ಕೇಂದ್ರ ಸರ್ಕಾರದೊಂದಿಗಿನ ಸೌಹಾರ್ದ ಸಂಬಂಧಕ್ಕೆ ತಮಿಳುನಾಡು ಅತ್ಯುತ್ತಮ ಉದಾಹರಣೆ: ನರೇಂದ್ರ ಮೋದಿ
PM Modi in Tamil Nadu: ಕೇಂದ್ರ ಸರ್ಕಾರದೊಂದಿಗಿನ ಸೌಹಾರ್ದಯುತ ಸಂಬಂಧಕ್ಕೆ ಉದಾಹರಣೆಯೇ ತಮಿಳುನಾಡು ಸರ್ಕಾರ ಎಂದು ಹೇಳಿದ ಮೋದಿ ರಾಜ್ಯದ ಜನರ ಅಭಿವೃದ್ಧಿಗಾಗಿ ನಾವು ಜತೆಯಾಗಿ ಕೆಲಸ ಮಾಡಿದ್ದೇವೆ ಎಂದಿದ್ದಾರೆ.
ಚೆನ್ನೈ: ವಿಧಾನಸಭೆ ಚುನಾವಣೆಗೆ ಸಿದ್ಧವಾಗಿರುವ ತಮಿಳುನಾಡಿಗೆ ಭೇಟಿ ನೀಡಿದ ನರೇಂದ್ರ ಮೋದಿ, ಕೇಂದ್ರ ಸರ್ಕಾರದೊಂದಿಗಿನ ಸೌಹಾರ್ದ ಸಂಬಂಧಕ್ಕೆ ತಮಿಳುನಾಡು ಅತ್ಯುತ್ತಮ ಉದಾಹರಣೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ರಾಜ್ಯದ ಅಭಿವೃದ್ಧಿಗಾಗಿ ಜತೆಯಾಗಿ ಕೆಲಸ ಮಾಡಿದ್ದೇವೆ. ಅಭಿವೃದ್ಧಿ ರಾಜಕೀಯ ಮತ್ತು ಉತ್ತಮ ಆಡಳಿತವನ್ನು ಮಾತ್ರ ನಾವು ಸ್ವೀಕರಿಸುತ್ತೇವೆ ಎಂದು ದೇಶದ ಜನರು ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ.
ಕೆಲವೇ ತಿಂಗಳಲ್ಲಿ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷ ಜತೆಯಾಗಿ ಚುನಾವಣೆ ಎದುರಿಸಲಿದೆ. ಎಐಎಡಿಎಂಕೆ ಪಕ್ಷವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಮೈತ್ರಿ ಪಕ್ಷವಾಗಿದೆ.
ಕೇಂದ್ರ ಸರ್ಕಾರದೊಂದಿಗಿನ ಸೌಹಾರ್ದಯುತ ಸಂಬಂಧಕ್ಕೆ ಉದಾಹರಣೆಯೇ ತಮಿಳುನಾಡು ಸರ್ಕಾರ ಎಂದು ಹೇಳಿದ ಮೋದಿ ರಾಜ್ಯದ ಜನರ ಅಭಿವೃದ್ಧಿಗಾಗಿ ನಾವು ಜತೆಯಾಗಿ ಕೆಲಸ ಮಾಡಿದ್ದೇವೆ. ಈ ವರ್ಷ ಇಲ್ಲಿ ಹೊಸ ಸರ್ಕಾರ ಬರಲಿದೆ. ಭಾರತದ ಇತಿಹಾಸದಲ್ಲಿನ ಸಂದಿಗ್ದ ಕಾಲದಲ್ಲಿ ಈಗ ಚುನಾವಣೆ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ದೇಶದ ಜನರು ಸಮರ್ಥವಾದ ಉತ್ತರವನ್ನು ನೀಡಿದ್ದಾರೆ. ಅಭಿವೃದ್ಧಿಗೆ ಪ್ರೋತ್ಸಾಹಿಸುವ ಸರ್ಕಾರ ಬೇಕು ಎಂದು ಅವರು ಹೇಳಿದ್ದಾರೆ.
Thank you Tamil Nadu for such a warm welcome!
On the way to the BJP rally in Coimbatore. Do watch. pic.twitter.com/JNR8YMR87v
— Narendra Modi (@narendramodi) February 25, 2021
ಮೋದಿ ಭಾಷಣದ ಮುಖ್ಯಾಂಶಗಳು ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಸಭೆಗಳು ‘ಭ್ರಷ್ಟಾಚಾರದ ಹ್ಯಾಕಥಾನ್’ ರೀತಿ ಇರುತ್ತದೆ. ಈ ಎರಡು ಪಕ್ಷಗಳು ಯಾವ ರೀತಿ ಲೂಟಿ ಮಾಡಬಹುದು ಎಂಬುದನ್ನು ಯೋಚಿಸುತ್ತವೆ ಎಂದು ಮೋದಿ ಹೇಳಿದ್ದಾರೆ. ಇತರ ಪಕ್ಷಗಳ ಬಗ್ಗೆ ಕಿಡಿ ಕಾರಿದ ಮೋದಿ, ವಿಪಕ್ಷಗಳ ರಾಜಕಾರಣವು ಕಿರುಕುಳ ಮತ್ತು ಲೇವಡಿ ಮಾಡುವುದಾಗಿದೆ. ಡಿಎಂಕೆ ಅಧಿಕಾರಕ್ಕೇರಿದಾಗಲೆಲ್ಲಾ ಅವರು ಪುರುಷ ಪ್ರಧಾನ ಸಂಸ್ಕೃತಿಯನ್ನು ಹೇರುತ್ತಾರೆ. ಈ ರೀತಿಯ ಸಂಸ್ಕೃತಿಯಲ್ಲಿ ಹೆಚ್ಚು ತೊಂದರೆಕ್ಕೀಡಾಗುವುದು ಯಾರು ಗೊತ್ತೇ? ತಮಿಳುನಾಡಿನ ಮಹಿಳೆಯರು. ಡಿಎಂಕೆ ಪಕ್ಷ ಅಮ್ಮ ಜಯಲಲಿತಾ ಜೀ ಅವರ ಜತೆ ಯಾವ ರೀತಿ ವರ್ತಿಸಿತ್ತು ಎಂಬುದು ಇಡೀ ರಾಜ್ಯಕ್ಕೆ ಗೊತ್ತು.
ನಮ್ಮ ಸರ್ಕಾರ ರೈತರ ಅಭಿವೃದ್ಧಿಗೆ ಬದ್ಧವಾಗಿದೆ. ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ ರೈತರು ಗೌರವದಿಂದ ಬಾಳಬೇಕು ಎಂದು ನಾವು ಬಯಸುತ್ತೇವೆ. ಮಧ್ಯವರ್ತಿಗಳನ್ನು ರೈತರು ಅವಲಂಬಿಸಬೇಕು ಎಂದು ನಾವು ಬಯಸುವುದಿಲ್ಲ
ವರ್ಷಗಳಿಂದ ಸಣ್ಣ ವ್ಯಾಪಾರಿಗಳು ಮತ್ತು ಸಣ್ಣ ಕೃಷಿಕರನ್ನು ಹಿಂದಿನ ಸರ್ಕಾರ ನಿರ್ಲಕ್ಷಿಸುತ್ತಾ ಬಂದಿದೆ. ಆದರೆ ಎನ್ಡಿಎ ಸರ್ಕಾರ ಈ ಎರಡೂ ವಿಭಾಗಗಳಿಗೆ ಆದ್ಯತೆ ನೀಡಿದೆ. ಭಾರತದ ಸಣ್ಣ ಕೃಷಿಕರೊಂದಿಗೆ ಕೆಲಸ ಮಾಡುವುದು ನಮಗೆ ಹೆಮ್ಮೆಯ ಸಂಗತಿ. ಕಳೆದ ಏಳು ವರ್ಷಗಳಿಂದ ಇವರ ಬದುಕು ಹಸನುಗೊಳಿಸಲು ನಾವು ಕೆಲಸ ಮಾಡಿದ್ದೇವೆ.
ವಿವಿಧ ಯೋಜನೆಗಳಿಗೆ ಶಂಕು ಸ್ಥಾಪನೆ
2×500 ಮೆಗಾವ್ಯಾಟ್ ನೈವೇಲಿ ಉಷ್ಣ ವಿದ್ಯುತ್ ಸ್ಥಾವರ ಸೇರಿದಂತೆ ಹಲವಾರು ಯೋಜನೆಗಳಿಗೆ ಮೋದಿ ಶಂಕುಸ್ಥಾಪನೆ ಮಾಡಿದ್ದಾರೆ. ಲಿಗ್ವೈಟ್ನಿಂದ ಕಾರ್ಯಪ್ರವೃತ್ತವಾಗುವ ವಿದ್ಯುತ್ ಸ್ಥಾವರವು 1000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ.
ಎನ್ಎಲ್ಸಿಐಎಲ್ ನ 709 ಮೆಗಾವ್ಯಾಟ್ ಸೌರ ಯೋಜನೆ ಮತ್ತು ತಿರುಪ್ಪೂರ್, ಮಧುರೈ, ತಿರುಚಿನಾಪಳ್ಳಿಯಲ್ಲಿ 4,000ಕ್ಕಿಂತ ಹೆಚ್ಚು ಜನರಿಗೆ ಜಮೀನು ನೀಡುವ ಯೋಜನೆಗೆ ಚಾಲನೆ ನೀಡಿದ್ದಾರೆ
ಇದನ್ನೂ ಓದಿ: PM Modi in Puducherry: ಭಾರತಕ್ಕೆ ವಿಶ್ವದರ್ಜೆಯ ಮೂಲ ಸೌಕರ್ಯಗಳ ಅಗತ್ಯವಿದೆ: ನರೇಂದ್ರ ಮೋದಿ