ಹೈದರಾಬಾದ್ ಮೆಟ್ರೋದಲ್ಲಿ ಹೃದಯ ರವಾನೆ, ಕನ್ನಡಿಗ ವೈದ್ಯನ ನೇತೃತ್ವ
ಹೃದಯವನ್ನು ಏರ್ಲಿಫ್ಟ್ ಮಾಡಿರುವುದು ಕೇಳಿದ್ದೇವೆ, ಆ್ಯಂಬ್ಯುಲೆನ್ಸ್ನಲ್ಲಿ ರವಾನೆ ಮಾಡಿದ್ದು ನೋಡಿದ್ದೇವೆ ಆದರೆ ಮೊದಲ ಬಾರಿಗೆ ಮೆಟ್ರೋದಲ್ಲಿ ಹೃದಯ ರವಾನೆ ಮಾಡಿ ರೋಗಿಯ ಜೀವವನ್ನು ಉಳಿಸಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಕರ್ನಾಟಕದ ಧಾರವಾಡ ಮೂಲದ ವೈದ್ಯರ ಅಜಯ್ ಎಂಬುವವರು ಇದರ ನೇತೃತ್ವವಹಿಸಿದ್ದರು. ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ರೋಗಿಯ ಹೃದಯವನ್ನು ಮತ್ತೊಬ್ಬರಿಗೆ ಕಸಿ ಮಾಡಲಾಗಿದೆ.
ಹೈದರಾಬಾದ್ ಮೆಟ್ರೋದಲ್ಲಿ ದಾನಿಯ ಹೃದಯ ರವಾನೆ ಮಾಡಲಾಗಿದೆ. ಕೇವಲ 13 ನಿಮಿಷಗಳಲ್ಲಿ 13 ಕಿ.ಮೀ ದೂರವನ್ನು ಕ್ರಮಿಸುವ ರೀತಿಯಲ್ಲಿ ಹಸಿರು ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು. ಈ ಸಂಪೂರ್ಣ ಜವಾಬ್ದಾರಿಯನ್ನು ಕನ್ನಡಿಗ ವೈದ್ಯರೊಬ್ಬರು ಹೊತ್ತುಕೊಂಡಿದ್ದರು.
ಜನವರಿ 17 ರಂದು ಸಂಜೆ ಕಾರಿಡಾರ್ ಅನ್ನು ರಚಿಸಲಾಗಿದ್ದು, ಎಲ್‌ಬಿ ನಗರದ ಕಾಮಿನೇನಿ ಆಸ್ಪತ್ರೆಯಿಂದ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ದಾನಿಗಳ ಹೃದಯವನ್ನು ಸಾಗಿಸಲು ಅನುಕೂಲವಾಯಿತು, ಈ ಜೀವ ಉಳಿಸುವ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಸಮಯವನ್ನು ಉಳಿಸಲಾಗಿದೆ ಎಂದು ಹೈದರಾಬಾದ್ ಮೆಟ್ರೋ ರೈಲಿನ ಪ್ರಕಟಣೆ ತಿಳಿಸಿದೆ.
ಧಾರವಾಡ ಮೂಲದ ವೈದ್ಯ ಅಜಯ್ ಎಂಬುವವರು ಹೃದಯ ಸಾಗಿಸುವ ಕಾರ್ಯಾಚರಣೆಯ ಪ್ರಮುಖ ಭಾಗವಾಗಿದ್ದರು. ಅಪಘಾತದಲ್ಲಿ ಗಾಯಗೊಂಡಿದ್ದ 35 ವರ್ಷದ ವ್ಯಕ್ತಿಯ ಮೆದುಳು ನಿಷ್ಕ್ರಿಯಗೊಂಡಿದ್ದ ಹಿನ್ನೆಲೆಯಲ್ಲಿ ಅಂಗಾಂಗ ದಾನಕ್ಕೆ ಕುಟುಂಬ ಮುಂದಾಗಿತ್ತು. ಈ ವೇಳೆ ಗ್ಲೆನ್ ಗೆಲ್ಸ್ ಗ್ಲೋಬಲ್ ಆಸ್ಪತ್ರೆಯ ರೋಗಿಯೊಬ್ಬರಿಗೆ ಹೃದಯ ಬೇಕಿತ್ತು. ಹೃದಯ ಮತ್ತು ಶ್ವಾಸಕೋಶ ಕಸಿ ತಜ್ಞರಾಗಿರೋ ಡಾ. ಅಜಯ ಜೋಶಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಅವರ ಪತ್ನಿ ಡಾ. ನಂದಿನಿ ಸಹ ಹೈದರಾಬಾದ್ ನಲ್ಲಿ ಸ್ತ್ರಿರೋಗ ತಜ್ಞೆ.
ಮತ್ತಷ್ಟು ಓದಿ: ಬೆಂಗಳೂರು: ಬಾಲಕಿ ಜೀವ ಉಳಿಸಲು 13 ನಿಮಿಷದಲ್ಲಿ 14 ಕಿಮೀ ಕ್ರಮಿಸಿ ಹೃದಯ ರವಾನೆ
ಧಾರವಾಡ-ಹುಬ್ಬಳ್ಳಿಯಲ್ಲಿ ಶಿಕ್ಷಣ ಪೂರೈಸಿರುವ ಡಾ. ಅಜಯ್ ಬಳಿಕ ಯುಕೆಯಲ್ಲಿ ಶ್ವಾಸಕೋಶ ಮತ್ತು ಹೃದಯ ಕಸಿ ಚಿಕಿತ್ಸೆ ಕುರಿತು ಉನ್ನತ ಶಿಕ್ಷಣ ಪಡೆದಿದ್ದಾರೆ. ಹೈದರಾಬಾದ್ ನ ಗ್ಲೆನ್ ಗೆಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಹುಬ್ಬಳ್ಳಿ ನವನಗರದಲ್ಲಿ ಅವರ ಪೋಷಕರು ವಾಸವಿದ್ದಾರೆ. ಹೈದರಾಬಾದ್ ಮೆಟ್ರೋ ರೈಲು, ವೈದ್ಯಕೀಯ ತಂಡಗಳು ಮತ್ತು ಆಸ್ಪತ್ರೆಯ ಅಧಿಕಾರಿಗಳ ನಡುವಿನ ನಿಖರವಾದ ಸಮನ್ವಯದ ಮೂಲಕ ಜೀವ ಉಳಿಸುವ ಪ್ರಯತ್ನವನ್ನು ಸಾಧಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Sun, 19 January 25