ಆಂಧ್ರ ಸಮೀಪಿಸುತ್ತಿದೆ ಅರ್ನಬ್ ಚಂಡಮಾರುತ; 4 ರಾಜ್ಯಗಳಲ್ಲಿ ಹೈ ಅಲರ್ಟ್​, ಭೂಕುಸಿತದ ಎಚ್ಚರಿಕೆ

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಅರ್ನಬ್' ಚಂಡಮಾರುತವು ತೀವ್ರರೂಪ ಪಡೆದುಕೊಂಡು ಆಂಧ್ರಪ್ರದೇಶದ ಕರಾವಳಿಯತ್ತ ಭರದಿಂದ ಸಾಗುತ್ತಿದ್ದು, ಅಕ್ಟೋಬರ್ 28ರ ಬೆಳಿಗ್ಗೆ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ, ಛತ್ತೀಸ್‌ಗಢ ಮತ್ತು ಪುದುಚೇರಿ ರಾಜ್ಯಗಳಲ್ಲಿ ತೀವ್ರ ಕಟ್ಟೆಚ್ಚರ ಘೋಷಿಸಿದೆ. ಆಂಧ್ರಪ್ರದೇಶದ ಕರಾವಳಿಯತ್ತ ಧಾವಿಸುತ್ತಿರುವ 'ಅರ್ನಬ್' ಚಂಡಮಾರುತದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ 60ಕ್ಕೂ ಹೆಚ್ಚು ಪ್ರಮುಖ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. 2 ರೈಲುಗಳ ಮಾರ್ಗವನ್ನು ಬದಲಾಯಿಸಿವೆ.

ಆಂಧ್ರ ಸಮೀಪಿಸುತ್ತಿದೆ ಅರ್ನಬ್ ಚಂಡಮಾರುತ; 4 ರಾಜ್ಯಗಳಲ್ಲಿ ಹೈ ಅಲರ್ಟ್​, ಭೂಕುಸಿತದ ಎಚ್ಚರಿಕೆ
ಚಂಡಮಾರುತ
Image Credit source: Getty Images

Updated on: Oct 26, 2026 | 9:21 PM

ವಿಶಾಖಪಟ್ಟಣ, ಅಕ್ಟೋಬರ್ 26: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಅರ್ನಬ್’ ಚಂಡಮಾರುತವು ಭರದಿಂದ ಆಂಧ್ರಪ್ರದೇಶದ ಕರಾವಳಿಯತ್ತ ಸಾಗುತ್ತಿದ್ದು, ಕರಾವಳಿಗೆ ಅಪ್ಪಳಿಸುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಭಾರತೀಯ ಹವಾಮಾನ ಇಲಾಖೆ ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ ಮತ್ತು ಛತ್ತೀಸ್‌ಗಢ ಸೇರಿದಂತೆ 4 ರಾಜ್ಯಗಳಲ್ಲಿ ತೀವ್ರ ಕಟ್ಟೆಚ್ಚರ ಘೋಷಿಸಿವೆ. ಇದಲ್ಲದೆ, ಚಂಡಮಾರುತದ ಪ್ರಭಾವದಿಂದಾಗಿ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ, ವಿಶೇಷವಾಗಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಸೇರಿದಂತೆ ಗಿರಿಧಾಮಗಳಲ್ಲಿ ಭಾರಿ ಭೂಕುಸಿತ ಸಂಭವಿಸುವ ಎಚ್ಚರಿಕೆಯನ್ನು ನೀಡಲಾಗಿದೆ.

ಅರ್ನಬ್ ಚಂಡಮಾರುತವು ಮಂಗಳವಾರದ ವೇಳೆಗೆ ಅತ್ಯಂತ ತೀವ್ರ ಸ್ವರೂಪ ಪಡೆದುಕೊಂಡು ಆಂಧ್ರಪ್ರದೇಶದ ಬಾಪಟ್ಲಾ ಮತ್ತು ವಿಶಾಖಪಟ್ಟಣ (ಯಾನಾಂ ಬಳಿ) ನಡುವೆ ಕರಾವಳಿ ದಾಟುವ ನಿರೀಕ್ಷೆಯಿದೆ. ಕರಾವಳಿ ದಾಟುವ ಸಂದರ್ಭದಲ್ಲಿ ಗಂಟೆಗೆ 115ರಿಂದ 125 ಕಿ.ಮೀ, ಗರಿಷ್ಠ 140 ಕಿ.ಮೀ ವೇಗದಲ್ಲಿ ಭಾರಿ ಚಂಡಮಾರುತದ ಬಿರುಗಾಳಿ ಬೀಸಲಿದೆ.

ರಕ್ಷಣಾ ಪಡೆಗಳ ನಿಯೋಜನೆ:

ಈಗಾಗಲೇ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಪಡೆಗಳನ್ನು ಅಪಾಯಕಾರಿ ಪ್ರದೇಶಗಳಲ್ಲಿ ನಿಯೋಜಿಸಲಾಗಿದ್ದು, ಭೂಸೇನೆ, ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಪಡೆಗಳನ್ನು ತುರ್ತು ಕಾರ್ಯಾಚರಣೆಗೆ ಸಜ್ಜಾಗಿಡಲಾಗಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ತೀವ್ರವಾಗಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಇದನ್ನೂ ಓದಿ: ಆಂಧ್ರ, ಒಡಿಶಾದಲ್ಲಿ ಅ. 28ಕ್ಕೆ ಚಂಡಮಾರುತ ಅಬ್ಬರ; ಕರ್ನಾಟಕದಲ್ಲೂ ಬಿರುಗಾಳಿ ಸಹಿತ ಮಳೆಯ ಅಲರ್ಟ್

60ಕ್ಕೂ ಹೆಚ್ಚು ರೈಲುಗಳ ರದ್ದು:

ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು ಹಾಗೂ ತೆಲಂಗಾಣ ಸಂಪರ್ಕಿಸುವ 60ಕ್ಕೂ ಹೆಚ್ಚು ಎಕ್ಸ್‌ಪ್ರೆಸ್ ಮತ್ತು ಸೂಪರ್‌ಫಾಸ್ಟ್ ರೈಲುಗಳ ಸಂಚಾರವನ್ನು ಅಕ್ಟೋಬರ್ 27ರಿಂದ 29ರವರೆಗೆ ರದ್ದುಗೊಳಿಸಲಾಗಿದೆ. 2 ಪ್ರಮುಖ ದೂರಸಂಪರ್ಕ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದ್ದು, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಪರ್ಯಾಯ ಮಾರ್ಗಗಳಲ್ಲಿ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ.

ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು 24/7 ನಿಯಂತ್ರಣ ಕೊಠಡಿಗಳನ್ನು ತೆರೆಯಲು ಮತ್ತು ಕರಾವಳಿ ಗ್ರಾಮಗಳ ಗರ್ಭಿಣಿಯರನ್ನು ಮುಂಚಿತವಾಗಿಯೇ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಆದೇಶಿಸಿದ್ದಾರೆ. ರಕ್ಷಣೆಗಾಗಿ 10 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ವಿದ್ಯುತ್ ಕಂಬಗಳು ಸೇರಿದಂತೆ ತುರ್ತು ಸಾಮಗ್ರಿಗಳನ್ನು ಕಾಯ್ದಿರಿಸಲಾಗಿದೆ.

ಇದನ್ನೂ ಓದಿ: ‘ಅರ್ನಬ್ ಚಂಡಮಾರುತ’ ಎಂದರೇನು? ಈ ಹೆಸರು ಬಂದಿದ್ದು ಹೇಗೆ ಇತ್ಯಾದಿ ವಿವರ

ಒಡಿಶಾದಲ್ಲಿ ಗಂಜಾಂ, ಗಜಪತಿ, ರಾಯಗಡ, ಮಲ್ಕಾನ್‌ಗಿರಿ, ಕೊರಾಪುಟ್ ಮತ್ತು ನಬರಂಗ್‌ಪುರ ಸೇರಿದಂತೆ 6 ಜಿಲ್ಲೆಗಳಲ್ಲಿ ತೀವ್ರ ನಿಗಾ ವಹಿಸಲಾಗಿದ್ದು, ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು 8 ಸಚಿವರನ್ನು ಮೇಲ್ವಿಚಾರಣೆಗೆ ನೇಮಿಸಿದ್ದಾರೆ. ಗಿರಿಧಾಮಗಳು, ಜಲಪಾತಗಳು ಮತ್ತು ಜಲಾಶಯಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us