
ಚಂಡೀಗಢ, ಅಕ್ಟೋಬರ್ 19: ಹರಿಯಾಣದಲ್ಲಿ ಬಸ್‌ಗಳ ಮೇಲೆ ಕಲ್ಲುತೂರಾಟ ನಡೆದ ಬೆನ್ನಲ್ಲೇ, ಪಂಜಾಬ್‌ನ ಖನ್ನಾ ಪ್ರದೇಶದಲ್ಲಿ ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಪ್ರಯಾಣಿಕರ ಬಸ್ ಒಂದರ ಮೇಲೆ ದುಷ್ಕರ್ಮಿಗಳು ಮತ್ತೆ ದಾಳಿ ನಡೆಸಿರುವ ಘಟನೆ ನಡೆದಿದೆ. ಈ ಸರಣಿ ದಾಳಿಗಳಿಂದಾಗಿ ಪ್ರಯಾಣಿಕರಲ್ಲಿ ಭೀತಿ ಆವರಿಸಿದೆ. ದೆಹಲಿಯಿಂದ ಕಾಶ್ಮೀರದ ಶ್ರೀನಗರದತ್ತ ಹೊರಟಿದ್ದ ಬಸ್ ಪಂಜಾಬ್‌ನ ಖನ್ನಾ ತಲುಪಿದಾಗ, ಅಪರಿಚಿತ ವ್ಯಕ್ತಿಗಳ ಗುಂಪು ಏಕಾಏಕಿ ಬಸ್ ಮೇಲೆ ಕಲ್ಲುಗಳನ್ನು ತೂರಿ ದಾಳಿ ನಡೆಸಿದೆ. ಈ ಅನಿರೀಕ್ಷಿತ ದಾಡಿಯಿಂದ ಬಸ್‌ನ ಗಾಜುಗಳು ಪುಡಿಯಾಗಿವೆ.
ಪ್ರಯಾಣಿಕರಿಗೆ ತಪ್ಪಿದ ಅಪಾಯ:
ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೂ ದಿಢೀರ್ ದಾಳಿಯಿಂದಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾಗಿದ್ದರು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಖನ್ನಾ ಪೊಲೀಸರು ಪರಿಶೀಲನೆ ನಡೆಸಿದ್ದು, ದಾಳಿಕೋರರನ್ನು ಪತ್ತೆಹಚ್ಚಲು ಮತ್ತು ಕಾನೂನು ಕ್ರಮ ಕೈಗೊಳ್ಳಲು ತನಿಖೆ ಆರಂಭಿಸಿದ್ದಾರೆ. ಹರಿಯಾಣದಲ್ಲೂ ಇದೇ ರೀತಿಯ ಕಲ್ಲೆಸೆತದ ಘಟನೆಗಳು ವರದಿಯಾಗಿರುವುದರಿಂದ, ಈ ಎರಡೂ ಘಟನೆಗಳ ಹಿಂದೆ ಯಾವುದಾದರೂ ಸಂಚು ಇದೆಯೇ ಎಂಬ ಕೋನದಲ್ಲೂ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಅಪಘಾತ: 15 ಮಂದಿಗೆ ಗಂಭೀರ ಗಾಯ
ಹರಿಯಾಣದ ಕರ್ನಾಲ್‌ನಲ್ಲಿ ಶನಿವಾರ ಯಾವ ಸಾರಿಗೆ ಕಂಪನಿಯ ಬಸ್ ಮೇಲೆ ದಾಳಿ ನಡೆದಿತ್ತೋ, ಅದೇ ಕಂಪನಿಯ ಬಸ್ ಇದೀಗ ಪಂಜಾಬ್‌ನಲ್ಲೂ ದಾಳಿಗೊಳಗಾಗಿದೆ. “ಎರಡೂ ಘಟನೆಗಳಲ್ಲಿ ಒಂದೇ ಸಾರಿಗೆ ಆಪರೇಟರ್‌ನ ಬಸ್‌ಗಳು ಗುರಿಯಾಗಿವೆ. ಈ ಎರಡೂ ದಾಳಿಗಳ ನಡುವೆ ಯಾವುದಾದರೂ ಸಂಬಂಧವಿದೆಯೇ ಎಂಬುದನ್ನು ನಾವು ತನಿಖೆ ಮಾಡುತ್ತಿದ್ದೇವೆ” ಎಂದು ಎಸ್‌ಪಿ ಯಾದವ್ ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ