ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ ಹಿರಿಯ ಕಾಂಗ್ರೆಸ್​ ನಾಯಕ ಗುಲಾಂ ನಬಿ ಆಜಾದ್

Ghulam Nabi Azad: ಪ್ರಧಾನಿ ನರೇಂದ್ರ ಮೋದಿ ಇಂದಿಗೂ ತಮ್ಮನ್ನು ತಾವು ಹೆಮ್ಮೆಯಿಂದ ಚಾಯ್​ವಾಲಾ ಎಂದು ಕರೆದುಕೊಳ್ಳುತ್ತಾರೆ. ನಾವು ಎಷ್ಟು ಎತ್ತರಕ್ಕೆ ಏರಿದರೂ ನಮ್ಮ ಮೂಲ ಮರೆಯಬಾರದು ಎಂಬ ಪಾಠವನ್ನು ಪ್ರಧಾನಿಯಿಂದ ಕಲಿಯಬೇಕು ಎಂದು ಗುಲಾಂ ನಬಿ ಆಜಾದ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ ಹಿರಿಯ ಕಾಂಗ್ರೆಸ್​ ನಾಯಕ ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್

ಶ್ರೀನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್​ನ ಹಿರಿಯ ನಾಯಕ ಗುಲಾಂ ನಬಿ ಆಜಾದ್​ ‘ಹಿನ್ನೆಲೆ ಮರೆಯದ ಪ್ರಾಮಾಣಿಕ ನಾಯಕ’ ಎಂದು ಭಾನುವಾರ (ಫೆ.28) ಹೊಗಳಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ಮೂರು ದಿನಗಳ ಭೇಟಿ ನೀಡಿರುವ ಆಜಾದ್ ಅವರನ್ನು ಗುಜ್ಜಾರ್ ದೇಶ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಅವರು ‘ನಮ್ಮ ಹಿನ್ನೆಲೆಯನ್ನು ನಾವೆಂದೂ ಮರೆಮಾಚಬಾರದು. ಪ್ರಧಾನಿ ನರೇಂದ್ರ ಮೋದಿ ಇಂದಿಗೂ ತಮ್ಮನ್ನು ತಾವು ಹೆಮ್ಮೆಯಿಂದ ಚಾಯ್​ವಾಲಾ ಎಂದು ಕರೆದುಕೊಳ್ಳುತ್ತಾರೆ. ನಾವು ಎಷ್ಟು ಎತ್ತರಕ್ಕೆ ಏರಿದರೂ ನಮ್ಮ ಮೂಲ ಮರೆಯಬಾರದು ಎಂಬ ಪಾಠವನ್ನು ಪ್ರಧಾನಿಯಿಂದ ಕಲಿಯಬೇಕು. ಪ್ರಧಾನಿ ಮೋದಿ ಅವರೊಂದಿಗೆ ನನಗೆ ರಾಜಕೀಯವಾಗಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಆದರೂ ಅವರಲ್ಲಿರುವ ಒಳ್ಳೆಯ ಗುಣಗಳನ್ನು ಒಪ್ಪಿಕೊಳ್ಳಲು ನನಗೆ ಯಾವುದೇ ತಕರಾರಿಲ್ಲ. ಮೋದಿ ಅವರು ನೆಲಮಟ್ಟದ ನಾಯಕ’ ಎಂದು ಶ್ಲಾಘಿಸಿದರು.

‘ನಾನು ಸಣ್ಣ ಹಳ್ಳಿಯಿಂದ ಬಂದವನು ಎಂದು ನೆನಪಿಸಿಕೊಳ್ಳಲು ನನಗೆ ಹೆಮ್ಮೆಯಿದೆ. ನಮ್ಮ ಪ್ರಧಾನಿಯೂ ತಾವು ಹಳ್ಳಿಯಿಂದ ಬಂದವರು ಎಂದು ಹೇಳುತ್ತಿರುತ್ತಾರೆ. ತಮ್ಮ ತಾಯಿ ಬೇರೆಯವರ ಮನೆಗಳಲ್ಲಿ ಕೆಲಸ ಮಾಡಿದ್ದನ್ನು ಮತ್ತು ಸ್ವತಃ ತಾವು ಚಹ ಮಾರಿದ್ದನ್ನು ಪ್ರಧಾನಿ ನೆನಪಿಸಿಕೊಳ್ಳುತ್ತಾರೆ. ನಮ್ಮ ಹಿನ್ನೆಲೆಯನ್ನು ಪ್ರಾಮಾಣಿಕವಾಗಿ ಜಗತ್ತಿನ ಎದುರು ತೆರೆದಿಡುವುದು ಅಗತ್ಯ’ ಎಂದು ಹೇಳಿದರು.

‘ನಮ್ಮ ಹಿನ್ನೆಲೆಯ ಬಗ್ಗೆ ನಾವು ಗರ್ವದಿಂದ ಹೇಳಿಕೊಳ್ಳಬೇಕು. ನಮ್ಮ ಹಿನ್ನೆಲೆಯನ್ನು ಎಂದಿಗೂ ಮುಚ್ಚಿಡಬಾರದು. ನಾನು ಇಡೀ ಜಗತ್ತು ಸುತ್ತಿದ್ದೇನೆ. ಫೈವ್​ ಸ್ಟಾರ್, ಸೆವೆನ್ ಸ್ಟಾರ್ ಹೋಟೆಲ್​ಗಳಲ್ಲಿ ಉಳಿದುಕೊಂಡಿದ್ದೇನೆ. ಅವೆಲ್ಲವೂ ಈಗ ಹೋಗಿದೆ. ಆದರೆ ನನ್ನ ಊರು ನನಗೆ ಉಳಿದಿದೆ’ ಎಂದು ಭಾವುಕರಾಗಿ ನುಡಿದರು.

‘ಕೋವಿಡ್-19 ಲಾಕ್​ಡೌನ್, ಸಂವಿಧಾನದ 370ನೇ ವಿಧಿ ರದ್ದತಿ ನಂತರ ಜಮ್ಮು ಮತ್ತು ಕಾಶ್ಮೀರದ ಆರ್ಥಿಕ ಸ್ಥಿತಿಗತಿ ಹದಗೆಟ್ಟಿದೆ. ಇಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಮೂರು ಪಟ್ಟು ಹೆಚ್ಚು ವೇಗ, ಮೂರು ಪಟ್ಟು ಹೆಚ್ಚು ಅನುದಾನ ಬೇಕಿದೆ. ಇಲ್ಲೀಗ ಎಲ್ಲಿಯೂ ಕಾಮಗಾರಿಗಳು ನಡೆಯುತ್ತಿರುವುದು ಕಾಣಿಸುತ್ತಿಲ್ಲ. ಕೈಗಾಗಿರಿಕೆಗಳು ಮುಚ್ಚಿಹೋಗಿವೆ’ ಎಂದರು.

ಕಾಂಗ್ರೆಸ್​ ಪಕ್ಷದಲ್ಲಿ ಉನ್ನತ ನಾಯಕತ್ವ ಬದಲಾಗಬೇಕಿದೆ ಎಂದು ಶನಿವಾರ ಆಜಾದ್ ಸೇರಿದಂತೆ ಜಿ-23 ನಾಯಕರು ಬಲವಾಗಿ ಪ್ರತಿಪಾದಿಸಿದ್ದರು. ಕಾಂಗ್ರೆಸ್​ನಲ್ಲಿ ನಾಯಕತ್ವ ಬಲ ಕಳೆದುಕೊಳ್ಳುತ್ತಿದೆ. ಅದಕ್ಕೆ ಬಲತುಂಬಲು ನಾವು ಒಟ್ಟಾಗಿದ್ದೇವೆ ಎಂದಿದ್ದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಕಪಿಲ್ ಸಿಬಲ್, ಆನಂದ್ ಶರ್ಮ, ಭುಪಿಂದರ್ ಸಿಂಗ್ ಹೂಡ, ಮನೀಶ್ ತಿವಾರಿ, ವಿವೇಕ್ ಟಂಖ ಮತ್ತು ರಾಜ್​ ಬಬ್ಬರ್​ ಸೇರಿ ಹಲವು ಪಾಲ್ಗೊಂಡಿದ್ದರು.

ಅದು ಜಮ್ಮು ಕಾಶ್ಮೀರ ಆಗಿರಲಿ ಅಥವಾ ಲಡಾಖ್ ಆಗಿರಲಿ. ನಾವು ಎಲ್ಲಾ ಧರ್ಮಗಳನ್ನು, ಜನರನ್ನು ಮತ್ತು ಜಾತಿಗಳನ್ನು ಗೌರವಿಸುತ್ತೇವೆ. ನಾವು ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ. ಅದೇ ನಮ್ಮ ಶಕ್ತಿ ಮತ್ತು ಇದೇ ರೀತಿ ಮುಂದುವರಿಯುತ್ತೇವೆ ಎಂದು ಗುಲಾಮ್ ನಬಿ ಆಜಾದ್ ಹೇಳಿದ್ದರು.

ಕಾಂಗ್ರೆಸ್​ ಪಕ್ಷದ ರಾಷ್ಟ್ರೀಯ ನಾಯಕತ್ವದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಪತ್ರಬರೆದಿದ್ದ 23 ಮಂದಿಯ ಗುಂಪಿನಲ್ಲಿ ಗುಲಾಂ ನಬಿ ಆಜಾದ್ ಸಹ ಇದ್ದರು. ಈಚೆಗಷ್ಟೇ ರಾಜ್ಯಸಭೆಯಿಂದ ನಿವೃತ್ತರಾಗುವ ಆಜಾದ್ ನಿವೃತ್ತರಾಗಿದ್ದರು. 13 ನಿಮಿಷಗಳ ತಮ್ಮ ವಿದಾಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಆಜಾದ್ ಅವರ ಕೊಡುಗೆಗಳನ್ನು ನೆನೆದು ಕಣ್ಣೀರು ಹಾಕಿದ್ದರು.

ಕಾಶ್ಮೀರದಲ್ಲಿ 2007ರಲ್ಲಿ ಭಯೋತ್ಪಾದಕರ ದಾಳಿಗೆ ಸಿಲುಕಿದ್ದ ಗುಜರಾತ್​ ಪ್ರವಾಸಿಗರನ್ನು ವಾಪಸ್ ಕರೆತರಲು ಆಜಾದ್ ನೀಡಿದ್ದ ನೆರವನ್ನು ಪ್ರಧಾನಿ ನೆನಪಿಸಿಕೊಂಡಿದ್ದರು.

ಇದನ್ನೂ ಓದಿ: ಹಿಂದೂಸ್ತಾನಿ ಮುಸ್ಲಿಂ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ; ಗುಲಾಂ ನಬಿ ಆಜಾದ್

ಇದನ್ನೂ ಓದಿ: ವಿಪಕ್ಷ ನಾಯಕ ಗುಲಾಂ​ ನಬಿ ಆಜಾದ್​​ಗೆ ವಿದಾಯ: ಭಾಷಣದ ವೇಳೆ ಕಣ್ಣೀರಿಟ್ಟ ಪ್ರಧಾನಿ ನರೇಂದ್ರ ಮೋದಿ