ಕೊವ್ಯಾಕ್ಸಿನ್ ಲಸಿಕೆ ತಯಾರಿಕೆಯಿಂದ ಪೂರೈಕೆ ತನಕ ಒಟ್ಟು 4 ತಿಂಗಳ ಸಮಯ ಬೇಕು: ಭಾರತ್ ಬಯೋಟೆಕ್
ಉತ್ಪಾದನೆ, ಪರಿಶೀಲನೆ ಹಾಗೂ ಬಿಡುಗಡೆ ಈ ಎಲ್ಲಾ ಹಂತಗಳಿಗೆ ಸುಮಾರು 120 ದಿನಗಳ ಕಾಲಾವಕಾಶ ಅಗತ್ಯವಿದೆ. ಹೀಗಾಗಿ ಮಾರ್ಚ್ ತಿಂಗಳಲ್ಲಿ ಉತ್ಪಾದಿಸಲು ಆರಂಭಿಸಿದ ಲಸಿಕೆಗಳನ್ನು ಜೂನ್ ತಿಂಗಳ ವೇಳೆಗಷ್ಟೇ ಜನರಿಗೆ ತಲುಪಿಸಲು ಸಾಧ್ಯ ಎಂದು ಸಂಸ್ಥೆ ಸ್ಪಷ್ಟನೆ ನೀಡಿದೆ.
ದೆಹಲಿ: ಕೊರೊನಾ ವೈರಾಣು ವಿರುದ್ಧ ಹೋರಾಡಲು ಭಾರತೀಯ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸಿದ ಕೊವ್ಯಾಕ್ಸಿನ್ ಲಸಿಕೆಯ ಉತ್ಪಾದನೆಯಿಂದ ಪೂರೈಕೆ ತನಕ ನಾಲ್ಕು ತಿಂಗಳ ಸಮಯ ಹಿಡಿಯುತ್ತದೆ ಎಂದು ತಯಾರಿಕಾ ಸಂಸ್ಥೆ ನಿನ್ನೆ (ಮೇ 29) ಹೇಳಿಕೆ ನೀಡಿದೆ. ಲಸಿಕೆ ಉತ್ಪಾದನೆಗೆ ಬಳಸಲಾಗುವ ತಂತ್ರಜ್ಞಾನ ಹಾಗೂ ನಂತರದ ಹಂತದಲ್ಲಿ ಅದನ್ನು ಅಂಗೀಕರಿಸಿ ಮಾರುಕಟ್ಟೆಗೆ ಬಿಡುವಲ್ಲಿಯ ತನಕ ಎಲ್ಲವನ್ನೂ ಒಳಗೊಂಡು ಅಷ್ಟು ಸಮಯ ಬೇಕಾಗುತ್ತದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.
ಉತ್ಪಾದನೆ, ಪರಿಶೀಲನೆ ಹಾಗೂ ಬಿಡುಗಡೆ ಈ ಎಲ್ಲಾ ಹಂತಗಳಿಗೆ ಸುಮಾರು 120 ದಿನಗಳ ಕಾಲಾವಕಾಶ ಅಗತ್ಯವಿದೆ. ಹೀಗಾಗಿ ಮಾರ್ಚ್ ತಿಂಗಳಲ್ಲಿ ಉತ್ಪಾದಿಸಲು ಆರಂಭಿಸಿದ ಲಸಿಕೆಗಳನ್ನು ಜೂನ್ ತಿಂಗಳ ವೇಳೆಗಷ್ಟೇ ಜನರಿಗೆ ತಲುಪಿಸಲು ಸಾಧ್ಯ ಎಂದು ಸಂಸ್ಥೆ ಸ್ಪಷ್ಟನೆ ನೀಡಿದೆ. ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ದೇಶದಲ್ಲಿ ಲಸಿಕೆ ಕೊರತೆ ತಲೆದೋರಿರುವ ಬೆನ್ನಲ್ಲೇ ಭಾರತ್ ಬಯೋಟೆಕ್ನಿಂದ ಈ ಸ್ಪಷ್ಟನೆ ಹೊರಬಿದ್ದಿದ್ದು, ಕೊವ್ಯಾಕ್ಸಿನ್ ಲಸಿಕೆ ಪೂರೈಕೆಯಲ್ಲಿ ವಿಳಂಬವಾಗಲು ಕಾರಣವೇನು ಎಂಬುದನ್ನು ಈ ಮೂಲಕ ವಿವರಿಸಲಾಗಿದೆ.
ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ತಾಂತ್ರಿಕವಾಗಿ ಸಂಕೀರ್ಣವಾಗಿದ್ದು, ಕೊರೊನಾ ವೈರಾಣುವನ್ನು ನಿಷ್ಕ್ರಿಯಗೊಳಿಸಿ ಲಸಿಕೆ ತಯಾರಿಸುವುದರಿಂದ ಹೆಚ್ಚಿನ ಸಮಯ, ಹೆಚ್ಚು ಅನುಭವಿ ಸಿಬ್ಬಂದಿ ಬೇಕಾಗುತ್ತದೆ. ಅಲ್ಲದೇ ಈ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡು ವೈರಾಣುವನ್ನು ನಿಭಾಯಿಸಲು ಕಲಿತು ಲಸಿಕೆ ತಯಾರಿಸಲು ತಕ್ಷಣಕ್ಕೆ ಸಾಧ್ಯವಿಲ್ಲ ಎಂಬ ಕಾರಣ ನೀಡಿ ಬೇರೆ ಸಂಸ್ಥೆಗಳು ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಗೆ ಹಿಂದೇಟು ಹಾಕಿದ್ದವು.
ನಿಷ್ಕ್ರಿಯ ವೈರಾಣುವನ್ನು ಬಳಸಿ ತಯಾರಿಸುವ ಕೊವ್ಯಾಕ್ಸಿನ್ ಲಸಿಕೆಗಿಂತ ಪ್ರೊಟೀನ್ ತಂತ್ರಜ್ಞಾನ ಬಳಸಿ ಮಾಡಲಾಗುವ ಕೊವಿಶೀಲ್ಡ್ ಲಸಿಕೆ ಉತ್ಪಾದಿಸುವುದು ಸುಲಭ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದರು. ಇದೀಗ ಭಾರತ್ ಬಯೋಟೆಕ್ ಸಂಸ್ಥೆಯೂ ಉತ್ಪಾದನೆಯಿಂದ ಪೂರೈಕೆಯ ತನಕ ನಾಲ್ಕು ತಿಂಗಳ ಕಾಲಾವಧಿ ಬೇಕೆಂದು ಹೇಳಿರುವುದು ಲಸಿಕೆ ತಯಾರಿಕೆಯಲ್ಲಿನ ತಾಂತ್ರಿಕ ಸಂಕೀರ್ಣತೆಗೆ ಸಾಕ್ಷಿಯಂತಿದೆ.
ಪೂರೈಕೆ ವಿಚಾರವಾಗಿ ಹೇಳಿಕೆ ನೀಡಿರುವ ಭಾರತ್ ಬಯೋಟೆಕ್, ನಾವು ಕೇಂದ್ರ ಸರ್ಕಾರದ ಸೂಚನೆಯಂತೆಯೇ ಲಸಿಕೆ ಪೂರೈಸುತ್ತಿದ್ದೇವೆ. ಲಸಿಕೆಗಳು ಸಂಸ್ಥೆಯಿಂದ ಆಯಾ ರಾಜ್ಯಗಳಿಗೆ ತಲುಪಲು 2 ದಿನಗಳ ಕಾಲಾವಕಾಶ ಬೇಕು. ಅಲ್ಲದೇ ನಂತರ ಅಲ್ಲಿಂದ ರಾಜ್ಯದ ಇತರೆ ಭಾಗಗಳಿಗೆ ತಲುಪಲು ಅಧಿಕ ಸಮಯಾವಕಾಶ ಬೇಡುತ್ತದೆ ಎಂದು ತಿಳಿಸಿದೆ. ಸದ್ಯ ಲಸಿಕೆಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಗುಜರಾತ್ನ ಘಟಕದಿಂದ ಸುಮಾರು 20 ಕೋಟಿ ಡೋಸ್ ಲಸಿಕೆಯನ್ನು ಹೆಚ್ಚುವರಿಯಾಗಿ ಉತ್ಪಾದಿಸಲು ಸಂಸ್ಥೆ ನಿರ್ಧರಿಸಿದೆ. ಆ ಮೂಲಕ ಸಂಸ್ಥೆಯ ಒಟ್ಟಾರೆ ಲಸಿಕೆ ತಯಾರಿಕಾ ಪ್ರಮಾಣ ವರ್ಷಕ್ಕೆ 100 ಕೋಟಿ ಡೋಸ್ ಆಗಲಿದೆ.
ಇದನ್ನೂ ಓದಿ: ದೇಶದಲ್ಲಿ ಉತ್ಪಾದನೆಯಾದ ಕೊವ್ಯಾಕ್ಸಿನ್ ಎಲ್ಲಿಗೆ ಹೋಯ್ತು? ಕೊವ್ಯಾಕ್ಸಿನ್ ಉತ್ಪಾದನೆ, ಬಳಕೆ ಲೆಕ್ಕ ಪರಸ್ಪರ ತಾಳೆಯಾಗುತ್ತಿಲ್ಲ
ಕೊವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆಗಾಗಿ ಅರ್ಜಿ ಸಲ್ಲಿಸಿದ ಭಾರತ್ ಬಯೋಟೆಕ್