ವಾಷಿಂಗ್ಟನ್: ಭಾರತೀಯ ಮೂಲದ ವಿಜ್ಞಾನಿ ನೇತೃತ್ವದ ತಂಡ ಕೇವಲ ಐದೇ ನಿಮಿಷಗಳಲ್ಲಿ ಕೋವಿಡ್-19 ಪತ್ತೆಹಚ್ಚುವ ವಿಧಾನವೊಂದನ್ನು ಆವಿಷ್ಕರಿಸಿದೆ. ಎಲೆಕ್ಟ್ರೋ ಕೆಮಿಕಲ್ ಸಂವೇದಕಗಳ ಮೂಲಕ ದೇಹದಲ್ಲಿ ಕೊರೊನಾ ಸೋಂಕನ್ನು ಇದು ಶೀಘ್ರ ಪತ್ತೆಹಚ್ಚಲಿದೆ.
ಅಮೆರಿಕದ ಇಲಿನೊಯಿಸ್ ವಿಶ್ವವಿದ್ಯಾಲಯಗಳ ಸಂಶೋಧಕರು ಗ್ರಾಫೀನ್ ಧಾತುವಿನ ಎಲೆಕ್ಟ್ರೋಕೆಮಿಕಲ್ ಬಯೋಸೆನ್ಸಾರ್ಗಳನ್ನ ಅಭಿವೃದ್ಧಿಪಡಿಸಿದ್ದಾರೆ. ಈ ಸಂವೇದಕಗಳು ಕೋವಿಡ್-19 ರೋಗ ತರುವ SARS-CoV-2 ವೈರಾಣು ಉಪಸ್ಥಿತಿಯನ್ನು ಪತ್ತೆಹಚ್ಚುತ್ತದೆ.
ಈ ಸಂಶೋಧನಾ ಪ್ರಬಂಧವು ಅಮೆರಿಕದ ಪ್ರತಿಷ್ಠಿತ ನಿಯತಕಾಲಿಕೆ ಎಸಿಎಸ್ ನ್ಯಾನೊದಲ್ಲಿ ಪ್ರಕಟವಾಗಿದೆ. ಈ ಬಯೊಸೆನ್ಸಾರ್ನಲ್ಲಿ ಎಲೆಕ್ಟ್ರಿಕಲ್ ದತ್ತಾಂಶಗಳನ್ನು ಅಳೆಯುವ ತಳಹದಿ ಮತ್ತು ಅದರ ಮೂಲಕ ವೈರಾಣುವಿನ ಉಪಸ್ಥಿತಿಯನ್ನು ವಿಶ್ಲೇಷಿಸಬಲ್ಲ ಕೋಡ್ ಈ ಸೆನ್ಸಾರ್ನಲ್ಲಿವೆ.
ಪ್ರಾಧ್ಯಾಪಕ ದಿಪಾನ್ಜನ್ ಪಾನ್ ರೂಪಿಸಿರುವ ಈ ತಂತ್ರಜ್ಞಾನ ಹಲವರ ಗಮನ ಸೆಳೆದಿದೆ. ಫಿಲ್ಟರ್ ಪೇಪರ್ ಮೇಲೆ ಗ್ರಾಫೀನ್ನ ಅತಿಸೂಕ್ಷ್ಮ ಕಣಗಳನ್ನು (nanoplatelets) ಲೇಪಿಸಿ, ಕಂಡಕ್ಟೀವ್ ಫಿಲ್ಮ್ ಮಾದರಿಯ ತಳಹದಿ ರೂಪಿಸಿಕೊಳ್ಳುವುದು ಈ ಬಯೋಸೆನ್ಸಾರ್ ನಿರ್ಮಾಣದ ಮೊದಲ ಹಂತ. ಇದರ ಮೇಲೆ ಚಿನ್ನದ ಎಲೆಕ್ಟ್ರೋಡ್ಗಳನ್ನು ಕೂರಿಸಲಾಗುತ್ತದೆ.
ಚಿನ್ನ ಮತ್ತು ಗ್ರಾಫೀನ್ಗಳ ಅತಿಸೂಕ್ಷ್ಮ ಸಂವೇದನಾ ಸಾಮರ್ಥ್ಯ ಹೊಂದಿವೆ. ಹೀಗಾಗಿ ಕೊರೊನಾ ಸೋಂಕು ಹರಡುವ SARS-CoV-2 ವೈರಾಣುವಿನಲ್ಲಿರುವ ಎನ್-ಜೀನ್ ಪ್ರೋಟೀನ್ಗಳಿಗೆ ಇವು ಸ್ಪಂದಿಸುತ್ತವೆ. ಅವುಗಳ ಉಪಸ್ಥಿತಿಯನ್ನು ಸಾರಿಹೇಳುತ್ತವೆ. ಕೋವಿಡ್-19 ಪಾಸಿಟಿವ್ ಮತ್ತು ನೆಗೆಟಿವ್ ಮಾದರಿಗಳ ಮೇಲೆ ಈ ಸೆನ್ಸಾರ್ಗಳನ್ನು ತಂಡ ಪ್ರಯೋಗಿಸಿ ಯಶಸ್ವಿಯಾಗಿದೆ.
ಪಾಸಿಟಿವ್ ಮಾದರಿಗಳ ತಪಾಸಣೆ ವೇಳೆ ವೋಲ್ಟೇಜ್ನಲ್ಲಿ ಗಮನಾರ್ಹ ಪ್ರಮಾಣದ ಏರಿಕೆ ದಾಖಲಾಗಿದೆ. ಕೇವಲ 5 ನಿಮಿಷಗಳಲ್ಲಿ ಫಲಿತಾಂಶ ಸಿಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಅತ್ಯಂತ ಸುಲಭವಾಗಿ ಸಾಗಿಸಬಹುದಾದ ಮತ್ತು ಅತಿಕಡಿಮೆ ವೆಚ್ಚದ ಈ ಸೆನ್ಸಾರ್ಗಳನ್ನು ಬ್ಲೂಟೂತ್ ಅಥವಾ ವೈಫೈ ಮೂಲಕ ಸ್ಮಾರ್ಟ್ಫೋನ್ಗಳಿಗೆ ಸಂಪರ್ಕಿಸಬಹುದು. ವೈದ್ಯರ ಕ್ಲಿನಿಕ್ಗಳು ಅಥವಾ ಮನೆಯಲ್ಲಿಯೂ ಬಳಸಬಹುದು. ಕೋವಿಡ್-19ರ ಜೊತೆಗೆ ಇತರ ರೋಗಗಳನ್ನು ಪತ್ತೆಹಚ್ಚುವ ಸಾಧ್ಯತೆಯನ್ನೂ ವೈದ್ಯರ ತಂಡ ಪರಿಶೀಲಿಸುತ್ತಿದೆ.
Explainer | ಫೈಝರ್ ಲಸಿಕೆ ಹಾಕಿಸಿಕೊಂಡವರು ಕೊರೊನಾ ಸೋಂಕಿನಿಂದ ಎಷ್ಟು ಸೇಫ್?
Published On - 10:01 pm, Wed, 9 December 20