Ghulam Nabi Azad: ಹಿಂದೂಸ್ತಾನಿ ಮುಸ್ಲಿಂ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ; ಗುಲಾಂ ನಬಿ ಆಜಾದ್

ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರನ್ನೂ ಸಹ ಸ್ಮರಿಸಿದ ಗುಲಾಂ ನಬೀ ಅಜಾದ್​, ‘ ಸಮಸ್ಯೆಗಳನ್ನು ಪರಿಹರಿಸಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕರೆದೊಯ್ಯುವ ನಾಯಕತ್ವ ಗುಣವನ್ನು ವಾಜಪೇಯಿಯವರಿಂದ ಕಲಿತದ್ದಾಗಿ ಹೇಳಿದರು.

Ghulam Nabi Azad: ಹಿಂದೂಸ್ತಾನಿ ಮುಸ್ಲಿಂ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ; ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್ (ಸಂಗ್ರಹ ಚಿತ್ರ)
guruganesh bhat

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 09, 2021 | 7:06 PM

ದೆಹಲಿ: ಪಾಕಿಸ್ತಾನದ ಮುಸ್ಲಿಂ ನಾಗರಿಕರ ಪರಿಸ್ಥಿತಿಗೆ ಹೋಲಿಸಿದರೆ ಭಾರತದಲ್ಲಿ ನೆಮ್ಮದಿಯಿದೆ. ಭಾರತದಲ್ಲಿ ಮುಸ್ಲಿಮನಾಗಿ ಹುಟ್ಟಿರುವ ಕುರಿತು ಹೆಮ್ಮೆಯಿದೆ. ಹಿಂದೂಸ್ತಾನಿ ಮುಸ್ಲಿಂ ಎಂದು ಹೇಳಿಕೊಳ್ಳಲು ನನಗೆ ಅಪಾರ ಹೆಮ್ಮೆಯಿದೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಹೇಳಿದರು. ಪಾಕಿಸ್ತಾನದಲ್ಲಿ ಹುಟ್ಟಲಿಲ್ಲ. ಜೀವಮಾನದಲ್ಲಿ ಪಾಕಿಸ್ತಾನಕ್ಕೆ ಹೋಗುವ ಪ್ರಸಂಗವೂ ಎದುರಾಗಲಿಲ್ಲ. ಹೀಗಾಗಿ ನಾನೊಬ್ಬ ಅದೃಷ್ಟವಂತ ಮುಸ್ಲಿಂ ಎಂದು ಗುಲಾಂ ನಬಿ ಆಜಾದ್ ತಮ್ಮನ್ನು ವ್ಯಾಖ್ಯಾನಿಸಿಕೊಂಡರು.

ಫೆಬ್ರುವರಿ 15ರಂದು ರಾಜ್ಯಸಭಾ ಸಂಸದನ ಸ್ಥಾನದಿಂದ ನಿವೃತ್ತರಾಗುತ್ತಿರುವ ಹಿರಿಯ ಕಾಂಗ್ರೆಸ್ ನಾಯಕ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್​ರನ್ನು ರಾಜ್ಯಸಭೆ ಅಪಾರ ಅಭಿಮಾನ, ಭಾವಪೂರ್ಣವಾಗಿ ಬೀಳ್ಕೊಟ್ಟಿತು. ಅವರ ಜತೆಗೆ ನಿವೃತ್ತರಾಗುತ್ತಿರುವ ಇತರ ಮೂವರು ಸಂಸದರಾದ ಜಮ್ಮು ಕಾಶ್ಮೀರದ ಶಮ್ಶೀರ್ ಸಿಂಗ್, ನಜೀರ್ ಅಹ್ಮದ್ ಲವೇ ಮತ್ತು ಮಹಮದ್ ಫಯಾಜ್​ರಿಗೂ ರಾಜ್ಯಸಭೆಯಿಂದ ಸಹ ಬೀಳ್ಕೊಡುಗೆ ನೀಡಲಾಯಿತು.

ಮಾಜಿ ಪ್ರಧಾನಿಗಳನ್ನು ಸ್ಮರಿಸಿದ ನಾಯಕ ತಮ್ಮ ವಿದಾಯ ಭಾಷಣದಲ್ಲಿ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಮತ್ತು ಅವರ ಪುತ್ರ ಸಂಜಯ್ ಗಾಂಧಿ ಅವರನ್ನು ಸ್ಮರಿಸಿದ 71 ವರ್ಷದ ಧುರೀಣ ಗುಲಾಂ ನಬಿ ಆಜಾದ್, ಈ ಇಬ್ಬರು ನಾಯಕರ ಮಾರ್ಗದರ್ಶನದಿಂದಲೇ ತಾವು ಉನ್ನತ ಸ್ಥಾನಕ್ಕೇರಲು ಸಾಧ್ಯವಾಯಿತು ಎಂದರು. ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರನ್ನು ಸಹ ಸ್ಮರಿಸಿದ ಗುಲಾಂ ನಬಿ ಅಜಾದ್​, ‘ ಸಮಸ್ಯೆಗಳನ್ನು ಪರಿಹರಿಸಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕರೆದೊಯ್ಯುವ ನಾಯಕತ್ವದ ಗುಣವನ್ನು ವಾಜಪೇಯಿ ಅವರಿಂದ ಕಲಿತದ್ದಾಗಿ ಹೇಳಿದರು. ವಿರೋಧ ಪಕ್ಷದ ಸದಸ್ಯರನ್ನು ಸಹ ವಾಜಪೇಯಿ ವಿಶ್ವಾಸದಿಂದ ನಡೆಸಿಕೊಳ್ಳುತ್ತಿದ್ದರು. ಇದು ಸಂಸತ್ ವ್ಯವಸ್ಥೆಗೆ ಅತಿ ಅವಶ್ಯಕ’ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಹ ಶ್ಲಾಘಿಸಿದ ಅವರು, ನಾವಿಬ್ಬರೂ ಎಷ್ಟೇ ವಾಗ್ಯುದ್ಧ ನಡೆಸಿದರೂ ನರೇಂದ್ರ ಮೋದಿ ವೈಯಕ್ತಿಕವಾಗಿ ಆರೋಪಗಳನ್ನು ಮಾಡಲಿಲ್ಲ. ಇದು ಉತ್ತಮ ರಾಜಕೀಯ ನಡೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅವಕಾಶ ಕೊಡದಿದ್ದರೆ ನಾವು ಕೊಡುತ್ತೇವೆ ಪಕ್ಷಬೇಧವಿಲ್ಲದೇ ಗುಲಾಂ ನಬೀ ಆಜಾದ್​ರ ಕೊಡುಗೆಗಳನ್ನು ರಾಜ್ಯಸಭಾ ಸಂಸದರು ಸ್ಮರಿಸಿದರು. ರಾಜ್ಯಸಭೆಗೆ ಗುಲಾಂ ನಬಿ ಆಜಾದ್​ರ ಅಗತ್ಯವಿದೆ, ‘ಒಂದುವೇಳೆ ಕಾಂಗ್ರೆಸ್ ಗುಲಾಂ ನಬೀ ಆಜಾದ್​ರನ್ನು ಮರಳಿ ರಾಜ್ಯಸಭೆಗೆ ಆರಿಸದಿದ್ದರೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷ (RPI) ಅವರನ್ನು ಮರಳಿ ರಾಜ್ಯಸಭೆಗೆ ಆಯ್ಕೆಮಾಡಲು ಸಿದ್ಧವಿದೆ’ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಮುಖ್ಯಸ್ಥ ರಾಮದಾಸ್ ಅಠಾವಳೆ ಘೋಷಿಸಿದರು.

Narendra Modi: ವಿಪಕ್ಷ ನಾಯಕ ಗುಲಾಂ​ ನಬೀ ಆಜಾದ್​​ಗೆ ವಿದಾಯ: ಭಾಷಣದ ವೇಳೆ ಕಣ್ಣೀರಿಟ್ಟ ಪ್ರಧಾನಿ ನರೇಂದ್ರ ಮೋದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada