
ನವದೆಹಲಿ, ಅಕ್ಟೋಬರ್ 26: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡು ತೀವ್ರಗೊಳ್ಳುತ್ತಿರುವ ಹೊಸ ಚಂಡಮಾರುತ ಆಂಧ್ರ ಮತ್ತು ಒಡಿಶಾದ ರಾಜ್ಯದ ಹಲವು ಜಿಲ್ಲೆಗಳ ಜನರನ್ನು ಭಯಭೀತಗೊಳಿಸುತ್ತಿದೆ. ಅಕ್ಟೋಬರ್ 28ರಂದು ಇದು ಆಂಧ್ರ ಕರಾವಳಿ ಭಾಗಕ್ಕೆ ಅಡಿ ಇಡಲಿದೆ. ಆಂಧ್ರ ಮತ್ತು ಒಡಿಶಾ ಸರ್ಕಾರಗಳು ಚಂಡಮಾರುತದಿಂದ ಹೆಚ್ಚಿನ ಹಾನಿಯಾಗದಂತೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ.
ಈ ಚಂಡಮಾರುತಕ್ಕೆ ‘ಅರ್ನಬ್’ (Cyclone Arnab) ಎಂದು ಹೆಸರಿಸಲಾಗಿದೆ. ‘ಅರ್ನಬ್’ ಎಂದರೆ ಬಂಗಾಳಿ ಭಾಷೆಯಲ್ಲಿ ‘ಸಾಗರ’ ಅಥವಾ ‘ಸಮುದ್ರ’ ಎಂದು ಅರ್ಥೈಸಲಾಗುತ್ತದೆ. ಈ ಹೆಸರನ್ನು ನೀಡಿದ್ದು ಬಾಂಗ್ಲಾದೇಶ.
ಇದನ್ನೂ ಓದಿ: ರಾಹುಲ್ ಗಾಂಧಿಗೆ ಬಿಗ್ ರಿಲೀಫ್: ಅಮಿತ್ ಶಾ ವಿರುದ್ಧದ ಮಾನನಷ್ಟ ಮೊಕದ್ದಮೆ ವಜಾಗೊಳಿಸಿದ ಕೋರ್ಟ್
ವಿಶ್ವ ಹವಾಮಾನ ಸಂಸ್ಥೆ (WMO) ಮತ್ತು ಯುಎನ್ ESCAP ನ ಸಮಿತಿಯು 2020ರ ಏಪ್ರಿಲ್‌ನಲ್ಲಿ ಉತ್ತರ ಹಿಂದೂ ಮಹಾಸಾಗರ ಪ್ರದೇಶಕ್ಕಾಗಿ (ಬಂಗಾಳಕೊಲ್ಲಿ ಮತ್ತು ಅರೇಬಿಯನ್ ಸಮುದ್ರ ಸೇರಿದಂತೆ) ಒಟ್ಟು 13 ದೇಶಗಳು ನೀಡಿದ ಒಟ್ಟು 169 ಹೆಸರುಗಳ ಪಟ್ಟಿಯನ್ನು ಅಳವಡಿಸಿಕೊಂಡಿದೆ. ಭಾರತ, ಬಾಂಗ್ಲಾದೇಶ, ಮಾಲ್ಡೀವ್ಸ್, ಮ್ಯಾನ್ಮಾರ್, ಓಮಾನ್, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ, ಶ್ರೀಲಂಕಾ, ಥೈಲ್ಯಾಂಡ್, ಯುಎಇ ಮತ್ತು ಯೆಮನ್ ದೇಶಗಳು ತಲಾ 13 ಹೆಸರುಗಳನ್ನು ನೀಡಿವೆ. ಇದರ ಅನುಕ್ರಮದಡಿಯೇ ಈ ಚಂಡಮಾರುತಕ್ಕೆ ‘ಅರ್ನಬ್’ ಎಂದು ಹೆಸರಿಸಲಾಗಿದೆ.
ಒಂದೇ ಸಮಯದಲ್ಲಿ ಅನೇಕ ಚಂಡಮಾರುತಗಳು ಬಂದಾಗ ಗೊಂದಲ ಉಂಟಾಗುವುದನ್ನು ತಡೆಯಲು, ಸಾರ್ವಜನಿಕರಿಗೆ ಎಚ್ಚರಿಕೆಗಳನ್ನು ಸುಲಭವಾಗಿ ತಲುಪಿಸಲು ಮತ್ತು ಹವಾಮಾನ ವೈಪರೀತ್ಯಗಳನ್ನು ಪ್ರತ್ಯೇಕವಾಗಿ ಗುರುತಿಸಲು ಈ ನಾಮಕರಣ ಪದ್ಧತಿಯು ಸಹಕಾರಿಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಇದೇ ವೇಳೆ, ಅರ್ನಬ್ ಚಂಡಮಾರುತದ ಪ್ರಭಾವದಿಂದ ಆಂಧ್ರಪ್ರದೇಶ ಹಾಗೂ ಒಡಿಶಾ ರಾಜ್ಯಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೀವ್ರಗೊಳಿಸಲಾಗಿದ್ದು, ಯಾವುದೇ ಪ್ರಾಣಹಾನಿಯಾಗದಂತೆ ಶೂನ್ಯ ಹಾನಿಯ ಗುರಿಯೊಂದಿಗೆ ಸರ್ಕಾರಗಳು ಸನ್ನದ್ಧವಾಗಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ