ದೆಹಲಿ: ಕೊರೊನಾ ಸೋಂಕು ನಿಯಂತ್ರಣಕ್ಕೆ ಲಸಿಕೆಯೊಂದೇ ಸದ್ಯಕ್ಕಿರುವ ಪರಿಣಾಮಕಾರಿ ಮಾರ್ಗವೆಂದು ತಜ್ಞರು ಅಭಿಪ್ರಾಯಪಟ್ಟಿರುವರಾದರೂ ಅದರ ಕುರಿತಾಗಿ ಇನ್ನೂ ಹೆಚ್ಚಿನ ಅಧ್ಯಯನಗಳು ನಿರಂತರವಾಗಿ ನಡೆಯುತ್ತಿವೆ. ವಿವಿಧ ಲಸಿಕೆಗಳ ನಡುವಿನ ಸಾಮ್ಯತೆ, ಭಿನ್ನತೆ, ಒಂದು ವೇಳೆ ಅವುಗಳನ್ನು ಮಿಶ್ರಣ ಮಾಡಿದರೆ ಏನಾಗಬಹುದು? ಹೀಗೆ ಬೇರೆ ಬೇರೆ ಆಯಾಮಗಳಲ್ಲಿ ಅಧ್ಯಯನ ನಡೆಸಲಾಗುತ್ತಿದೆ. ಸದ್ಯ ಕೊವ್ಯಾಟ್ (Coronavirus Vaccine-induced Antibody Titre) ನಡೆಸಿರುವ ಅಧ್ಯಯನದ ಪ್ರಾಥಮಿಕ ವರದಿಯಲ್ಲಿ ಪ್ರತಿಕಾಯ ಸೃಷ್ಟಿಯಲ್ಲಿ ಕೊವ್ಯಾಕ್ಸಿನ್ಗಿಂತ ಕೊವಿಶೀಲ್ಡ್ ಲಸಿಕೆಯೇ ಪರಿಣಾಮಕಾರಿ ಎಂಬ ಅಂಶ ಗಮನಕ್ಕೆ ಬಂದಿದೆ.
ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳನ್ನು ಪಡೆದ ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡ ಈ ಅಧ್ಯಯನದಲ್ಲಿ ಕೊವ್ಯಾಕ್ಸಿನ್ ಮೊದಲ ಡೋಸ್ ಪಡೆದವರಿಗಿಂತ ಹೆಚ್ಚಿನ ಪ್ರತಿಕಾಯಗಳು ಕೊವಿಶೀಲ್ಡ್ ಮೊದಲ ಡೋಸ್ ಪಡೆದವರ ದೇಹದಲ್ಲಿ ಕಂಡುಬಂದಿದೆ. ಈ ಅಧ್ಯಯನವಿನ್ನೂ ಪ್ರಾಥಮಿಕ ಹಂತದ್ದಾಗಿದ್ದು ಮೇಲ್ನೋಟಕ್ಕೆ ಕಂಡುಬಂದಿರುವ ಅಂಶಗಳನ್ನಷ್ಟೇ ಬಹಿರಂಗಪಡಿಸಲಾಗಿದೆಯೇ ಹೊರತು ಅದನ್ನು ಆಧರಿಸಿ ಲಸಿಕೆ ನೀಡುವಲ್ಲಿ ಬದಲಾವಣೆ ಮಾಡಬೇಕು ಎಂಬುದನ್ನು ತಿಳಿಸಲಾಗಿಲ್ಲ.
ಈಗಾಗಲೇ ಬೇರೆ ಬೇರೆ ಅಧ್ಯಯನಗಳಲ್ಲಿ ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳು ಎರಡು ಡೋಸ್ ಪಡೆದವರಲ್ಲಿ ಉತ್ತಮ ಪರಿಣಾಮವನ್ನೇ ಬೀರಿವೆ ಎಂಬುದು ಸಾಬೀತಾಗಿದೆ. ಆದರೆ, ಈ ಅಧ್ಯಯನದ ಮೂಲಕ ಕೊವಿಶೀಲ್ಡ್ ಪಡೆದವರಲ್ಲಿ ಪ್ರತಿಕಾಯಗಳು ಹೆಚ್ಚು ಸೃಷ್ಟಿಯಾಗಿರುವುದು ಕಂಡುಬಂದಿದೆ.
ಒಟ್ಟು 552 ಮಂದಿ (325 ಪುರುಷರು, 227 ಮಹಿಳೆಯರು) ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡ ಈ ಅಧ್ಯಯನದಲ್ಲಿ 456 ಮಂದಿ ಕೊವಿಶೀಲ್ಡ್ ಲಸಿಕೆ ಪಡೆದಿದ್ದು, 96 ಮಂದಿ ಕೊವ್ಯಾಕ್ಸಿನ್ ಲಸಿಕೆ ಪಡೆದಿದ್ದರು. ಅದರಲ್ಲಿ ಒಟ್ಟು ಶೇ.79.3ರಷ್ಟು ಜನರಲ್ಲಿ ಮೊದಲ ಡೋಸ್ ಲಸಿಕೆ ಉತ್ತಮ ಪರಿಣಾಮ ಬೀರಿರುವುದು ಪತ್ತೆಯಾಗಿದೆ. ಆ ಪೈಕಿ ಕೊವಿಶೀಲ್ಡ್ ಪಡೆದ ಶೇ.86.8 ಮಂದಿ ಹಾಗೂ ಕೊವ್ಯಾಕ್ಸಿನ್ ಪಡೆದ ಶೇ.43.8 ಮಂದಿಯಲ್ಲಿ ಪ್ರತಿಕಾಯಗಳು ಅಗತ್ಯ ಪ್ರಮಾಣದಲ್ಲಿ ವೃದ್ಧಿಯಾಗಿವೆ ಎಂಬುದನ್ನು ಅಧ್ಯಯನದ ಪ್ರಾಥಮಿಕ ವರದಿ ತಿಳಿಸಿದೆ.
ಸದ್ಯ ಈ ಅಧ್ಯಯನವನ್ನು ದೇಶದ ವಿವಿಧ ಭಾಗಗಳಲ್ಲಿ ನಡೆಸಲಾಗುತ್ತಿದ್ದು ಕೊರೊನಾ ಸೋಂಕಿಗೆ ತುತ್ತಾದವರು ಹಾಗೂ ತುತ್ತಾಗದೇ ಇರುವವರು ಮತ್ತು ಕೊವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ಲಸಿಕೆ ಪಡೆದವರು ಅಧ್ಯಯನಕ್ಕೆ ಒಳಪಡುತ್ತಿದ್ದಾರೆ. ಮೊದಲ ಡೋಸ್ ಪಡೆದ 21 ದಿನ ಅಥವಾ ಅದರ ನಂತರದಿಂದ ಎರಡನೇ ಡೋಸ್ ಪಡೆದ ಆರು ತಿಂಗಳ ಅವಧಿಯ ತನಕ ಲಸಿಕೆ ಪಡೆದವರ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಕಂಡುಬರುತ್ತವೆ ಎನ್ನುವುದನ್ನು ಅಧ್ಯಯನದಲ್ಲಿ ಗಮನಿಸಲಾಗುತ್ತಿದೆ. ಪ್ರಸ್ತುತ ಕೊವ್ಯಾಟ್ ನಡೆಸಿದ ಈ ಅಧ್ಯಯನದ ಪ್ರಾಥಮಿಕ ವರದಿ ತಿಳಿಸಿರುವಂತೆ ಕೊವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್ ಎರಡೂ ಲಸಿಕೆಗಳು ಪರಿಣಾಮಕಾರಿ ಆಗಿವೆಯಾದರೂ ಕೊವಿಶೀಲ್ಡ್ ಲಸಿಕೆ ಪಡೆದವರ ದೇಹದಲ್ಲಿ ಪ್ರತಿಕಾಯಗಳ ಪ್ರಮಾಣ ಹೆಚ್ಚು ಕಂಡುಬಂದಿದೆ.
ಇದನ್ನೂ ಓದಿ:
ಕೊವ್ಯಾಕ್ಸಿನ್ ಲಸಿಕೆ ತಯಾರಿಕೆಯಿಂದ ಪೂರೈಕೆ ತನಕ ಒಟ್ಟು 4 ತಿಂಗಳ ಸಮಯ ಬೇಕು: ಭಾರತ್ ಬಯೋಟೆಕ್
Corona Vaccine: ಕೊವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಕೊರೊನಾದ ವಿರುದ್ಧ ಪರಿಣಾಮಕಾರಿಯೇ?