ಹೋಂ ಐಸೊಲೇಶನ್​ನಲ್ಲಿರುವ ದೆಹಲಿಯ ಕೋವಿಡ್-19 ರೋಗಿಗಳು ಆನ್​ಲೈನ್​ನಲ್ಲಿ ಆಕ್ಸಿಜನ್​ಗೆ ಅಪ್ಲೈ ಮಾಡಬಹುದು

|

Updated on: May 06, 2021 | 8:50 PM

ದೆಹಲಿ ಸರ್ಕಾರವು ಮನೆಗಳಲ್ಲಿ ಪ್ರತ್ಯೇಕವಾಸದಲ್ಲಿರುವ (ಐಸೊಲೇಟ್) ರೋಗಿಗಳು ಸಹ ಆಕ್ಸಿಜನ್ ಸಿಲಿಂಡರ್​ಗಳಿಗೆ ದೆಹಲಿ ಸರ್ಕಾರದ ವೆಬ್​ಸೈಟ್​ ಮೂಲಕ ಅಪ್ಲೈ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ.

ಹೋಂ ಐಸೊಲೇಶನ್​ನಲ್ಲಿರುವ ದೆಹಲಿಯ ಕೋವಿಡ್-19 ರೋಗಿಗಳು ಆನ್​ಲೈನ್​ನಲ್ಲಿ ಆಕ್ಸಿಜನ್​ಗೆ ಅಪ್ಲೈ ಮಾಡಬಹುದು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕೋವಿಡ್-19 ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು ಮನೆಗಳಲ್ಲಿ ಪ್ರತ್ಯೇಕವಾಸದಲ್ಲಿರುವ (ಐಸೊಲೇಟ್) ರೋಗಿಗಳು ಸಹ ಆಕ್ಸಿಜನ್ ಸಿಲಿಂಡರ್​ಗಳಿಗೆ ದೆಹಲಿ ಸರ್ಕಾರದ ವೆಬ್​ಸೈಟ್​ ಮೂಲಕ ಅಪ್ಲೈ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಆಕ್ಸಿಜನ್ ಸಿಲಿಂಡರ್​ಗೆ ಬೇಡಿಕೆ ಸಲ್ಲಿಸುವ ರೋಗಿಗಳು ಫೋಟೊ ಐಡಿ, ಆಧಾರ್​ ಕಾರ್ಡ್​ ಮತ್ತು ಇತರ ವಿವರಗಳ ಜೊತೆಗೆ ಕೋವಿಡ್-19 ಪಾಸಿಟಿವ್ ವರದಿಯನ್ನು ಅಪ್​ಲೋಡ್ ಮಾಡಬೇಕು.

ದಾಸ್ತಾನು ಮತ್ತು ಲಭ್ಯತೆಗೆ ಅನುಗುಣವಾಗಿ ಜಿಲ್ಲಾಧಿಕಾರಿ ಕಚೇರಿಯು ದಿನಾಂಕ, ಸಮಯ ಮತ್ತು ಆಕ್ಸಿಜನ್ ಡೀಲರ್​ ವಿಳಾಸವಿರುವ ಪಾಸ್​ ನೀಡುತ್ತದೆ. ‘ಪ್ರತಿ ಜಿಲ್ಲೆಯಲ್ಲಿಯೂ ಆಕ್ಸಿಜನ್ ಸಿಲಿಂಡರ್​ಗಳನ್ನು ಭರ್ತಿ ಮಾಡಿಕೊಡುವ ಕೇಂದ್ರವನ್ನು ಸ್ಥಾಪಿಸಲಾಗುವುದು. ರಿಫಿಲ್ಲರ್​ಗಳಿಂದ ಅಗತ್ಯವಿರುವವರ ಮನೆಗಳಿಗೆ ಸಿಲಿಂಡರ್​ ಸರಬರಾಜು ಆಗುವ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳು ನಿಗಾವಣೆ ಮಾಡುತ್ತಾರೆ’ ಎಂದು ಕೋವಿಡ್ ದತ್ತಾಂಶ ನಿರ್ವಹಣಾ ಘಟಕದ ವಿಭಾಗೀಯ ಆಯುಕ್ತರ ಹೇಳಿಕೆ ತಿಳಿಸಿದೆ.

ಈ ಪ್ರಕ್ರಿಯೆಯನ್ನು ನಿರ್ವಹಿಸಲು ಜಿಲ್ಲಾಧಿಕಾರಿಗಳು ಅಗತ್ಯ ಪ್ರಮಾಣದ ಕಚೇರಿ ಸಿಬ್ಬಂದಿಯನ್ನು ಒದಗಿಸಬೇಕು. ಎಲ್ಲ ಅರ್ಜಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಿ, ಇ-ಪಾಸ್​ಗಳನ್ನು ನೀಡಬೇಕು. ಇದನ್ನು ಮೊದಲ ಆದ್ಯತೆಯಾಗಿ ತೆಗೆದುಕೊಳ್ಳಬೇಕು. ನಿರ್ದಿಷ್ಟ ಮರುಭರ್ತಿ ಕೇಂದ್ರಗಳಲ್ಲಿ ಡೀಲರ್​ಗಳು ಸಿಲಿಂಡರ್​ಗಳನ್ನು ಭರ್ತಿ ಮಾಡಿಕೊಳ್ಳಬೇಕು. ಈ ಅಂಶವನ್ನು ಜಿಲ್ಲಾಧಿಕಾರಿಗಳು ಖಾತ್ರಿಪಡಿಸಬೇಕು ಎಂದು ಆಯುಕ್ತರ ಆದೇಶವು ತಿಳಿಸಿದೆ

ಹೋಂ ಐಸೊಲೇಶನ್​ನಲ್ಲಿರುವ ಕೋವಿಡ್-19 ರೋಗಿಗಳಿಗೆ ಸೋಂಕು ದೃಢಪಟ್ಟ 24 ಗಂಟೆಗಳ ಒಳಗೆ ವೈದ್ಯರ ಜೊತೆಗೆ ಸಮಾಲೋಚನೆ ಸಿಗಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಪಿಎಂ-ಕೇರ್ಸ್​ ಅನುದಾನದಲ್ಲಿ ದೆಹಲಿಯ ಏಮ್ಸ್​ ಮತ್ತು ರಾಮ್​ ಮನೋಹರ್ ಲೋಹಿಯಾ ಆಸ್ಪತ್ರೆಗಳಲ್ಲಿ ಎರಡು ವೈದ್ಯಕೀಯ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು ಬುಧವಾರ ಹೇಳಿತ್ತು. ತಮಿಳುನಾಡಿನ ಕೊಯಮತ್ತೂರಿನಿಂದ ಏರ್​ಲಿಫ್ಟ್​ ಮಾಡಲಾದ ಘಟಕಗಳನ್ನು ದೆಹಲಿಯಲ್ಲಿ ಸ್ಥಾಪಿಸುವ ಕಾರ್ಯ ಯುದ್ಧೋಪಾದಿಯಲ್ಲಿ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ದೆಹಲಿಯಲ್ಲಿ ಬುಧವಾರ ಒಂದೇ ದಿನ 19,953 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, 338 ಮಂದಿ ಮೃತಪಟ್ಟಿದ್ದಾರೆ. 18,788 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ.

(Covid-19 Patients in Home Isolation Can Apply for Oxygen Cylinders Through Web Portal)