ಕೊರೊನಾ ಬಳಿಕ ಇನ್ನಿತರ ಸೋಂಕು ತಗುಲಿದ ಶೇಕಡಾ 56 ರಷ್ಟು ರೋಗಿಗಳ ಸಾವು: ಐಸಿಎಂಆರ್
ಜನರ ಜೀವ ಉಳಿಸುವುದಕ್ಕಾಗಿ ಅನಗತ್ಯವಾಗಿ ರೋಗಿಗಳಿಗೆ ಆ್ಯಂಟಿಬಯೋಟಿಕ್ ನೀಡಬಾರದು. ಜತೆಗೆ ಔಷಧಿಗೆ ಪ್ರತಿರೋಧ ತೋರುವ ಇನ್ಫೆಕ್ಷನ್ಗಳನ್ನು ತಡೆಯುವ ಉದ್ದೇಶದಿಂದ ಅನಗತ್ಯವಾಗಿ ಆ್ಯಂಟಿಬಯೋಟಿಕ್ ನೀಡಬಾರದು ಎಂದು ಐಸಿಎಂಆರ್ ಅಧ್ಯಯನ ಹೇಳಿದೆ.
ದೆಹಲಿ: ನಮ್ಮ ಭಾರತ ದೇಶದಲ್ಲಿ ಈಗ ಕೊರೊನಾದ ಜೊತೆಗೆ ಬೇರೆ ಸೋಂಕುಗಳು ಅಪಾಯಕಾರಿಯಾಗುತ್ತಿವೆ . ಕೊರೊನಾ ರೋಗಿಗಳ ಪೈಕಿ ಬ್ಯಾಕ್ಟಿರೀಯ ಸೋಂಕು ಸೇರಿದಂತೆ ಎರಡನೇ ಹಂತದಲ್ಲಿ ಬೇರೆ ಸೋಂಕು ತಗುಲಿದವರ ಪೈಕಿ ಶೇಕಡಾ 56 ರಷ್ಟು ರೋಗಿಗಳು ಸಾವನ್ನಪ್ಪುತ್ತಿದ್ದಾರೆ ಎಂದು ಐಸಿಎಂಆರ್ ಅಧ್ಯಯನ ಹೇಳಿದೆ. ಬ್ಯಾಕ್ಟಿರೀಯಾ ಮತ್ತು ಫಂಗಸ್ ಸೋಂಕು ಅನ್ನು ಸರಿಯಾಗಿ ನಿಯಂತ್ರಣ ಮಾಡದೇ ಇರುವುದು ಹಾಗೂ ಅತಿಯಾದ ಆ್ಯಂಟಿ ಬಯೋಟಿಕ್ ಬಳಕೆಯೇ ರೋಗಿಗಳ ಸಾವಿಗೆ ಕಾರಣ ಎಂದು ಐಸಿಎಂಆರ್ ಅಧ್ಯಯನ ತಿಳಿಸಿದೆ.
ದೇಶದಲ್ಲಿ ಕೊರೊನಾದಿಂದ ಈಗಾಗಲೇ 3 ಲಕ್ಷದ 18 ಸಾವಿರಕ್ಕಿಂತ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ . ಆದರೆ ಕೊರೊನಾದ ಜತೆಗೆ ರೋಗಿಗಳಿಗೆ ಆಸ್ಪತ್ರೆಯಲ್ಲೇ ಬೇರೆ ಬೇರೆ ಸೋಂಕುಗಳು ತಗುಲುತ್ತಿವೆ. ಈಗ ಬ್ಲಾಕ್ ಫಂಗಸ್ , ವೈಟ್ ಫಂಗಸ್, ಎಲ್ಲೋ ಫಂಗಸ್ ಕೂಡ ರೋಗಿಗಳಿಗೆ ತಗುಲುತ್ತಿವೆ. ಕೊರೊನಾ ರೋಗಿಗಳಿಗೆ ಕೊರೊನಾದ ಜತೆಗೆ ಬೇರೆ ಸೋಂಕುಗಳು ಇನ್ನಿಲ್ಲದ ಸಮಸ್ಯೆ ತಂದೊಡ್ಡಿವೆ.
ಕೊರೊನಾದಿಂದ ಗುಣಮುಖರಾದವರು ಬ್ಲಾಕ್ ಫಂಗಸ್ಗೆ ಬಲಿಯಾಗುತ್ತಿದ್ದಾರೆ . ಇನ್ನು ಕೊರೊನಾದ ಜತೆಗೆ ಬ್ಯಾಕ್ಟೀರಿಯಾ ಸೋಂಕು ಕೂಡ ಈಗ ರೋಗಿಗಳ ಪ್ರಾಣವನ್ನೇ ಬಲಿ ಪಡೆಯುತ್ತಿದೆ. ದೇಶದ ಅತ್ಯುನ್ನುತ ಮೆಡಿಕಲ್ ಸಂಶೋಧನಾ ಸಂಸ್ಥೆಯಾದ ಐಸಿಎಂಆರ್ ಕೊರೊನಾ ರೋಗಿಗಳಿಗೆ ತಗುಲುವ ಇನ್ನಿತರ ಸೋಂಕು ಹಾಗೂ ಸಾವಿನ ಬಗ್ಗೆ ಅಧ್ಯಯನ ನಡೆಸಿದೆ.
ಐಸಿಎಂಆರ್ ಕಳೆದ ವರ್ಷ ಜೂನ್ನಿಂದ ಆಗಸ್ಟ್ ವರೆಗೆ ಈ ಅಧ್ಯಯನ ನಡೆಸಿದೆ. ಐಸಿಎಂಆರ್ ಅಧ್ಯಯನದ ಪ್ರಕಾರ, ಕೊರೊನಾ ಸೋಂಕು ಬಂದ ಬಳಿಕ ಎರಡನೇ ಹಂತದ ಸೋಂಕು ತಗುಲಿದವರ ಪೈಕಿ ಶೇ.56 ರಷ್ಟು ರೋಗಿಗಳು ಸಾವನ್ನಪ್ಪಿದ್ದಾರೆ. ಈ ರೋಗಿಗಳು ಐಸಿಯುಗೆ ದಾಖಲಾಗಿದ್ದವರು . ಐಸಿಎಂಆರ್ ಸುಮಾರು ಹತ್ತು ಆಸ್ಪತ್ರೆಗಳಲ್ಲಿ 17,534 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಿದೆ. ಆ ಪೈಕಿ ಶೇಕಡಾ 3.6 ರಷ್ಟು ಮಂದಿಯಲ್ಲಿ ಎರಡನೇ ಹಂತದ ಬ್ಯಾಕ್ಟೀರಿಯಾ ಅಥವಾ ಫಂಗಲ್ ಇನ್ಪೆಕ್ಷನ್ ಪತ್ತೆಯಾಗಿದೆ. ಈ ಶೇಕಡಾ 3.6ರಷ್ಟು ಎರಡನೇ ಹಂತದ ಬ್ಯಾಕ್ಟೀರಿಯಾ ಪತ್ತೆಯಾದವರ ಪೈಕಿ ಶೇಕಡಾ 56 ರಷ್ಟು ರೋಗಿಗಳು ಸಾವನ್ನಪ್ಪಿದ್ದಾರೆ. ಇದರರ್ಥ ಎರಡನೇ ಹಂತದಲ್ಲಿ ತಗುಲಿದ ಬೇರೆ ಸೋಂಕಿನ ಪೈಕಿ ಅರ್ಧದಷ್ಟು ರೋಗಿಗಳು ಸಾವನ್ನಪ್ಪಿದ್ದಾರೆ.
ಕೊರೊನಾ ಸಾವಿನ ಪ್ರಮಾಣಕ್ಕೆ ಹೋಲಿಸಿದರೇ, ಎರಡನೇ ಹಂತದ ಸೋಂಕು ತಗುಲಿದವರ ಪೈಕಿ ಶೇಕಡಾ 56 ರಷ್ಟು ಜನರು ಸಾವನ್ನಪ್ಪುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಎರಡನೇ ಹಂತದ ಸೋಂಕುಗಳಾದ ಬ್ಲಾಕ್ , ವೈಟ್ , ಎಲ್ಲೋ ಫಂಗಸ್ಗೆ ಬೇಗ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಕೊರೊನಾ ರೋಗಿಗಳ ಉಸಿರಾಟಕ್ಕೆ ಮಾಡುವ ವೆಂಟಿಲೇಟರ್ ವ್ಯವಸ್ಥೆ, ಮೆಡಿಕಲ್ ಆಕ್ಸಿಜನ್ ಪೂರೈಕೆ ವ್ಯವಸ್ಥೆಯಲ್ಲಾಗುವ ಲೋಪಗಳಿಂದ ರೋಗಿಗಳಿಗೆ ಇನ್ನಿತರ ಸೋಂಕುಗಳು ತಗುಲುತ್ತಿವೆ.
ಔಷಧಿಗಳನ್ನು ನೀಡಿದರೂ, ಬ್ಯಾಕ್ಟೀರಿಯಾ ಸೋಂಕುಗಳು ಪ್ರತಿರೋಧ ತೋರುತ್ತಿವೆ. ಬ್ಯಾಕ್ಟೀರಿಯಾ ಸೋಂಕುಗಳ ವಿರುದ್ಧ ಔಷಧಿಗಳು ಪರಿಣಾಮಕಾರಿಯಾಗುತ್ತಿಲ್ಲ . ಸೋಂಕು ನಿಯಂತ್ರಣದ ಪದ್ಧತಿಗಳನ್ನ ಜನರು ಪಾಲಿಸಬೇಕು. ಜತೆಗೆ ಅತಿಯಾಗಿ ಆ್ಯಂಟಿಬಯೋಟಿಕ್ ಅನ್ನು ರೋಗಿಗಳಿಗೆ ನೀಡುತ್ತಿರುವುದರಿಂದ ಎರಡನೇ ಹಂತದ ಇನ್ಪೆಕ್ಷನ್ ಹೆಚ್ಚಾಗುತ್ತಿವೆ ಎಂದು ಐಸಿಎಂಆರ್ ಹೇಳಿದೆ.
ಐಸಿಎಂಆರ್ನಿಂದ ಈ ಅಧ್ಯಯನ ನಡೆಸಿದ್ದ ಹಿರಿಯ ವಿಜ್ಞಾನಿ ಕಾಮಿನಿ ವಾಲಿಯಾ ಹೇಳುವ ಪ್ರಕಾರ, ಔಷಧಿಗಳಿಗೆ ಪ್ರತಿರೋಧ ತೋರುವ ಇನ್ಫೆಕ್ಷನ್ಗಳಿಂದ ರೋಗಿಗಳು ಆಸ್ಪತ್ರೆಯಲ್ಲಿ ಹೆಚ್ಚು ದಿನ ಇರಬೇಕಾಗುತ್ತಿದೆ. ಚಿಕಿತ್ಸೆಯ ವೆಚ್ಚ ಕೂಡ ಹೆಚ್ಚಾಗುತ್ತದೆ. ರೋಗಿಗಳಲ್ಲಿ ಔಷಧಿಗಳಿಗೆ ಪ್ರತಿರೋಧ ತೋರುವ ಇನ್ಫೆಕ್ಷನ್ ಹೆಚ್ಚಾಗಿದ್ದಾಗ , ಫಲಿತಾಂಶ ಉತ್ತಮವಾಗಿರಲ್ಲ ಎಂದು ಹೇಳಿದ್ದಾರೆ.
ಜನರ ಜೀವ ಉಳಿಸುವುದಕ್ಕಾಗಿ ಅನಗತ್ಯವಾಗಿ ರೋಗಿಗಳಿಗೆ ಆ್ಯಂಟಿಬಯೋಟಿಕ್ ನೀಡಬಾರದು. ಜತೆಗೆ ಔಷಧಿಗೆ ಪ್ರತಿರೋಧ ತೋರುವ ಇನ್ಫೆಕ್ಷನ್ಗಳನ್ನು ತಡೆಯುವ ಉದ್ದೇಶದಿಂದ ಅನಗತ್ಯವಾಗಿ ಆ್ಯಂಟಿಬಯೋಟಿಕ್ ನೀಡಬಾರದು ಎಂದು ಐಸಿಎಂಆರ್ ಅಧ್ಯಯನ ಹೇಳಿದೆ.
ಒಂದು ವಾರದ ಹಿಂದೆ ಕೇಂದ್ರದ ಆರೋಗ್ಯ ಇಲಾಖೆಯು ಕೂಡ ಇನ್ಫೆಕ್ಷನ್ ಹರಡದಂತೆ ತಡೆಯುವ ಕಾರ್ಯಕ್ರಮಗಳನ್ನು ಆಸ್ಪತ್ರೆಗಳಲ್ಲಿ ಜಾರಿಗೆ ತರಬೇಕು ಎಂದು ಹೇಳಿದೆ. ಕೇಂದ್ರದ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲ ರಾಜ್ಯಗಳಿಗೂ ಪತ್ರ ಬರೆದಿದ್ದು, ಆಸ್ಪತ್ರೆಗಳ ಇನ್ಫೆಕ್ಷನ್ ನಿಯಂತ್ರಣ ಸಮಿತಿಗಳು ಸಕ್ರಿಯವಾಗಿ ಕೆಲಸ ಮಾಡಬೇಕೆಂದು ಹೇಳಿದ್ದಾರೆ. ಈ ಇನ್ಫೆಕ್ಷನ್ ಹರಡದಂತೆ ತಡೆಯಲು ನೋಡಲ್ ಆಫೀಸರ್ ನೇಮಿಸಬೇಕೆಂದು ಕೂಡ ಸೂಚಿಸಿದ್ದಾರೆ. ಅಲ್ಲದೆ ಮೈಕ್ರೋ ಬಯೋಲಾಜಿಸ್ಟ್ಗಳನ್ನು ಇನ್ಫೆಕ್ಷನ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರಗಳು ನೇಮಿಸಬೇಕಾಗಿದೆ.
ಇದನ್ನೂ ಓದಿ: