ದೆಹಲಿ: ಕೊವಿಡ್ 2ನೇ ಅಲೆ(Covid ಯಿಂದ ದೇಶ ಅದೆಷ್ಟು ಸಂಕಷ್ಟಕ್ಕೀಡಾಗಿತ್ತು ಎಂಬುದನ್ನು ನಾವೆಲ್ಲ ನೋಡಿದ್ದೇವೆ. ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ, ಇದು ಎರಡನೇ ಅಲೆಗೆ ಮುಗಿಯುವುದಿಲ್ಲ..ಮೂರನೇ ಅಲೆ ಹತ್ತಿರದಲ್ಲೇ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಲೇ ಇದ್ದರು. ಇದೀಗ ಕೊವಿಡ್ 19 ಮೂರನೇ ಅಲೆ ತುಂಬ ಹತ್ತಿರದಲ್ಲೇ ಇದೆ ಎಂದು ತಜ್ಞರು ವರದಿ ನೀಡಿದ್ದಾರೆ. ಅಂದರೆ ಕೊರೊನಾ ಮೂರನೇ ಅಲೆ ಆಗಸ್ಟ್ನಲ್ಲಿಯೇ ದೇಶವನ್ನು ಅಪ್ಪಳಿಸಲಿದೆ. ಅಕ್ಟೋಬರ್ ಹೊತ್ತಿಗೆ ಉತ್ತುಂಗಕ್ಕೆ ಏರಲಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ದೇಶದಲ್ಲಿ ಕೊರೊನಾ ಪ್ರಮಾಣ ತುಸು ತಗ್ಗಿತ್ತು. ಅಂದರೆ ಒಂದು ದಿನದಲ್ಲಿ ದಾಖಲಾಗುವ ಕೊರೊನಾ ವೈರಸ್ ಪ್ರಮಾಣ ಕಡಿಮೆಯಾಗಿತ್ತು. ಆದರೀಗ ಮತ್ತೆ ಒಂದು ದಿನದಲ್ಲಿ 40 ಸಾವಿರಕ್ಕೂ ಅಧಿಕ ಕೊರೊನಾ ಕೇಸ್ಗಳು ದಾಖಲಾಗುತ್ತಿವೆ. ಅದರಲ್ಲೂ ಕೇರಳದಲ್ಲಂತೂ ಮಿತಿಮೀರುತ್ತಿದೆ. ಈ ಹೊತ್ತಲ್ಲಿ ತಜ್ಞರು ನೀಡಿರುವ ಅಧ್ಯಯನ ವರದಿ ನಿಜಕ್ಕೂ ಆತಂಕ ಮೂಡಿಸುವಂತಿದೆ. ಅಕ್ಟೋಬರ್ ಹೊತ್ತಿಗೆ ಕೊರೊನಾ ವೈರಸ್ ಪ್ರಸರಣ ದೇಶದಲ್ಲಿ ಅತ್ಯಂತ ಉತ್ತುಂಗಕ್ಕೆ ಏರಲಿದೆ. ಆದ ಒಂದು ದಿನದಲ್ಲಿ 1 ಲಕ್ಷಕ್ಕೆ ಕಡಿಮೆ ಕೇಸ್ ದಾಖಲಾದರೆ ಅದು ಉತ್ತಮ ಎಂದೇ ಪರಿಗಣಿಸಬೇಕು. ಯಾಕೆಂದರೆ ಒಂದು ದಿನದಲ್ಲಿ 1.50 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುವ ಕೆಟ್ಟ ಪರಿಸ್ಥಿತಿ ಬರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ಇದೀಗ ಹೆಚ್ಚುತ್ತಿರುವ ಕೊರೊನಾ ಪ್ರಸರಣ ಮೂರನೇ ಅಲೆಗೆ ಹಾದಿಯಾಗಿದೆ ಎಂದು ಹೈದರಾಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರೊಫೆಸರ್ ಮಾಥುಕುಮಳ್ಳಿ ವಿದ್ಯಾಸಾಗರ್ ಮತ್ತು ಮನೀಂದ್ರಾ ಅಗರ್ವಾಲ್ ನೇತೃತ್ವದಲ್ಲಿ ನಡೆದ ಅಧ್ಯಯನ ವರದಿ ಹೇಳಿದೆ. ಅದರಲ್ಲೂ ಅತಿಹೆಚ್ಚು ಕೊರೊನಾ ಕೇಸ್ಗಳು ದಾಖಲಾಗುತ್ತಿರುವ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳು ಕೊರೊನಾ ಮೂರನೇ ಅಲೆಯ ಸ್ಪಷ್ಟ ಚಿತ್ರಣವನ್ನು ನೀಡುತ್ತಿವೆ ಎಂದೂ ವಿದ್ಯಾಸಾಗರ್ ಹೇಳಿದ್ದಾರೆ.
ಕೊರೊನಾ ಎರಡನೇ ಅಲೆ ದೇಶಕ್ಕೆ ನರಕವನ್ನೇ ತೋರಿಸಿದೆ. ಬೆಡ್ಗಳ ಕೊರತೆ, ಆಕ್ಸಿಜನ್ ಅಭಾವದಿಂದ ಅದೆಷ್ಟೋ ಮಂದಿಯ ಜೀವವೇ ಹೋಗಿದೆ. ಕೊರೊನಾ ಎರಡನೇ ಅಲೆ ದೇಶಕ್ಕೆ ಅತ್ಯಂತ ಹೆಚ್ಚು ಬಾಧಿಸಿದ್ದು ಮೇ ತಿಂಗಳಲ್ಲಿ. ಇದೀಗ ಆಗಸ್ಟ್ನಲ್ಲಿಯೇ ಮೂರನೇ ಅಲೆ ಶುರುವಾಗುತ್ತದೆಂದು ಒತ್ತಿಒತ್ತಿ ಹೇಳಲಾಗುತ್ತಿದೆ. ಅಲ್ಲದೆ, ಕೊರೊನಾ ನಿಯಂತ್ರಣ ಕ್ರಮಗಳನ್ನು ಸೂಕ್ತವಾಗಿ ಅನುಸರಿಸದೆ ಇದ್ದರೆ, ಅಕ್ಟೋಬರ್-ನವೆಂಬರ್ ವೇಳೆ ಸೋಂಕಿನ ಪ್ರಮಾಣ ಉಲ್ಬಣವಾಗುತ್ತದೆ ಎಂದೂ ತಜ್ಞರು ಹೇಳಿದ್ದಾರೆ. ಅದರಲ್ಲೂ ಕೇರಳ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಒಡಿಶಾ, ಅಸ್ಸಾಂ, ಮಿಜೋರಾಂ, ಮೇಘಾಲಯ, ಆಂಧ್ರಪ್ರದೇಶ, ಮಣಿಪುರಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಅತ್ಯಂತ ಹೆಚ್ಚಾಗಿದೆ. ದೇಶದಲ್ಲಿ ದಾಖಲಾಗುವ ಒಟ್ಟಾರೆ ಕೊರೊನಾ ಪ್ರಕರಣದಲ್ಲಿ ಬಹುಪಾಲು ಈ ರಾಜ್ಯಗಳದ್ದೇ ಆಗಿರುತ್ತದೆ.
ಇದನ್ನೂ ಓದಿ: ಬಿಜೆಪಿ ಭ್ರಷ್ಟ ಪಕ್ಷ, ಬಿಜೆಪಿಯದ್ದು ಭ್ರಷ್ಟ ಸರ್ಕಾರ: ಮಾಜಿ ಸಿಎಂ ಸಿದ್ದರಾಮಯ್ಯ