‘ಅಯೋಧ್ಯಾ ಸಿರ್ಫ್ ಝಾಂಕಿ ಹೈ, ಕಾಶಿ ಹೌರ್ ಮಥುರಾ ಬಾಕಿ ಹೈ,’ ಅಂತ 2019ರ ನವೆಂಬರ್ 9 ರಂದು ಸುಪ್ರೀಂಕೋರ್ಟ್ ಅಯೋಧ್ಯೆಯ ಮಂದಿರ-ಮಸೀದಿ ಜಾಗದ ಬಗ್ಗೆ ತೀರ್ಪು ನೀಡಿದ ಬಳಿಕ ಹಿಂದು ಕಾರ್ಯಕರ್ತರು ಘೋಷಣೆ ಕೂಗಿದ್ದರು. ಅವರ ಮಾತಿನ ಅರ್ಥ ಅಯೋಧ್ಯೆ ಬರೀ ಟೀಸರ್ ಮಾತ್ರ, ಕಾಶಿ ಮತ್ತು ಮಥುರಾ ಬಾಕಿ ಇವೆ. ಮಥುರಾ, ಅಯೋಧ್ಯೆ ಮತ್ತು ಕಾಶೀ ದೇವಾಲಯಗಳ ಪಕ್ಕದಲ್ಲೇ ಇರುವ ಮಸೀದಿಗಳನ್ನು ತೆರವುಗೊಳಿಸಬೇಕು, ದೇವಾಲಯದ ಜಾಗವನ್ನು ಮೊಘಲರ ಕಾಲದಲ್ಲಿ ಕಬಳಿಸಿ ಮಸೀದಿ ನಿರ್ಮಿಸಲಾಗಿದೆ ಎನ್ನುವ ಆರೋಪ, ವಾದ ಬಹಳ ಹಿಂದಿನಿಂದಲೂ ಇದೆ. 2019ರಲ್ಲಿ ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಅಯೋಧ್ಯೆಯ ಮಂದಿರ-ಮಸೀದಿ ವಿವಾದ ಬಗೆಹರಿದಿದೆ. ಈಗಾಗಲೇ ಕಾಶೀ ವಿಶ್ವನಾಥ ದೇವಾಲಯದ ಪಕ್ಕದಲ್ಲೇ ಇರುವ ಗ್ಯಾನವ್ಯಾಪಿ ಮಸೀದಿಯನ್ನು ತೆರವುಗೊಳಿಸಬೇಕು. ಮಸೀದಿಯ ಜಾಗ ಸಂಪೂರ್ಣವಾಗಿ ಕಾಶೀ ವಿಶ್ವನಾಥ ದೇವಾಲಯಕ್ಕೆ ಸೇರಿದ್ದೆಂದು ವಾರಾಣಾಸಿಯ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯ ಆಧಾರದ ಮೇಲೆ ವಾರಾಣಾಸಿಯ ಸಿವಿಲ್ ಕೋರ್ಟ್ ಮಸೀದಿ ಜಾಗದ ಉತ್ಖನನಕ್ಕೆ ಪುರಾತತ್ವ ಇಲಾಖೆಗೆ ಆದೇಶ ನೀಡಿದೆ.
ಕಾಶಿ ವಿಶ್ವನಾಥ್ ದೇವಾಲಯದಂತೆ ವಿವಾದ ಇರುವ ಮತ್ತೊಂದು ಧಾರ್ಮಿಕ ಸ್ಥಳ, ಮಥುರಾದ ಕೃಷ್ಣಜನ್ಮಸ್ಥಾನ ಹಾಗೂ ಶಾಹಿ ಇಮಾಮ್ ಈದ್ಗಾ ಮಸೀದಿ ವಿವಾದ. ಉತ್ತರ ಪ್ರದೇಶದ ಮಥುರಾ, ಭಗವಾನ್ ಶ್ರೀಕೃಷ್ಣನ ಜನ್ಮಸ್ಥಳ. ಆದರೆ, ಕೃಷ್ಣ ಜನ್ಮಸ್ಥಳದ ಪಕ್ಕದಲ್ಲೇ ಈಹ ಶಾಹಿ ಇಮಾಮ್ ಈದ್ಗಾ ಮಸೀದಿ ಇದೆ. ಮೊಘಲ್ ದೊರೆ ಔರಂಗಜೇಬ್ ಕೃಷ್ಣ ಜನ್ಮಸ್ಥಳದ ದೇವಾಲಯವನ್ನ ಆಕ್ರಮಿಸಿ, ಅಲ್ಲಿಯೇ ಮಸೀದಿ ನಿರ್ಮಿಸಿದ್ದಾನೆ ಎನ್ನುವ ಆರೋಪ ಇದೆ. ಈಗ ಅಯೋಧ್ಯೆಯ ಮಸೀದಿ ಜಾಗವನ್ನು ರಾಮಮಂದಿರ ನಿರ್ಮಾಣಕ್ಕೆ ನೀಡಿದಂತೆ, ಮಥುರಾದ ಶಾಹಿ ಇಮಾಮ್ ಈದ್ಗಾ ಮಸೀದಿ ಜಾಗವನ್ನು ಕೃಷ್ಣ ಜನ್ಮಸ್ಥಳದ ದೇವಾಲಯಕ್ಕೆ ನೀಡಬೇಕೆಂದು 2019ರ ಡಿಸೆಂಬರ್ ನಲ್ಲೇ ಮಥುರಾದ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.
ಮಹಾಭಾರತದ ಕಥೆಯ ಪ್ರಕಾರ, ಕಂಸ ದೊರೆಗೆ ತನ್ನ ಸೋದರಿಯ 8ನೇ ಮಗನಿಂದಲೇ ಸಾವು ಬರುತ್ತೆ ಎನ್ನುವುದು ಮೊದಲೇ ಗೊತ್ತಿತ್ತು. ಹೀಗಾಗಿ ತನ್ನ ಸೋದರಿ ದೇವಕಿ ಹಾಗೂ ಆಕೆಯ ಪತಿ ವಾಸುದೇವನನ್ನು ಜೈಲಿನಲ್ಲಿ ಕೂಡಿಟ್ಟಿದ್ದ. ದೇವಕಿಗೆ ಹುಟ್ಟಿದ್ದ ಆರು ಮಕ್ಕಳನ್ನು ಹತ್ಯೆಗೈದಿದ್ದ. ಆದರೇ, ಏಳು ಮತ್ತು ಎಂಟನೇ ಮಕ್ಕಳಾದ ಬಲರಾಮ್ ಹಾಗೂ ಶ್ರೀಕೃಷ್ಣನನ್ನು ಹತ್ಯೆ ಮಾಡಲು ಸಾಧ್ಯವಾಗಲಿಲ್ಲ. ದೇವಕಿ ಮತ್ತು ವಾಸುದೇವರನ್ನು ಯಮುನಾ ನದಿಯ ದಡದಲ್ಲಿರುವ ಜೈಲಿನಲ್ಲಿ ಕೂಡಿಡಲಾಗಿತ್ತು. ಆ ಜೈಲಿನ ಜಾಗದ ಪಕ್ಕದಲ್ಲೇ ಶಾಹಿ ಇಮಾಮ್ ಈದ್ಗಾ ಮಸೀದಿ ಇದೆ ಎನ್ನಲಾಗಿದೆ.
ಹಿಂದೂಗಳಿಗೆ ಅಯೋಧ್ಯೆಯ ರಾಮಜನ್ಮ ಭೂಮಿ ಪವಿತ್ರ ಸ್ಥಳದಂತೆಯೇ ಮಥುರಾದ ಶ್ರೀ ಕೃಷ್ಣ ಜನ್ಮಸ್ಥಳ ಕೂಡ ಪವಿತ್ರ ಸ್ಥಳ. ಹಿಂದೂಗಳ ಪ್ರಕಾರ, ಶ್ರೀಕೃಷ್ಣ ಜನ್ಮ ಸ್ಥಳ 13.37 ಎಕರೆ ಭೂಪ್ರದೇಶವನನ್ನು ಆಕ್ರಮಿಸಿತ್ತು. ಮೊಘಲ್ ದೊರೆ ಔರಂಗಜೇಬ್ 1658 ರಿಂದ 1707ರವರೆಗೆ ಭಾರತವನ್ನಾಳಿದ್ದ. ಆ ಅವಧಿಯಲ್ಲೇ ಹಿಂದೂ ದೇವಾಲಯಗಳ ನಾಶಕ್ಕೆ ಆದೇಶವನ್ನೂ ಹೊರಡಿಸಿದ್ದ. 1669-70ರಲ್ಲಿ ಔರಂಗಜೇಬ್ ಸೈನ್ಯ ಶ್ರೀಕೃಷ್ಣ ಜನ್ಮಸ್ಥಳದಲ್ಲಿದ್ದ ಕೇಶವ ದೇವ ದೇವಾಲಯವನ್ನು ನಾಶಪಡಿಸಿತು. ಅದೇ ಸ್ಥಳದಲ್ಲಿ ಈದ್ಗಾ ಮಸೀದಿಯನ್ನು ಅವನು ನಿರ್ಮಿಸಿದ.
1770 ರಲ್ಲಿ ಮರಾಠರು, ಮೊಘಲರನ್ನು ಸೋಲಿಸಿದರು. ಆಗ ಮಥುರಾದಿಂದ ಮೊಘಲರನ್ನು ಹೊರ ಹಾಕಿ, ಶ್ರೀಕೃಷ್ಣ ಜನ್ಮಸ್ಥಳದಲ್ಲಿ ದೇವಾಲಯ ನಿರ್ಮಿಸಿದ್ದರು. ಆದರೆ, 1803 ರಲ್ಲಿ ಮರಾಠರನ್ನು ಬ್ರಿಟಿಷರು ಸೋಲಿಸಿದರು. ಈಸ್ಟ್ ಇಂಡಿಯಾ ಕಂಪನಿಯು 1815 ರಲ್ಲಿ 13.37 ಎಕರೆ ಜಾಗವನ್ನು ಹರಾಜು ಹಾಕಿತು. ಆಗ ಬನಾರಸ್‌ನ ರಾಜ ಪಟಾನಿ ಮಾಲ್ ಈ ಜಾಗ ಖರೀದಿಸಿದರು . ಬಳಿಕ ಈ ಜಾಗ ಹಿಂದೂ-ಮುಸ್ಲಿಂರ ನಡುವಿನ ವಿವಾದವಾಗಿ ಕೋರ್ಟ್ ಮೆಟ್ಟಿಲೇರಿತ್ತು. 1932ರಲ್ಲಿ ಅಲಹಾಬಾದ್ ಹೈಕೋರ್ಟ್, ಜಾಗವು ಬನಾರಸ್‌ನ ರಾಜ ಪಟಾನಿ ಮಾಲ್ ಗೆ ಸೇರಿದ್ದು ಎಂದು ಆದೇಶ ನೀಡಿತ್ತು. 1944 ರಲ್ಲಿ ರಾಜ ಪಟಾನಿ ಮಾಲ್ ವಂಶಸ್ಥರು ಶ್ರೀಕೃಷ್ಣ ಜನ್ಮಸ್ಥಳವನ್ನು 13,400 ರೂಪಾಯಿಗೆ ಹಿಂದೂ ಮಹಾಸಭಾಗೆ ಮಾರಾಟ ಮಾಡಿದ್ದರು.
ಹಿಂದೂ ಮಹಾಸಭಾದ ಮದನ್ ಮೋಹನ್ ಮಾಳವಿಯಾ, ಗೋಸ್ವಾಮಿ ಗಣೇಶ್ ದತ್ತಾ, ಬೀಕೇನ್ ಲಾಲ್‌ಜೀ ಅತ್ರೆ ಈ ಜಾಗ ಖರೀದಿಸಿದ್ದರು. ಈ ಜಾಗ ಖರೀದಿಗೆ ಉದ್ಯಮಿ ಬಿರ್ಲಾ ಕುಟುಂಬದ ಜುಗಲ್ ಕಿಶೋರ್ ಬಿರ್ಲಾ ಹಣ ನೀಡಿದ್ದರು. 1951 ರಲ್ಲಿ ಬಿರ್ಲಾ ಅವರೇ, ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ಸ್ಥಾಪಿಸಿದ್ದರು. ಸದರಿ ಜಾಗವನ್ನು ಈ ಟ್ರಸ್ಟ್ಗೆ ವರ್ಗಾವಣೆ ಮಾಡಲಾಗಿತ್ತು. ಜುಗಲ್ ಕಿಶೋರ್ ಬಿರ್ಲಾ ಅವರಿಗೆ ಇಲ್ಲೇ ಭವ್ಯ ಶ್ರೀಕೃಷ್ಣ ಮಂದಿರ ಕಟ್ಟುವ ಉದ್ದೇಶವಿತ್ತಾದರೂ ಅದು ಸಾಧ್ಯವಾಗಲಿಲ್ಲ. 1958ರಲ್ಲಿ ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ವಿಸರ್ಜನೆಯಾಯಿತು. ಬಳಿಕ 1958ರಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನ ಸಂಘ ರಚನೆಯಾಯಿತು.
ಇದಾದ ಬಳಿಕ ಹಿಂದೂ-ಮುಸ್ಲಿಂರ ನಡುವೆ ಜಾಗದ ಮಾಲೀಕತ್ವಕ್ಕಾಗಿ ಅನೇಕ ಸುತ್ತಿನ ಮಾತುಕತೆಗಳು ನಡೆದವು. 1968 ರಲ್ಲಿ ಕೋರ್ಟ್ ನಲ್ಲಿ ಪರಸ್ಪರ ಒಪ್ಪಂದಕ್ಕೆ ಬಂದ ನಂತರ 1974ರಲ್ಲಿ ಕೋರ್ಟ್ ಆದೇಶ ನೀಡಿತ್ತು. ಈ ರಾಜಿ ಸಂಧಾನದ ಪ್ರಕಾರ, ಶ್ರೀಕೃಷ್ಣ ಜನ್ಮಸ್ಥಳ ಸೇವಾ ಸಂಘ ಹಾಗೂ ಶಾಹೀ ಇಮಾಮ್ ಈದ್ಗಾ ಮಸೀದಿಯ ಉಸ್ತುವಾರಿ ಹೊತ್ತವರು ಪರಸ್ಪರರ ಜಾಗದಿಂದ ದೂರ ಇರಬೇಕೆಂದು ತೀರ್ಮಾನವಾಗಿತ್ತು.
ಹಿಂದೂಗಳ ಪ್ರಕಾರ, ಮಥುರಾ ಶ್ರೀಕೃಷ್ಣ ಜನ್ಮಸ್ಥಳದಲ್ಲಿ ಯಾವುದೇ ಮಸೀದಿಯೂ 1915ರವರೆಗೆ ಇರಲಿಲ್ಲ. ಈ ಜಾಗವು ವಕ್ಛ್ ಜಾಗವೂ ಅಲ್ಲ.
ಮಥುರಾದ ಶಾಹೀ ಇಮಾನ್ ಈದ್ಗಾ ಮಸೀದಿ ಜಾಗವನ್ನು ದೇವಾಲಯಕ್ಕೆ ಬಿಟ್ಟುಕೊಡಬೇಕೆಂದು ಅನೇಕ ಬಾರಿ ಕೋರ್ಟ್ ಗೆ ಹಿಂದೂಗಳು ಅರ್ಜಿ ಸಲ್ಲಿಸಿದ್ದಾರೆ. 1993 ರಲ್ಲೂ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು. 2019ರಲ್ಲಿ ಅಯೋಧ್ಯೆಯ ತೀರ್ಪು ಬಂದ ಬಳಿಕವೂ ಮಥುರಾ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಯಾವುದೂ ತಾರ್ಕಿಕ ಅಂತ್ಯ ಕಂಡಿಲ್ಲ. 2019ರ ಡಿಸೆಂಬರ್ ನಲ್ಲಿ ತಾವು ಶ್ರೀಕೃಷ್ಣನ ಸ್ನೇಹಿತ ಎಂದು ವಕೀಲರೊಬ್ಬರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಕೋರ್ಟ್ ಈ ಅರ್ಜಿಯನ್ನು ಮಾನ್ಯ ಮಾಡಲಿಲ್ಲ.
ಅಯೋಧ್ಯೆಯಂತೆಯೇ ಮಥುರಾದ ಶ್ರೀಕೃಷ್ಣ ಜನ್ಮಸ್ಥಳ ಹಾಗೂ ಕಾಶೀ ವಿಶ್ವನಾಥ್ ದೇವಾಲಯದ ಪಕ್ಕದಲ್ಲೇ ಇರುವ ಮಸೀದಿಗಳನ್ನು ತೆರವುಗೊಳಿಸಬೇಕು ಎಂಬ ಹಿಂದೂಗಳ ಬೇಡಿಕೆ ಶತಮಾನಗಳಿಂದಲೂ ಇದೆ. ಈಗ ಕಾಶೀ ವಿಶ್ವನಾಥ್ ದೇವಾಲಯದ ಪಕ್ಕದ ಗ್ಯಾನವಾಪಿ ಮಸೀದಿಯ ಕೆಳಭಾಗದಲ್ಲಿ ದೇವಾಲಯದ ಅವಶೇಷಗಳು ಇವೆಯೇ ಹೇಗೆ ಎನ್ನುವ ಬಗ್ಗೆ ಉತ್ಖನನ ನಡೆಸಲು ವಾರಾಣಾಸಿಯ ಸಿವಿಲ್ ಕೋರ್ಟ್ ಭಾರತೀಯ ಪುರಾತತ್ವ ಇಲಾಖೆಗೆ ಆದೇಶ ನೀಡಿದೆ.
ಈ ಉತ್ಖನನದ ವೇಳೆ ಏನಾದರೂ, ಗ್ಯಾನವಾಪಿ ಮಸೀದಿ ಕೆಳಭಾಗದಲ್ಲಿ ದೇವಾಲಯದ ಅವಶೇಷ ಪತ್ತೆಯಾದರೆ, ಮಸೀದಿಯನ್ನು ದೇವಾಲಯಕ್ಕೆ ಬಿಟ್ಟುಕೊಡಬೇಕೆಂಬ ಕೂಗಿಗೆ ಮತ್ತಷ್ಟು ಬಲ ಸಿಗಲಿದೆ. ಹೀಗಾಗಿ ಗ್ಯಾನವ್ಯಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಇಲಾಖೆ ನಡೆಸುವ ಉತ್ಖನನ ಭಾರಿ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ಹಂಪಿಯಿಂದ ಅಯೋಧ್ಯೆಗೆ ಸಾಗಲಿದೆ ರಾಮನ ಪಾದುಕೆ ರಥಯಾತ್ರೆ: 12 ವರ್ಷದ ಬಳಿಕ ರಾಮನಿಗೆ ಪಾದುಕೆ ಅರ್ಪಣೆ
Published On - 8:57 pm, Sat, 10 April 21