Petrol Diesel Price: ಏರುತ್ತಲೇ ಇದೆ ಪೆಟ್ರೋಲ್ ದರ.. ಬೆಲೆ ಏರಿಕೆ ಕಾರಣ ಬಿಚ್ಚಿಟ್ಟ ಸಚಿವ ಧರ್ಮೇಂದ್ರ ಪ್ರಧಾನ್

Petrol Diesel Rate: ದರ ದರನೆ ಏರುತ್ತಿರುವ ಪೆಟ್ರೋಲ್, ಡೀಸೆಲ್​ ಬೆಲೆಯಿಂದಾಗಿ ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಜನ ಅಸಮಾಧಾನಕ್ಕೆ ಪರ್ಯಾಯ ಮಾರ್ಗ ಏನಿದೆ ಎಂಬು ಗೊಂದಲ ಉಂಟಾಗಿದೆ. ಈ ಕುರಿತಂತೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಕಾರಣ ನೀಡಿದ್ದಾರೆ.

  • ಹರೀಶ್
  • Published On - 10:21 AM, 22 Feb 2021
Petrol Diesel Price: ಏರುತ್ತಲೇ ಇದೆ ಪೆಟ್ರೋಲ್ ದರ.. ಬೆಲೆ ಏರಿಕೆ ಕಾರಣ ಬಿಚ್ಚಿಟ್ಟ ಸಚಿವ ಧರ್ಮೇಂದ್ರ ಪ್ರಧಾನ್
ಸಾಂದರ್ಭಿಕ ಚಿತ್ರ

ಬೆಂಗಳೂರು: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನೂರರ ಗಡಿ ದಾಟಿದೆ. ಪೆಟ್ರೋಲ್, ಡೀಸೆಲ್ ಬೆಲೆ ಕೈ ಸುಡುತ್ತಿದೆ. ಸವಾರರು ತೈಲ ಬೆಲೆ ಕೇಳಿ ಬೆಚ್ಚಿಬೀಳುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಗ್ರಾಹಕರ ಜೇಬಿಗೆ ಬಿಸಿ ತಾಗುತ್ತಿದೆ. ಮತ್ತೊಂದೆಡೆ ದಾಖಲೆ‌ ಮಟ್ಟದ ಬೆಲೆ ಏರಿಕೆಗೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಕಾರಣ ಕೊಟ್ಟಿದ್ದಾರೆ. ಈ ಮಧ್ಯೆ ಎಐಸಿಸಿ‌ ಅಧ್ಯಕ್ಷೆ ಸೋನಿಯಾ ಗಾಂಧಿ ಬೆಲೆ‌ ಏರಿಕೆ‌ ಸಂಬಂಧ ಪ್ರಧಾನಿಗೆ ಪತ್ರ ಬರೆದಿದ್ದು, ಆಕ್ರೋಶ ಹೊರಹಾಕಿದ್ದಾರೆ.

ತೈಲ ಹಾಗೂ ಗ್ಯಾಸ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಗ್ರಾಹಕರು ಕೇಂದ್ರಸರ್ಕಾರಕ್ಕೆ‌ ಹಿಡಿ ಶಾಪಹಾಕುತ್ತಿದ್ದಾರೆ. ಆದರೆ ಬೆಲೆ‌ ಏರಿಕೆ‌ ಬಗ್ಗೆ ಜನ ಕೇಳುತ್ತಿರುವ ಪ್ರಶ್ನೆಗೆ ಕೇಂದ್ರ ಸಚಿವರು ಉತ್ತರಿಸಲು ತಡಬಡಾಯಿಸುತ್ತಿದ್ದಾರೆ. ಈ ಮಧ್ಯೆ ಸಚಿವ ಧರ್ಮೇಂದ್ರ ಪ್ರಧಾನ್ ತೈಲ ಬೆಲೆ ಏರಿಕೆ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ.

ಬೆಲೆ ಏರಿಕೆ ಕಾರಣ ಬಿಚ್ಚಿಟ್ಟ ಕೇಂದ್ರ ಸಚಿವರು

ಇಂಧನ ಬೆಲೆ ಏರಿಕೆಯ ಹಿಂದೆ 2 ಪ್ರಮುಖ ಕಾರಣಗಳಿದೆ. ಅಂತರರಾಷ್ಟ್ರೀಯ ಮಾರುಕಟ್ಟೆ ಇಂಧನ ಉತ್ಪಾದನೆಯನ್ನು ಕಡಿಮೆ ಮಾಡಿದ್ದು ಹಾಗೂ ಹೆಚ್ಚಿನ ಲಾಭ ಗಳಿಸಲು ತೈಲ ರಾಷ್ಟ್ರಗಳು ಕಡಿಮೆ ಇಂಧನ ಉತ್ಪಾದಿಸುತ್ತಿವೆ. ಇದರಿಂದ ಗ್ರಾಹಕ ದೇಶಗಳು ತೊಂದರೆ ಸಿಲುಕಿ ಒದ್ದಾಡುವಂತಾಗಿದೆ. ಭಾರತದಲ್ಲಿ ಇಂಧನ ಬೆಲೆ ಮೇಲೆ ಪರಿಣಾಮ ಬೀರುತ್ತಿರುವುದರಿಂದ, ಉತ್ಪಾದನೆ ಕಡಿತಗೊಳಿಸದಂತೆ ತೈಲ ರಫ್ತು ಮಾಡುವ ದೇಶಗಳ ಬಳಿ ಭಾರತ ಒತ್ತಾಯಿಸಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ತೈಲ ಬೆಲೆ‌‌‌ ಏರಿಕೆ‌ ಬಗ್ಗೆ ಪ್ರಧಾನಿಗೆ ಸೋನಿಯಾ ಪತ್ರ
ತೈಲ ಹಾಗೂ ಅನಿಲ ದರ ಏರಿಕೆ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗರಂ ಆಗಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಜನರ ದುಃಖ ಹಾಗೂ ಸಂಕಟದಲ್ಲೂ ಲಾಭಗಳಿಸುತ್ತಿದೆ. ಎಂದು ಸೋನಿಯಾ ಗಾಂಧಿ ಗಂಭೀರ ಆರೋಪ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಅಸಮಾಧಾನ ಹೊರಹಾಕಿದ್ದಾರೆ. ಜಿಡಿಪಿ ಪಾತಾಳಕ್ಕೆ ಕುಸಿಯುತ್ತಿದ್ದು, ಬೆಲೆ ಏರಿಕೆಯಾಗುತ್ತಿರುವುದರ ಕುರಿತು ಕ್ರಮ ಕೈಗೊಳ್ಳುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. ಬೆಲೆ ಏರಿಕೆ ಹಿಂಪಡೆಯುವ ಮೂಲಕ ಮಧ್ಯಮ ವರ್ಗ ಮತ್ತು ವೇತನ ಪಡೆಯುವ ವರ್ಗ, ರೈತರು ಹಾಗೂ ಬಡವರಿಗೆ ಪ್ರಯೋಜನವಾಗುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : Petrol/Diesel Price: ಸತತ 13ನೇ ದಿನವೂ ಪೆಟ್ರೋಲ್ ದರ 39 ಪೈಸೆ ಹೆಚ್ಚಳ.. ಜನಸಾಮಾನ್ಯರ ಕೆಂಗಣ್ಣು

ಇದನ್ನೂ ಓದಿ : Petrol Price: ಪೆಟ್ರೋಲ್ ದರ ಮತ್ತೂ ಹೆಚ್ಚಬಹುದು, ಇದು ನನ್ನನ್ನು ಧರ್ಮಸಂಕಟಕ್ಕೆ ನೂಕಿದೆ: ನಿರ್ಮಲಾ ಸೀತಾರಾಮನ್​