
ಕಾಕಿನಾಡ, ಅಕ್ಟೋಬರ್ 28: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ತೀವ್ರ ಸ್ವರೂಪದ ‘ಅರ್ನಬ್’ ಚಂಡಮಾರುತವು ಆಂಧ್ರಪ್ರದೇಶದ ಕಾಕಿನಾಡ ಮತ್ತು ಪುದುಚೇರಿಯ ಯಾನಂ ಕರಾವಳಿ ತೀರದ ನಡುವೆ ಅಪ್ಪಳಿಸಿದೆ . ಗಂಟೆಗೆ 125 ರಿಂದ 135 ಕಿಲೋಮೀಟರ್ ವೇಗದಲ್ಲಿ ಬೀಸಿದ ಬಿರುಗಾಳಿಯು ಹಲವೆಡೆ ಗರಿಷ್ಠ 150 ಕಿಲೋಮೀಟರ್ ವೇಗವನ್ನು ತಲುಪಿದೆ. ಚಂಡಮಾರುತದ ಅಬ್ಬರಕ್ಕೆ ಆಂಧ್ರಪ್ರದೇಶ ಕರಾವಳಿ ಮಾತ್ರವಲ್ಲದೆ ಪಕ್ಕದ ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ಕರಾವಳಿ ಭಾಗಗಳಲ್ಲಿಯೂ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯಂತೆ, ಭೂಕುಸಿತ ಪ್ರಕ್ರಿಯೆಯು ಮುಂದಿನ ಮೂರು ಗಂಟೆಗಳ ಕಾಲ ಮುಂದುವರಿಯಲಿದ್ದು, ಚಂಡಮಾರುತವು ನಿಧಾನವಾಗಿ ವಾಯುವ್ಯ ದಿಕ್ಕಿನಿಂದ ಉತ್ತರ-ವಾಯುವ್ಯಕ್ಕೆ ಸಾಗಿ ತೆಲಂಗಾಣದತ್ತ ಚಲಿಸುವ ವೇಳೆ ಕ್ರಮೇಣ ದುರ್ಬಲಗೊಳ್ಳಲಿದೆ.
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ತೀವ್ರ ಸ್ವರೂಪದ ಚಂಡಮಾರುತವು ಕಾಕಿನಾಡ ಮತ್ತು ಪುದುಚೇರಿಯ ಯಾನಂ ಕರಾವಳಿ ತೀರದ ನಡುವೆ ಅಪ್ಪಳಿಸಿದೆ. ಒಡಿಶಾ, ತೆಲಂಗಾಣ, ಪಶ್ಚಿಮ ಬಂ್ಆಳ ಮತ್ತು ತಮಿಳುನಾಡಿನ ಕರಾವಳಿ ಭಾಗಗಳಿಯೂ ಧಾರಾಕಾರ ಮಳೆ ಸುರಿಯುತ್ತಿಉದ್ದ
ಬುಡಮೇಲಾದ ಮರಗಳು ಹಾಗೂ ವಿದ್ಯುತ್ ಕಂಬಗಳು: ಕಾಕಿನಾಡ, ಕೋನಸೀಮಾ, ಅನಕಾಪಲ್ಲಿ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಲ್ಲಿ ನೂರಾರು ಮರಗಳು ಹಾಗೂ ಸಾವಿರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ರಾಷ್ಟ್ರೀಯ ಹೆದ್ದಾರಿ 216 ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮರಗಳು ಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. ವಿಶಾಖಪಟ್ಟಣದ ಬೀಚ್ ರೋಡ್, ಸೀತಮ್ಮಧಾರ ಸೇರಿದಂತೆ ಪ್ರಮುಖ ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ. ಮಂಗಳವಾರ ಬೆಳಿಗ್ಗೆಯಿಂದ ಬುಧವಾರ ನಸುಕಿನ ಜಾವದವರೆಗೆ ವಿಶಾಖಪಟ್ಟಣದಲ್ಲಿ ಬರೋಬ್ಬರಿ 216.9 ಮಿ.ಮೀ ಮಳೆ ದಾಖಲಾಗಿದೆ.
ಇದನ್ನೂ ಓದಿ:ಚಂಡಮಾರುತ ‘ಅರ್ನಬ್’ ಎಫೆಕ್ಟ್: ಹಲವು ರೈಲುಗಳ ಸಂಚಾರ ರದ್ದು, ಸಂಪೂರ್ಣ ಪಟ್ಟಿ ಇಲ್ಲಿದೆ
ಕರಾವಳಿಯಲ್ಲಿ 1.5 ರಿಂದ 2.5 ಮೀಟರ್ ಎತ್ತರದ ಬೃಹತ್ ಅಲೆಗಳು ಏಳುತ್ತಿದ್ದು, ಯಾನಂ ಸಮೀಪದ ಸವತ್ರಿ ನಗರದಲ್ಲಿ ಸಮುದ್ರದ ನೀರು ನುಗ್ಗಿ ಪರಿಹಾರ ಕೇಂದ್ರಗಳಿಗೂ ಹಾನಿಯಾಗಿದೆ. ಒಡಿಶಾದ ಗಜಪತಿ, ಗಂಜಾಂ, ರಾಯಗಡ, ಕೊರಾಪುಟ್, ನಬರಂಗ್‌ಪುರ ಮತ್ತು ಮಲ್ಕಂಗಿರಿ ಜಿಲ್ಲೆಗಳಿಗೆ ತೀವ್ರ ಮಳೆಯ ಎಚ್ಚರಿಕೆ ನೀಡಲಾಗಿದೆ. ಇಲ್ಲಿ ಗಂಟೆಗೆ 60 ರಿಂದ 90 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.
ಶಾಲಾ ಕಾಲೇಜುಗಳಿಗೆ ರಜೆ: ಮುನ್ನೆಚ್ಚರಿಕಾ ಕ್ರಮವಾಗಿ ಒಡಿಶಾದ 16 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, 48,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಪರಿಸ್ಥಿತಿಯನ್ನು ನೇರವಾಗಿ ಅವಲೋಕಿಸುತ್ತಿದ್ದು, ಈಗಾಗಲೇ 89,000ಕ್ಕೂ ಹೆಚ್ಚು ಜನರನ್ನು 2,000ಕ್ಕೂ ಹೆಚ್ಚು ಚಂಡಮಾರುತ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಎನ್‌ಡಿಆರ್‌ಎಫ್ (NDRF) ಹಾಗೂ ಎಸ್‌ಡಿಆರ್‌ಎಫ್ ಪಡೆಗಳು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ
ವಿಮಾನಗಳ ರದ್ದತಿ: ವಿಶಾಖಪಟ್ಟಣಂ, ವಿಜಯವಾಡ ಮತ್ತು ರಾಜಮಂಡ್ರಿ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಏರ್ ಇಂಡಿಯಾ, ಇಂಡಿಗೋ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಆಕಾಶ ಏರ್ ಸಂಸ್ಥೆಗಳು ವಿಶಾಖಪಟ್ಟಣ-ದೆಹಲಿ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವು ಮಾರ್ಗಗಳ 30ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿವೆ.
ವಿಮಾನಯಾನ ಸಚಿವಾಲಯದ ಸೂಚನೆ: ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ತಮ್ಮ ವಿಮಾನದ ನೈಜ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ (MoCA) ಕಟ್ಟುನಿಟ್ಟಿನ ಸಲಹೆ ನೀಡಿದೆ. ಪೂರ್ವ ಕರಾವಳಿ ರೈಲ್ವೆ ವಲಯದಲ್ಲಿ ಕರಾವಳಿ ಮಾರ್ಗವಾಗಿ ಸಂಚರಿಸುವ 50ಕ್ಕೂ ಹೆಚ್ಚು ಪ್ರಮುಖ ರೈಲುಗಳನ್ನು ರದ್ದುಪಡಿಸಲಾಗಿದೆ ಅಥವಾ ಮಾರ್ಗ ಬದಲಾವಣೆ ಮಾಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ