ್ಟಾಕ್ ಸ್ಟಾರ್ ಪೂಜಾ ಚೌವಾಣ್ (22) ಆತ್ಮಹತ್ಯೆ ಪ್ರಕರಣದಲ್ಲಿ ಸಂಜಯ್ ಅವರ ಹೆಸರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ರಾಥೋಡ್ ರಾಜೀನಾಮೆ ನೀಡಿದ್ದಾರೆ. ಭಾನುವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸ ‘ವರ್ಷಾ ಬಂಗ್ಲೆ’ಯಲ್ಲಿ ಮಾತುಕತೆ ನಡೆಸಿದ ನಂತರ ರಾಥೋಡ್ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಉದ್ಧವ್ ಠಾಕ್ರೆ ನಿವಾಸದಲ್ಲಿ ನಡೆದ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಏಕ್ನಾಥ್ ಶಿಂಧೆ, ಸಾರಿಗೆ ಸಚಿವ ಅನಿಲ್ ಪರಬ್, ಪರಿಸರ ಸಚಿವ ಆದಿತ್ಯ ಠಾಕ್ರೆ ಭಾಗಿಯಾಗಿದ್ದರು.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಂಜಯ್ ರಾಥೋಡ್, ಮಹಿಳೆಯ ಸಾವಿನ ಪ್ರಕರಣದಲ್ಲಿ ಕೊಳಕು ರಾಜಕೀಯ ನಡೆಯುತ್ತಿದೆ. ನಿಷ್ಪಕ್ಷವಾದ ತನಿಖೆ ನಡೆದು ನಿಜ ಸಂಗತಿ ಹೊರಬರಲಿ ಎಂಬ ಕಾರಣದಿಂದಲೇ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.
ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ನಡೆಸಲಾಗುತ್ತಿದೆ. 30 ವರ್ಷಗಳ ಕಾಲ ಸಾಮಾಜಿಕ ಸೇವೆಯಿಂದ ನಾನು ಗಳಿಸಿದ ಒಳ್ಳೆಯ ಹೆಸರನ್ನು ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ವಿಪಕ್ಷಗಳು ಬಜೆಟ್ ಕಲಾಪಕ್ಕೆ ಅಡ್ಡಿಪಡಿಸುವ ಬೆದರಿಕೆಯೊಡ್ಡಿದೆ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಧಾನಸಭೆಯ ವಿಪಕ್ಷ ನಾಯಕ ದೇವೇಂದ್ರ ಫಡಣವಿಸ್, ಸಚಿವರ ರಾಜೀನಾಮೆ ಮಾತ್ರ ಸಾಕಾಗುವುದಿಲ್ಲ. ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
I’ve given my resignation to CM Uddhav Thackeray. The way opposition is warning that they won’t allow Assembly session to function, I’ve distanced myself from it. I want fair probe in case (in connection with death of a woman in Pune earlier this month): Shiv Sena’s Sanjay Rathod https://t.co/MTwcJ50HQ4 pic.twitter.com/vEsZtzvtoU
— ANI (@ANI) February 28, 2021
ಏನಿದು ಪ್ರಕರಣ? ಟಿಕ್ ಟಾಕ್ ಸ್ಟಾರ್ ಪೂಜಾ ಚೌವಾಣ್ ಫೆಬ್ರವರಿ 8ರಂದು ಪುಣೆಯ ಕಟ್ಟಡವೊಂದರಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ನಿವಾಸಿ 23ರ ಹರೆಯದ ಪೂಜಾ ಚೌವಾಣ್ ಆತ್ಮಹತ್ಯೆ ಪ್ರಕರಣದಲ್ಲಿ ಸಂಜಯ್ ಹೆಸರು ಕೇಳಿಬಂದಿತ್ತು. ಪೂಜಾ ಜತೆ ಸಂಜಯ್ಗೆ ಸಂಬಂಧವಿತ್ತು. ಅವರಿಬ್ಬರ ಫೋಟೊ, ಆಡಿಯೊ, ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಮಹಿಳೆಯ ಸಾವು ಪ್ರಕರಣ ಸಂಬಂಧ ಸಂಜಯ್ ರಾಥೋಡ್ ಅವರನ್ನು ವಿಚಾರಣೆಗೊಳಪಡಿಸಬೇಕು ಎಂದು ಬಿಜೆಪಿ ಒತ್ತಾಯಿಸಿತ್ತು.
ರಾಜೀನಾಮೆಗೆ ಒತ್ತಡ ಹೇರಿದ ಬಿಜೆಪಿ
ಮಹಾರಾಷ್ಟ್ರದಲ್ಲಿ ಮಾರ್ಚ್ 1ರಂದು ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಸಚಿವರು ರಾಜೀನಾಮೆ ನೀಡದೇ ಇದ್ದರೆ ಬಜೆಟ್ ಅಧಿವೇಶನಕ್ಕೆ ಅಡ್ಡಿಪಡಿಸುವುದಾಗಿ ಬಿಜೆಪಿ ಬೆದರಿಕೆಯೊಡ್ಡಿತ್ತು. ರಾಥೋಡ್ ಅವರ ರಾಜೀನಾಮೆ ಅಲ್ಲದೆ ಬೇರೇನನ್ನೂ ನಾವು ಸ್ವೀಕರಿಸುವುದಿಲ್ಲ. ಅವರು ರಾಜೀನಾಮೆ ನೀಡದೇ ಇದ್ದರೆ ನಾವು ವ್ಯಾಪಕ ಪ್ರತಿಭಟನೆ ನಡೆಸುತ್ತೇವೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಹೇಳಿದ್ದರು .
ಇದನ್ನೂ ಓದಿ: ಮಹಾರಾಷ್ಟ್ರ, ಕೇರಳ, ತೆಲಂಗಾಣದಲ್ಲಿ ರೂಪಾಂತರಿ ಕೊರೊನಾ ಸೋಂಕು ಖಚಿತ
Published On - 5:31 pm, Sun, 28 February 21