ದೆಹಲಿ: ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮೇಲಿನ ಟೀಕೆಗೆ ಸಂಬಂಧಿಸಿದಂತೆ ಬಿಜೆಪಿ (BJP) ನೋಟಿಸ್‌ಗೆ ಪ್ರತಿಕ್ರಿಯೆ ನೀಡುವಂತೆ ರಾಹುಲ್ ಗಾಂಧಿಗೆ (Rahul Gandhi) ಸೂಚಿಸಲಾಗಿದೆ. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಕಾಂಗ್ರೆಸ್ ಸಂಸದರಿಂದ ವಿಶೇಷ ಹಕ್ಕು ಉಲ್ಲಂಘನೆ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಈ ನೋಟಿಸ್‌ಗೆ ರಾಹುಲ್ ಗಾಂಧಿ ಬುಧವಾರದೊಳಗೆ ಪ್ರತಿಕ್ರಿಯಿಸಬೇಕು ಎಂದು ಲೋಕಸಭೆಯ ಸಚಿವಾಲಯ ತಿಳಿಸಿದೆ. ಈ ವಾರದ ಆರಂಭದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಯಲ್ಲಿ ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿ ಬಿಲಿಯನೇರ್ ಗೌತಮ್ ಅದಾನಿ ಅವರೊಂದಿಗಿನ ಸಂಬಂಧವನ್ನು ಪ್ರಶ್ನಿಸಿದ್ದರು. 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅದಾನಿ ಸಂಪತ್ತು ಏರಿಕೆಯಾಗಿದೆ ಎಂದ ರಾಹುಲ್ ಗಾಂಧಿ ಆರೋಪಿಸಿದ್ದರು.
ಅವರ ಹೇಳಿಕೆಗಳು ಅವಹೇಳನಕಾರಿ, ಅಸಂಸದೀಯ ಮತ್ತು ದಾರಿತಪ್ಪಿಸುವಂತಿವೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನ ಮತ್ತು ಇತರ ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಅದಾನಿಯವರ ವ್ಯಾಪಾರ ಹಿತಾಸಕ್ತಿಗಳನ್ನು ಬಿಜೆಪಿ ಎತ್ತಿ ತೋರಿಸಿದೆ.
ಬುಧವಾರ ನಿಶಿಕಾಂತ್ ದುಬೆ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಗಾಂಧಿ ವಿರುದ್ಧ ಸವಲತ್ತು ಉಲ್ಲಂಘನೆಯ ನೋಟಿಸ್ ನೀಡಿದ್ದಾರೆ. ಯಾವುದೇ ಸಾಕ್ಷ್ಯಗಳಿಲ್ಲದೆ ಮೋದಿ ಮೇಲೆ ಆರೋಪ ಮಾಡಿರುವ ರಾಹುಲ್ ಸದನದ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ರಾಹುಲ್ ಗಾಂಧಿ “ತಮ್ಮ ಹೇಳಿಕೆಗಳನ್ನು ಬೆಂಬಲಿಸಲು ಯಾವುದೇ ಅಧಿಕೃತ ದಾಖಲೆಗಳನ್ನು ಸಲ್ಲಿಸಿಲ್ಲ. ಹಾಗಾಗಿ, ಯಾವುದೇ ಪುರಾವೆಗಳ ಅನುಪಸ್ಥಿತಿಯಲ್ಲಿ ಅವರು ಸದನವನ್ನು ದಾರಿತಪ್ಪಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ” ಎಂದಿದ್ದಾರೆ ದುಬೆ.
ಇದನ್ನೂ ಓದಿ: ವಿಚಿತ್ರವಾಗಿ ವರ್ತಿಸುತ್ತಿರುವ ಸರ್ಕಾರವನ್ನು ನಿಯಂತ್ರಿಸಿ: ಕೇಂದ್ರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಅವರ ಹೇಳಿಕೆಗಳು ತಪ್ಪುದಾರಿಗೆಳೆಯುವ, ಅವಹೇಳನಕಾರಿ, ಅಸಭ್ಯ, ಅಸಂಸದೀಯ, ಘನತೆರಹಿತ ಮತ್ತು ದೋಷಾರೋಪಣೆಯ ಸ್ವರೂಪದ್ದಾಗಿವೆ ಎಂದು ಬಿಜೆಪಿ ಸಂಸದರು ಹೇಳಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ನಿಯಮ 380 ರ ಅಡಿಯಲ್ಲಿ ರಾಹುಲ್ ಗಾಂಧಿಯವರ “ಅಸಂಸದೀಯ, ಅಪ್ರಾಮಾಣಿಕ ಆರೋಪಗಳನ್ನು” ಸದನದ ಕಲಾಪದಿಂದ ತೆಗೆದುಹಾಕಬೇಕು ಎಂದು ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ.
ರಾಹುಲ್ ಗಾಂಧಿ ಭಾಷಣದಲ್ಲಿನ ಕೆಲವು ಭಾಗಗಳನ್ನು ಸಂಸತ್ ದಾಖಲೆಯಿಂದ ತೆಗೆದು ಹಾಕಿದ್ದು, ಇದಕ್ಕೆ ಕಾಂಗ್ರೆಸ್ ತೀವ್ರ ಪ್ರತಿಭಟನೆ ನಡೆಸಿತ್ತು. ಲೋಕಸಭೆಯಲ್ಲಿ “ಪ್ರಜಾಪ್ರಭುತ್ವವನ್ನು ದಫನ ಮಾಡಲಾಗಿದೆ ಎಂದು ಕಾಂಗ್ರೆಸ್ ಪ್ರತಕ್ರಿಯಿಸಿತ್ತು. ಸಂಸತ್ತಿನ ಉಭಯ ಸದನಗಳಲ್ಲಿ ಮುಕ್ತ, ಸ್ಪಷ್ಟ ಮತ್ತು ನಿರ್ಭೀತ ಚರ್ಚೆಗೆ ಅವಕಾಶ ನೀಡದ ಹೊರತು, ಪ್ರಜಾಪ್ರಭುತ್ವವು ಮೂಲಭೂತವಾಗಿ ಮತ್ತು ಬದಲಾಯಿಸಲಾಗದಂತೆ ಹಾನಿಗೊಳಗಾಗುತ್ತದೆ ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ