ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಪತ್ನಿ, ವಿಶ್ವಸಂಸ್ಥೆಯ ಮಾಜಿ ಸಹಾಯಕ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಪುರಿ ವಿರುದ್ಧ ಕಾಂಗ್ರೆಸ್ ಬೆಂಬಲಿಗ, ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ ಎಂಬುವರು ಒಂದು ಗಂಭೀರ ಆರೋಪ ಮಾಡಿದ್ದಾರೆ. ಲಕ್ಷ್ಮೀ ಪುರಿ ತಮ್ಮ ಆದಾಯಕ್ಕೆ ಮೀರಿದ ಆಸ್ತಿ ಮಾಡಿದ್ದಾರೆ..ಸ್ವಿಜರ್ಲ್ಯಾಂಡ್ನಲ್ಲಿ ಬಹುಮೊತ್ತದ ಆಸ್ತಿ ಖರೀದಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ತಮ್ಮ ವಿರುದ್ಧ ಗಂಭೀರ ಆರೋಪ ಮಾಡಿದ ಸಾಕೇತ್ ಗೋಖಲೆ ವಿರುದ್ಧ ಲಕ್ಷ್ಮೀ ಪುರಿ ದೆಹಲಿ ಹೈಕೋರ್ಟ್ನಲ್ಲಿ 5 ಕೋಟಿ ರೂ.ನ ಮಾನನಷ್ಟ ಮೊಕದ್ದಮೆ ಹೂಡಿದ್ದು, ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ನ್ಯಾಯಾಧೀಶ ಸಿ.ಹರಿಶಂಕರ್ ಅವರು ಪ್ರಸ್ತುತ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಸದ್ಯ ಮಾನನಷ್ಟ ಮೊಕದ್ದಮೆ ಸಂಬಂಧ ತೀರ್ಪು ಕಾದಿರಿಸಿದ್ದಾರೆ. ಆದರೆ ಸಾಕೇತ್ ಗೋಖಲೆ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅದು ಹೇಗೆ ನೀವು ಬೇರೆಯವರನ್ನು ಈ ರೀತಿ ನಿಂದಿಸುತ್ತೀರಿ? ಹೀಗೆ ಆಪಾದನೆ ಮಾಡುವುದಕ್ಕೂ ಮೊದಲು ನೀವು ಯಾರ ಬಗ್ಗೆ ಆರೋಪ ಮಾಡುತ್ತಿದ್ದಿರೋ ಅವರನ್ನು ಸಂಪರ್ಕಿಸಿದ್ದೀರಾ? ಏನಾದರೂ ಸ್ಪಷ್ಟನೆ ತೆಗೆದುಕೊಂಡಿದ್ದೀರಾ ಎಂದೂ ನ್ಯಾಯಾಧೀಶರು ಸಾಕೇತ್ ಗೋಖಲೆ ಪ್ರಶ್ನಿಸಿದ್ದಾರೆ.
ಲಕ್ಷ್ಮೀ ಪುರಿ ತಮ್ಮ ಪರ ವಕೀಲರಾದ ಮನೀಂದರ್ ಸಿಂಗ್ ಮೂಲಕ ಕೋರ್ಟ್ಗೆ ಮಾಹಿತಿ ಸಲ್ಲಿಸಿದ್ದು, ಅದರಲ್ಲಿ, ನಾನು ಎಲ್ಲಿಯೂ ಆಸ್ತಿಯನ್ನಾಗಲಿ, ಸಾರ್ವಜನಿಕ ಕಚೇರಿಯನ್ನಾಗಲೀ ಹೊಂದಿಲ್ಲ. ಇದನ್ನು ಅವರು ದುರದ್ದೇಶಪೂರಕವಾಗಿಯೇ ಮಾಡಿದ್ದಾರೆ. ಸಾಕೇತ್ ಗೋಖಲೆಯವರ ಟ್ವೀಟ್ಗೆ ಪ್ರತಿಯಾಗಿ ನಾನು ಲೀಗಲ್ ನೋಟಿಸ್ ಕಳಿಸಿದಾಗ, ನೀವು ಕೋರ್ಟ್ ಅಲ್ಲ ಎಂಬ ಮಾತು ಕೇಳಬೇಕಾಯಿತು. ಹಾಗಾಗಿ ನ್ಯಾಯಾಲಯಕ್ಕೇ ಬರಬೇಕಾಯಿತು ಎಂದೂ ಇದರಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಸಾಕೇತ್ ಗೋಖಲೆ ಪರವಾಗಿ ವಕೀಲರಾದ ಸರೀಮ್ ನವೇದ್ ವಾದ ಮಂಡಿಸಿದ್ದಾರೆ. ನನ್ನ ಕಕ್ಷಿದಾರರು ಒಬ್ಬ ನಾಗರಿಕರಾಗಿ, ಒಬ್ಬ ಸಾರ್ವಜನಿಕ ವ್ಯಕ್ತಿಯ ಆಸ್ತಿ ಬಗ್ಗೆ ತಿಳಿಯುವ ಎಲ್ಲ ಹಕ್ಕುಗಳನ್ನೂ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಇದೇ ವಾದಕ್ಕೆ ಪ್ರತಿಯಾಗಿ ದೆಹಲಿ ಹೈಕೋರ್ಟ್ ಕಟು ತಿರುಗೇಟು ನೀಡಿದೆ. ಸಾಕೇತ್ ಗೋಖಲೆ ಟ್ವಿಟರ್ನಲ್ಲಿ ಹೀಗೆ ಆಪಾದನೆ ಮಾಡುವುದಕ್ಕೂ ಮೊದಲು ಲಕ್ಷ್ಮೀ ಪುರಿ ಅವರ ಬಳಿ ಹೋಗಿ ಸ್ಪಷ್ಟನೆ ಪಡೆದಿದ್ದೀರಿ ಎಂಬುದಕ್ಕೆ ದಾಖಲೆ ಕೊಡಿ ಎಂದು ನ್ಯಾಯಾಧೀಶರು ಕೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ನವೇದ್, ಅದರ ಅಗತ್ಯವಿತ್ತು ಎಂದು ನನಗೆ ಅನ್ನಿಸುತ್ತಿಲ್ಲ ಎಂದೂ ಹೇಳಿದ್ದಾರೆ. ಆಗ ಮತ್ತೆ ನ್ಯಾಯಾಧೀಶರು ಪ್ರತಿಕ್ರಿಯಿಸಿ, ಅಂದರೆ ನಿಮ್ಮ ಅರ್ಥ, ಯಾವುದೇ ಜನಸಾಮಾನ್ಯರೂ ತಮ್ಮ ಮನಸಿಗೆ ಬಂದಂತೆ ಯಾವುದೇ ವ್ಯಕ್ತಿಯ ಬಗ್ಗೆ ಹೀಗೆ ನಿಂದಿಸಿ, ಆಪಾದಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಬರೆಯಬಹುದು ಎಂದಾ? ಎಂದು ಪಶ್ನೆ ಹಾಕಿದ್ದಾರೆ.
ಲಕ್ಷ್ಮೀ ಪುರಿ ಅವರು ಕೋರ್ಟ್ಗೆ ಸಲ್ಲಿಸಿದ ದಾಖಲೆಯಲ್ಲಿ ತಮ್ಮ ಮಗಳ ಹೆಸರಲ್ಲಿ ತೆಗೆದುಕೊಳ್ಳಲಾದ ಸಾಲದ ಮೊತ್ತ, ಅದರ ಉದ್ದೇಶಗಳನ್ನೂ ಹೇಳಿದ್ದಾರೆ. ಸುಮ್ಮನೆ ಇನ್ನೊಬ್ಬರ ಮೇಲೆ ಕೆಸರೆರಚುವುದು ಸರಿಯಲ್ಲ ಎಂದು ಕೋರ್ಟ್ ಸಾಕೇತ್ ಗೋಖಲೆ ಮತ್ತು ಅವರ ಪರ ವಕೀಲರಿಗೆ ಹೇಳಿದೆ. ಸದ್ಯ ಮಾನನಷ್ಟ ಮೊಕದ್ದಮೆ ಬಗ್ಗೆ ಯಾವುದೇ ತೀರ್ಪು ನೀಡಿಲ್ಲ.
ಇದನ್ನೂ ಓದಿ: ವಿಶ್ವದಲ್ಲಿಯೇ ಅತಿ ಚಿಕ್ಕ ಹಸುವಿದು! ಬಾಂಗ್ಲಾದೇಶದ ಕುಬ್ಜ ಹಸುವಿನ ಆಕರ್ಷಣೆಗೆ ಆಶ್ಚರ್ಯಗೊಂಡ ಪ್ರವಾಸಿಗರು
Delhi High Court slammed Saket Gokhale for putting alleged defamatory tweets against Lakshmi M Puri
Published On - 3:18 pm, Thu, 8 July 21