ದೆಹಲಿ ದಸರಾ ಸಂಭ್ರಮದಲ್ಲಿ 30 ಅಡಿ ಎತ್ತರದ ‘ಜಿರಳೆ’ ಪ್ರತಿಕೃತಿ ದಹನ: ‘ಉಚಿತ ಪ್ರಚಾರಕ್ಕೆ ಧನ್ಯವಾದ’ ಎಂದ ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ

ದೆಹಲಿ ದಸರಾ ಆಚರಣೆಯಲ್ಲಿ 30 ಅಡಿ ಜಿರಳೆ ಪ್ರತಿಕೃತಿ ದಹನ ದೊಡ್ಡ ರಾಜಕೀಯ ವಿವಾದ ಸೃಷ್ಟಿಸಿದೆ. 'ಕಾಕ್ರೋಚ್ ಜನತಾ ಪಕ್ಷ' (CJP) ಗುರಿಯಾಗಿಸಿ ಈ ಕೃತ್ಯ ನಡೆದಿದೆ ಎಂದು ಸಿಜೆಪಿ ಆರೋಪಿಸಿದೆ. ಸಂಘಟಕರ ಪ್ರಕಾರ ಇದು ಸ್ವಚ್ಛತೆಯ ಸಂದೇಶ. ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ, ಇದು ನಮಗೆ 'ಉಚಿತ ಪ್ರಚಾರ' ಎಂದಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ದೆಹಲಿ ದಸರಾ ಸಂಭ್ರಮದಲ್ಲಿ 30 ಅಡಿ ಎತ್ತರದ ಜಿರಳೆ ಪ್ರತಿಕೃತಿ ದಹನ: ‘ಉಚಿತ ಪ್ರಚಾರಕ್ಕೆ ಧನ್ಯವಾದ’ ಎಂದ ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ
ಅಭಿಜಿತ್ ದಿಪ್ಕೆ
Image Credit source: PTI
Edited By:

Updated on: Oct 21, 2026 | 10:00 AM

ನವದೆಹಲಿ, ಅಕ್ಟೋಬರ್ 21: ದೆಹಲಿಯಲ್ಲಿ ನಡೆದ ದಸರಾ ಆಚರಣೆಯ ಸಂದರ್ಭದಲ್ಲಿ ರಾವಣ, ಕುಂಭಕರ್ಣ ಮತ್ತು ಮೇಘನಾದರ ಪ್ರತಿಕೃತಿಗಳ ಜತೆ ಬೃಹತ್ 30 ಅಡಿ ಎತ್ತರದ ಜಿರಳೆಯ ಪ್ರತಿಕೃತಿಯನ್ನು ದಹಿಸಿರುವುದು ಭಾರಿ ರಾಜಕೀಯ ಮತ್ತು ಸಾಮಾಜಿಕ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿರುವ ‘ಕಾಕ್ರೋಚ್ ಜನತಾ ಪಕ್ಷ’ (CJP) ಸಂಘಟನೆಯನ್ನು ಗುರಿಯಾಗಿಸಿಕೊಂಡೇ ಈ ದಹನ ಕಾರ್ಯ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ, “ನಮಗೆ ಉಚಿತ ಪ್ರಚಾರ ನೀಡಿದ್ದಕ್ಕಾಗಿ ಧನ್ಯವಾದಗಳು” ಎಂದು ಲೇವಡಿ ಮಾಡಿದ್ದಾರೆ.

ಸ್ವಚ್ಛತೆಯ ಸಂಕೇತ ಎಂದ ಸಮಿತಿ
ಪಿತಾಂಪುರದ ನೇತಾಜಿ ಸುಭಾಷ್ ಪ್ಲೇಸ್ ಮೈದಾನದಲ್ಲಿ ಶ್ರೀ ಕೇಶವ ರಾಮಲೀಲಾ ಸಮಿತಿಯು ಈ ಕಾರ್ಯಕ್ರಮ ಆಯೋಜಿಸಿತ್ತು. ಸಮಿತಿಯ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಅಶೋಕ್ ಗೋಯೆಲ್ ದೇವ್ರಾಹಾ ಮಾತನಾಡಿ, “ಜಿರಳೆ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯನ್ನು ಕೆಣಕುವ ಉದ್ದೇಶ ಹೊಂದಿಲ್ಲ. ಇದು ಕೊಳಕು, ಅನೈರ್ಮಲ್ಯ ಹಾಗೂ ರೋಗಗಳ ಸಂಕೇತ. ಸ್ವಚ್ಛ ಭಾರತ ಮತ್ತು ಸ್ವಚ್ಛ ದೆಹಲಿ ಅಭಿಯಾನದ ಭಾಗವಾಗಿ ಸಾರ್ವಜನಿಕರಲ್ಲಿ ನೈರ್ಮಲ್ಯದ ಜಾಗೃತಿ ಮೂಡಿಸಲು ಈ ಪ್ರತಿಕೃತಿ ದಹಿಸಲಾಗಿದೆ” ಎಂದು ಸ್ಪಷ್ಟನೆ ನೀಡಿದರು.

ಸಿಜೆಪಿ ಆಕ್ರೋಶ ಮತ್ತು ವ್ಯಂಗ್ಯ:
ಆದರೆ, ಸಿಜೆಪಿ ಕಾನೂನು ಮುಖ್ಯಸ್ಥೆ ರತ್ನಾ ಸಿಂಗ್ ಮಾತನಾಡಿ, ದಸರಾದಂದು ನಮ್ಮ ಸಂಕೇತವಾದ ಜಿರಳೆಯ ಪ್ರತಿಕೃತಿಯನ್ನು ಸುಡುತ್ತಿರುವುದು ಆಡಳಿತ ಪಕ್ಷ ಎಷ್ಟು ಹತಾಶೆಗೊಂಡಿದೆ ಎಂಬುದನ್ನು ತೋರಿಸುತ್ತದೆ. ನಮ್ಮನ್ನು ಪ್ರಬಲ ಸ್ಪರ್ಧಿಯಾಗಿ ಪರಿಗಣಿಸುತ್ತಿರುವುದಕ್ಕೆ ಖುಷಿಯಿದೆ ಎಂದರು.

ಇದನ್ನೂ ಓದಿ: ರಾಮಲೀಲಾ ಮೈದಾನದಲ್ಲಿ ಈ ಬಾರಿ ರಾವಣನ ಜತೆ ಬೂದಿಯಾಗಲಿದೆ 30 ಅಡಿ ಎತ್ತರದ ಜಿರಳೆ ಪ್ರತಿಕೃತಿ

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ‘ಕಾಕ್ರೋಚ್ ಜನತಾ ಪಕ್ಷ’ ಇತ್ತೀಚಿನ ದಿನಗಳಲ್ಲಿ ಆಡಳಿತ ವಿರೋಧಿ ಧ್ವನಿ ಎತ್ತುತ್ತಾ ಯುವಜನರಲ್ಲಿ ಗಮನ ಸೆಳೆಯುತ್ತಿದೆ. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಅರುಣ್ ಸಿಂಗ್, ಕಪಿಲ್ ಮಿಶ್ರಾ ಮತ್ತು ವಿಎಚ್‌ಪಿ ನಾಯಕ ಕಪಿಲ್ ಖನ್ನಾ ಉಪಸ್ಥಿತರಿದ್ದರು.

ಕಾರ್ಯಕರ್ತರ ಬಂಧನ: ಶಾಂತಿ ಕದಡಿದ ಆರೋಪದ ಮೇಲೆ ಸಿಜೆಪಿ ವಕ್ತಾರರಾದ ಸೌರಭ್ ದಾಸ್ ಮತ್ತು ಅಶುತೋಷ್ ರಂಕಾ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹಬ್ಬದ ದಿನಗಳಲ್ಲಿ ಸಂಘರ್ಷದಿಂದ ದೂರವಿದ್ದು, ಕುಟುಂಬದೊಂದಿಗೆ ಸಮಯ ಕಳೆಯುವಂತೆ ಸ್ವಯಂಸೇವಕರಿಗೆ ದಿಪ್ಕೆ ಕರೆ ನೀಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:05 am, Wed, 21 October 26

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us