ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರ ತತ್ವದಡಿ ತೈಲ ಬೆಲೆ ಇಳಿಕೆ ಮಾಡಬೇಕಿದೆ: ಆರ್ಬಿಐ ಶಕ್ತಿಕಾಂತ್ ದಾಸ್
ಭಾರತೀಯ ರಿಸರ್ವ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಬಿಡುಗಡೆಗೊಳಿಸುವತ್ತ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದ ಶಕ್ತಿಕಾಂತ್ ದಾಸ್, ಇತ್ತೀಚಿಗೆ ಕ್ರಿಪ್ಟೋಕರೆನ್ಸಿಯತ್ತ ಜನರ ಆಸಕ್ತಿ ಗಮನಾರ್ಹವಾಗಿ ಬೆಳೆಯುತ್ತಿದೆ. ಹೀಗಾಗಿ, ಆರ್ಬಿಐ ಡಿಜಿಟಲ್ ಕರೆನ್ಸಿಯನ್ನು ಜಾರಿಗೆ ತರಲು ಸಿದ್ಧವಾಗುತ್ತಿದೆ ಎಂದು ತಿಳಿಸಿದರು.
ಮುಂಬೈ: ಗಗನಮುಖಿಯಾಗಿರುವ ತೈಲ ಬೆಲೆಗಳ ಮೇಲಿನ ತೆರಿಗೆ ಇಳಿಕೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾತ ತತ್ವದಡಿ ಕೆಲಸ ಮಾಡಬೇಕಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸಲಹೆ ನೀಡಿದ್ದಾರೆ. ಬಾಂಬೆ ಛೇಂಬರ್ ಆಫ್ ಕಾಮರ್ಸ್ನ 185ನೇ ಸಂಸ್ಥಾಪನಾ ದಿನ ಉದ್ದೇಶಿಸಿ ಮಾತನಾಡಿದ ಅವರು, ತೈಲಗಳ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರೋಕ್ಷ ತೆರಿಗೆಯನ್ನು ಸಂಗ್ರಹಿಸುವುದರಿಂದ ಇಬ್ಬರ ಸಹಭಾಗಿತ್ವದಲ್ಲಿ ಮಾತ್ರ ಬೆಲೆ ಇಳಿಕೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಯಪ್ರವೃತ್ತವಾಗುವ ಕುರಿತು ಅವರು ವಿಶ್ವಾಸ ವ್ಯಕ್ತಪಡಿಸಿದರು.
ತೈಲ ಬೆಲೆಗಳ ಹೆಚ್ಚಳ ಕೇವಲ ಕಾರ್, ಬೈಕ್ಗಳ ಬಳಕೆದಾರರ ಮೇಲಷ್ಟೇ ದುಷ್ಪರಿಣಾಮ ಬೀರುವುದಿಲ್ಲ. ಅವರ ಜತೆಗೆ ಉತ್ಪಾದನೆ, ಸರಕು ಸಾಗಣೆ ಮುಂತಾದ ವಲಯಗಳ ಮೇಲೂ ಕರಿ ನೆರಳು ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ತೈಲ ಬೆಲೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವೆ ರಾಜಕೀಯ ಹಗ್ಗಜಗ್ಗಾಟವಾಗಿ ಬಳಸಲ್ಪಡುತ್ತಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅಭಿಪ್ರಾಯಪಟ್ಟರು.
ಕೆಲ ಸಂದರ್ಭಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಪೆಟ್ರೊಲ್-ಡೀಸೆಲ್ ಬೆಲೆಯಲ್ಲಿ ಇಳಿಕೆ ಮಾಡಲು ಸಿದ್ಧವಿರುವುದಿಲ್ಲ. ಇಂತಹ ಪರಿಸ್ಥಿತಿಯ ಕುರಿತೂ ವಿವರಿಸಿದ ಅವರು, ಒಂದುವೇಳೆ ಹಾಗೇನಾದರೂ ಆದಲ್ಲಿ ಹಣದುಬ್ಬರದ ಮೇಲೂ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸಬೇಕು. ಉತ್ಪಾದನೆ, ಸರಕು ಸಾಗಣೆಯಂತಹ ವಲಯಗಳು ಜನಸಾಮಾನ್ಯರ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಬಲ್ಲವು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ತಿಳಿಸಿದರು.
ಡಿಜಿಟಲ್ ಕರೆನ್ಸಿಯತ್ತ ಗಮನಹರಿಸಿದ್ದೇವೆ ಭಾರತೀಯ ರಿಸರ್ವ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಬಿಡುಗಡೆಗೊಳಿಸುವತ್ತ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದ ಶಕ್ತಿಕಾಂತ್ ದಾಸ್, ಇತ್ತೀಚಿಗೆ ಕ್ರಿಪ್ಟೋಕರೆನ್ಸಿಯತ್ತ ಜನರ ಆಸಕ್ತಿ ಗಮನಾರ್ಹವಾಗಿ ಬೆಳೆಯುತ್ತಿದೆ. ಹೀಗಾಗಿ, ಆರ್ಬಿಐ ಡಿಜಿಟಲ್ ಕರೆನ್ಸಿಯನ್ನು ಜಾರಿಗೆ ತರಲು ಸಿದ್ಧವಾಗುತ್ತಿದೆ ಎಂದು ತಿಳಿಸಿದರು. ಕ್ರಿಪ್ಟೋಕರೆನ್ಸಿಗಳತ್ತ ಆಕರ್ಷಣೆ ಹೊಂದುತ್ತಿರುವ ಜನರಿಗೆ ಸ್ವತಃ ರಿಸರ್ವ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ತಂದಲ್ಲಿ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಹೀಗಾಗಿ, ರಿಸರ್ವ್ ಬ್ಯಾಂಕ್ ಸದ್ಯದಲ್ಲೇ ಡಿಜಿಟಲ್ ಕರೆನ್ಸಿ ಜಾರಿಗೆ ತರಲು ಯೋಜನೆ ರೂಪಿಸುತ್ತಿದೆ ಎಂದು ಅವರು ತಿಳಿಸಿದರು.
ಉತ್ಪಾದನಾ ವಲಯವು ದೇಶದ ಬೆಳವಣಿಗೆಯನ್ನು ವೃದ್ಧಿಸುವುದರತ್ತ ಗಮನಹರಿಸಿದೆ. ದೇಶದ ಎಂಎಸ್ಎಂಇ ವಲಯವೂ ಸಹ ಆರ್ಥಿಕ ಪುನಶ್ಚೇತರಿಕೆಯತ್ತ ದೇಶವನ್ನು ಎಳೆದೊಯ್ಯಲು ಕಾರ್ಯೋನ್ಮುಖವಾಗಿದೆ. ಆರೋಗ್ಯ ಕ್ಷೇತ್ರದಲ್ಲಿನ ಕೊರೊನಾ ನಂತರದ ಬೆಳವಣಿಗೆಗಳನ್ನು ವಿಶ್ಲೇಷಿಸಿದ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳು ಹೂಡಿಕೆ ಮಾಡುವ ಅವಶ್ಯಕತೆಯೂ ಎಂದಿಗಿಂತ ಇಂದು ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.
ಇತ್ತಚಿಗಷ್ಟೇ ಸಚಿವ ಧರ್ಮೇಂದ್ರ ಪ್ರಧಾನ್ ತೈಲ ಬೆಲೆ ಏರಿಕೆ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದರು. ಇಂಧನ ಬೆಲೆ ಏರಿಕೆಯ ಹಿಂದೆ 2 ಪ್ರಮುಖ ಕಾರಣಗಳಿದೆ. ಅಂತರರಾಷ್ಟ್ರೀಯ ಮಾರುಕಟ್ಟೆ ಇಂಧನ ಉತ್ಪಾದನೆಯನ್ನು ಕಡಿಮೆ ಮಾಡಿದ್ದು ಹಾಗೂ ಹೆಚ್ಚಿನ ಲಾಭ ಗಳಿಸಲು ತೈಲ ರಾಷ್ಟ್ರಗಳು ಕಡಿಮೆ ಇಂಧನ ಉತ್ಪಾದಿಸುತ್ತಿವೆ. ಇದರಿಂದ ಗ್ರಾಹಕ ದೇಶಗಳು ತೊಂದರೆ ಸಿಲುಕಿ ಒದ್ದಾಡುವಂತಾಗಿದೆ. ಭಾರತದಲ್ಲಿ ಇಂಧನ ಬೆಲೆ ಮೇಲೆ ಪರಿಣಾಮ ಬೀರುತ್ತಿರುವುದರಿಂದ, ಉತ್ಪಾದನೆ ಕಡಿತಗೊಳಿಸದಂತೆ ತೈಲ ರಫ್ತು ಮಾಡುವ ದೇಶಗಳ ಬಳಿ ಭಾರತ ಒತ್ತಾಯಿಸಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತೈಲ ಬೆಲೆ ಏರಿಕೆಗೆ ಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡ ನೇತೃತ್ವದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ JDSನಿಂದ ಪ್ರತಿಭಟನೆ
ಇದನ್ನೂ ಓದಿ: Petrol Diesel Price: ಏರುತ್ತಲೇ ಇದೆ ಪೆಟ್ರೋಲ್ ದರ.. ಬೆಲೆ ಏರಿಕೆ ಕಾರಣ ಬಿಚ್ಚಿಟ್ಟ ಸಚಿವ ಧರ್ಮೇಂದ್ರ ಪ್ರಧಾನ್
Published On - 6:27 pm, Thu, 25 February 21