ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರ ನಿವಾಸವನ್ನು ನವೀಕರಿಸಲು ₹ 44.78 ಕೋಟಿ ವೆಚ್ಚ ಮಾಡಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಲೆಫ್ಟಿನೆಂಟ್ ಗವರ್ನರ್ (LG) ವಿಕೆ ಸಕ್ಸೇನಾ (VK Saxena )ಅವರು ಎಲ್ಲಾ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರಿಗೆ ಸೂಚಿಸಿದ್ದಾರೆ. ಇದು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾದ ವಿವಿಧ ಮಾಧ್ಯಮ ವರದಿಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಪಿಡಬ್ಲ್ಯುಡಿಯಿಂದ ಸಿವಿಲ್ ಲೈನ್ಸ್ನ ನಂ.6 ಫ್ಲ್ಯಾಗ್ ಸ್ಟಾಫ್ ಹೌಸ್ ನವೀಕರಣವನ್ನು ಕೈಗೊಳ್ಳುವಾಗ ಮಾಡಿದ ಆಪಾದಿತ ಅಕ್ರಮಗಳ ಕುರಿತು ಮಾಧ್ಯಮಗಳು ವರದಿ ಮಾಡಿದ್ದವು. ಮಾಧ್ಯಮ ವರದಿಗಳನ್ನು ಗಮನಿಸಿ ಮತ್ತು ಸಮಸ್ಯೆಯ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ಈ ವಿಷಯದಲ್ಲಿ ಎಲ್ಲಾ ಸಂಬಂಧಿತ ದಾಖಲೆಗಳನ್ನು ತಕ್ಷಣವೇ ಸುರಕ್ಷಿತಗೊಳಿಸಬೇಕು ಮತ್ತು ರಕ್ಷಣಾತ್ಮಕ ಕಸ್ಟಡಿಗೆ ತೆಗೆದುಕೊಳ್ಳಬೇಕು ಎಂದು ಲೆಫ್ಟಿನೆಂಟ್ ಗವರ್ನರ್ ಹೇಳಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದ ನಂತರ, ಎಲ್‌ಜಿಯ ಪರಿಶೀಲನೆಗಾಗಿ 15 ದಿನಗಳಲ್ಲಿ ಈ ವಿಷಯದ ವಾಸ್ತವ ವರದಿಯನ್ನು ಸಲ್ಲಿಸಬೇಕ ಎಂದು ಎಲ್‌ಜಿ ಕಚೇರಿಯು ಮುಖ್ಯ ಕಾರ್ಯದರ್ಶಿಗೆ ಏಪ್ರಿಲ್ 27 ರಂದು ಬರೆದ ಪತ್ರದಲ್ಲಿ ತಿಳಿಸಲಾಗಿದೆ.
ಕೇಜ್ರಿವಾಲ್ ಅವರ ಅಧಿಕೃತ ಬಂಗಲೆ ನವೀಕರಣಕ್ಕೆ ಖರ್ಚು ಮಾಡಿದ ಹಣದ ವಿವರಗಳು ಹೊರಬಂದ ನಂತರ ಬಿಜೆಪಿ ಎಎಪಿ ವಿರುದ್ದ ವಾಗ್ದಾಳಿಯನ್ನು ಮತ್ತಷ್ಚು ತೀವ್ರಗೊಳಿಸಿದೆ.
ಕೇಜ್ರಿವಾಲ್ ಅವರು ಸಾಮಾನ್ಯ ವ್ಯಕ್ತಿ ಎಂದು ಹೇಳುತ್ತಾ ರಾಜ ನಂತೆ ಬದುಕುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಪ್ರತಿಯಾಗಿ, ಆಮ್ ಆದ್ಮಿ ಪಕ್ಷವು 80 ವರ್ಷಗಳ ಹಿಂದೆ ನಿರ್ಮಿಸಿದ ಹಳೇ ಕಟ್ಟಡ ಇದಾಗಿದ್ದು ಇತ್ತೀಚಿಗೆ ಮೇಲ್ಛಾವಣಿ ಕುಸಿದಿರುವ ಕಾರಣ ನವೀಕರಣ ಅಗತ್ಯ ಎಂದು ಒತ್ತಿಹೇಳಿದೆ. ಇದರ ಬೆನ್ನಲ್ಲೇ ಬಂಗಲೆಯ ನಿರ್ವಹಣೆಯ ಹೊಣೆ ಹೊತ್ತಿರುವ ಲೋಕೋಪಯೋಗಿ ಇಲಾಖೆಯು ಅದನ್ನು ಮರುನಿರ್ಮಾಣ ಮಾಡಲು ಶಿಫಾರಸು ಮಾಡಿದೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಇದನ್ನೂ ಓದಿ: Mann Ki Baat: ನಾಳೆ ಮನ್ ಕೀ ಬಾತ್ನ ನೂರನೇ ಆವೃತ್ತಿ; ತಮ್ಮದೇ ಮನದ ಮಾತು ಕೇಳಲು ಮೋದಿ ಎಲ್ಲಿರುತ್ತಾರೆ ಗೊತ್ತೇ?
ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್, ತಮ್ಮ ಪಕ್ಷವು ವೆಚ್ಚದ ಬಗ್ಗೆ ತನಿಖೆಗೆ ಒತ್ತಾಯಿಸುತ್ತಿದೆ ಎಂದು ಹೇಳಿದ್ದಾರೆ. ಖರ್ಚು ಮಾಡಿದ ಹಣವು ನಿಯಮಗಳ ಉಲ್ಲಂಘನೆಯಾಗಿದೆ ಎಂದು ತೋರುತ್ತದೆ. ವೆಚ್ಚದಲ್ಲಿ ಅಧಿಕ ಬಿಲ್ಲಿಂಗ್‌ನ ಸ್ಪಷ್ಟ ನಿದರ್ಶನಗಳೂ ಇವೆ. ತನಿಖೆ ಆಗಬೇಕು ಎಂದು ಅವರು ಹೇಳಿದ್ದು,ಎಎಪಿ ಆರೋಪಗಳನ್ನು ತಳ್ಳಿ ಹಾಕಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ