ಹಂಪಿಯಿಂದ ಅಯೋಧ್ಯೆಗೆ ಸಾಗಲಿದೆ ರಾಮನ ಪಾದುಕೆ ರಥಯಾತ್ರೆ: 12 ವರ್ಷದ ಬಳಿಕ ರಾಮನಿಗೆ ಪಾದುಕೆ ಅರ್ಪಣೆ
ಶ್ರೀ ಹನುಮದ್ ಜನ್ಮಸ್ಥಳ ಪಂಪಾ ಕ್ಷೇತ್ರ ಕಿಷ್ಕಿಂದಾದಲ್ಲಿ ನಿರ್ಮಾಣವಾಗಲಿರುವ ಬೃಹತ್ ಶ್ರೀ ಹನುಮದ್ ಜನ್ಮಭೂಮಿ ಮಂದಿರ ಹಾಗೂ 215 ಮೀಟರ್ ಅತಿ ಎತ್ತರದ ಹನುಮಂತನ ಭಕ್ತಿ ವೈಭವ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಈ ರಥಯಾತ್ರೆ ಮೂಲಕ ನಿಧಿ ಸಂಗ್ರಹ ಕಾರ್ಯ ಕೂಡ ನಡೆಸಲಾಗುತ್ತಿದೆ.
ಬಳ್ಳಾರಿ: ಅಯೋಧ್ಯೆಯ ರಾಮನ ಪಾದುಕೆ ಹೊತ್ತ ಪವಿತ್ರ ರಥಯಾತ್ರೆ ದಕ್ಷಿಣಕಾಶಿ ಖ್ಯಾತಿಯ ಹಂಪಿಯಿಂದ ನಾಳೆ (ಫೆಬ್ರವರಿ 15) ಆರಂಭವಾಗಲಿದೆ. ಹಂಪಿಯ ತುಂಗಭದ್ರಾ ನದಿ ತಟದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥಯಾತ್ರೆಗೆ ಚಾಲನೆ ನೀಡಲಾಗುತ್ತಿದೆ. ಶ್ರೀ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್, ಗೋವಿಂದಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ರಾಮನ ಪಾದುಕೆ ರಥ ಹಂಪಿ ಕ್ಷೇತ್ರದಿಂದ ಆರಂಭಗೊಂಡು ಸುಮಾರು ಹನ್ನೆರಡು ವರ್ಷಗಳ ಕಾಲ ದೇಶದ ಬಹುತೇಕ ರಾಜ್ಯಗಳಲ್ಲಿ ಸಂಚರಿಸಿ ಬಳಿಕ ರಾಮನಿಗೆ ಪಾದುಕೆ ಅರ್ಪಣೆ ಕಾರ್ಯ ನಡೆಯಲಿದೆ.
ಶ್ರೀ ಹನುಮದ್ ಜನ್ಮಸ್ಥಳ ಪಂಪಾ ಕ್ಷೇತ್ರ ಕಿಷ್ಕಿಂದಾದಲ್ಲಿ ನಿರ್ಮಾಣವಾಗಲಿರುವ ಬೃಹತ್ ಶ್ರೀ ಹನುಮದ್ ಜನ್ಮಭೂಮಿ ಮಂದಿರ ಹಾಗೂ 215 ಮೀಟರ್ ಅತಿ ಎತ್ತರದ ಹನುಮಂತನ ಭಕ್ತಿ ವೈಭವ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಈ ರಥಯಾತ್ರೆ ಮೂಲಕ ನಿಧಿ ಸಂಗ್ರಹ ಕಾರ್ಯ ಕೂಡ ನಡೆಸಲಾಗುತ್ತಿದೆ. ದುಬಾರಿ ವೆಚ್ಚದಲ್ಲಿ ಸಿದ್ಧಗೊಂಡಿರುವ ರಥದಲ್ಲಿ ಶಿವರಾತ್ರಿಯಂದು ಅಯೋಧ್ಯೆಯಿಂದ ತರಲಾದ ಪವಿತ್ರ ರಾಮನ ಪಾದುಕೆಯನ್ನು ಪ್ರತಿಷ್ಠಾಪಿಸಿ, ಪೂಜಿಸಲಾಗಿದೆ.
ಅಯೋಧ್ಯೆ ಗರ್ಭಗುಡಿಯಲ್ಲಿ ಪ್ರಧಾನ ಆರ್ಚಕರಿಂದ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಾಮನ ಪವಿತ್ರ ಮೂರು ಪಾದುಕೆಯನ್ನು ತರಲಾಗಿದೆ. ಅಯೋಧ್ಯೆಯ ಶ್ರೀ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಚೇರಿಯಲ್ಲಿ ಒಂದು ಪಾದುಕೆಯನ್ನ ಪ್ರತಿಷ್ಠಾಪನೆ ಮಾಡಲಾಗಿದೆ. ಇನ್ನೊಂದು ಪಾದುಕೆಯನ್ನ ಆಂಜನಾದ್ರಿ ಪರ್ವತದಲ್ಲಿ ಹಾಗೂ ರಥದಲ್ಲಿ ಒಂದು ಪಾದುಕೆಯನ್ನ ಪ್ರತಿಷ್ಠಾಪಿಸಲಾಗಿದೆ. ಆಂಜನಾದ್ರಿ ದೇಗುಲದಲ್ಲಿ ಪ್ರತಿಷ್ಠಾಪಿಸಿರುವ ಪಾದುಕೆಯ ದರ್ಶನವನ್ನ ಈಗಾಗಲೇ ಭಕ್ತರು ಪಡೆಯುತ್ತಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಗೆ ತೆರಳುವ ಈ ರಥಯಾತ್ರೆ 10 ರಿಂದ 11 ತಿಂಗಳಲ್ಲಿ ಇಡೀ ರಾಜ್ಯ ಮುಗಿಸಿ ಇತರೆ ರಾಜ್ಯಗಳಿಗೆ ತೆರಳಲಿದೆ. 12 ವರ್ಷಗಳ ಕಾಲ ದೇಶದ ವಿವಿಧ ರಾಜ್ಯಗಳಿಗೆ ಸಂಚರಿಸಿದ ಬಳಿಕ ಆಯೋಧ್ಯೆಗೆ ರಥಯಾತ್ರೆ ತಲುಪುತ್ತದೆ.
ರಾಮನ ಮಹಿಮೆ, ಹನುಮ ಭಕ್ತಿ ಸಾರುವ ರಥಯಾತ್ರೆ ಈ ರಥದಲ್ಲಿ ಪಂಪಾ ವಿರೂಪಾಕ್ಷೇಶ್ವರಸ್ವಾಮಿ, ಕಿಷ್ಕಿಂದ ಹನುಮಂತ, ಸೀತಾರಾಮ ಲಕ್ಷ್ಮಣ, ಬಾಲ ಆಂಜನೇಯಸ್ವಾಮಿ, ಅಂಜನಿದೇವಿ, ಶ್ರೀರಾಮ ಅಂಜನೇಯ ದೇವರ ವಿಗ್ರಹಗಳನ್ನ ಪ್ರತಿಷ್ಠಾಪನೆ ಮಾಡಲಾಗಿದೆ. ರಾತ್ರಿ ಸಮಯದಲ್ಲಿ ದೀಪಾಲಂಕಾರ ಕಂಗೊಳಿಸಲಿರುವ ಸುಂದರ ರಥಯಾತ್ರೆ ದೇಶದ ರಾಮ ಭಕ್ತರನ್ನು ತನ್ನತ್ತ ಸೆಳೆಯಲಿದೆ. ರಾಮಭಜನೆ, ಕೀರ್ತನೆ, ವಿಶೇಷ ಪೂಜೆಯೊಂದಿಗೆ ರಾಮ ಪಾದುಕೆಯ ರಥಯಾತ್ರೆ ಸಾಗುತ್ತದೆ.
ಹಂಪಿ ಕ್ಷೇತ್ರದಿಂದ ರಾಮನ ಪಾದುಕೆ ಹೊತ್ತ ರಥಯಾತ್ರೆ ನಾಳೆ ಆರಂಭಗೊಳ್ಳಲಿದೆ. ರಥದಲ್ಲಿ ಶಿವರಾತ್ರಿಯಂದು ರಾಮನ ಪಾದುಕೆ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲಾಗಿದೆ. ಹಂಪಿಯಿಂದ ಆರಂಭವಾಗುವ ರಥಯಾತ್ರೆ 12 ವರ್ಷಗಳ ಕಾಲ ರಾಷ್ಟ್ರ ಪರ್ಯಟನೆ ನಡೆಸಿ, ಬಳಿಕ ಆಯೋಧ್ಯೆಯ ರಾಮ ಮಂದಿರ ತಲುಪಲಿದೆ ಎಂದು ಶ್ರೀ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ
ರಾಮ ಮಂದಿರಕ್ಕೆ ದೇಣಿಗೆ ನೀಡದವರು ಬಾಯಿಗೆ ಬಂದ ಹಾಗೆ ಮಾತನಾಡಬಾರದು; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ