
ಧಾರ, ಅ.26: ಮಧ್ಯಪ್ರದೇಶದ ಧಾರ ಜಿಲ್ಲೆಯಲ್ಲಿ ತಡರಾತ್ರಿ ಅತ್ಯಂತ ಬೆಚ್ಚಿಬೀಳಿಸುವ ಹಾಗೂ ದಾರುಣ ರಸ್ತೆ ಅಪಘಾತವೊಂದು ಸಂಭವಿಸಿದೆ. ಶೃಂಗಾರ ಕ್ಷೇತ್ರವಾದ ಸಾವರಿಯಾ ಸೇಥ್ ದೇವಾಲಯಕ್ಕೆ ತೆರಳಿ ದರ್ಶನ ಪಡೆದು ಮರಳುತ್ತಿದ್ದ ಐವರು ಆಪ್ತ ಸ್ನೇಹಿತರಿದ್ದ ಕಾರು, ಟೈರ್ ಬ್ಲಾಸ್ಟ್ ಆದ ಪರಿಣಾಮ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಈ ದುರಂತದಲ್ಲಿ ಕಾರಿನೊಳಗೆ ಸಿಲುಕಿಕೊಂಡ ನಾಲ್ವರು ಯುವಕರು ಕ್ಷಣಾರ್ಧದಲ್ಲಿ ಸಜೀವ ದಹನಗೊಂಡಿದ್ದರೆ, ಕಾರಿನಿಂದ ಹೊರಗೆ ಬಿದ್ದ ಮತ್ತೊಬ್ಬ ಯುವಕ ತೀವ್ರ ಗಾಯಗಳೊಂದಿಗೆ ಪವಾಡಸದೃಶ ರೀತಿಯಲ್ಲಿ ಬದುಕಿಳಿದಿದ್ದಾನೆ.
ಧಾರ ಜಿಲ್ಲೆಯ ಸಾದಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಲೇಬಡ್-ನಾಯಗಾಂವ್ ಹಾಗೂ ಮೌ-ನೀಮಚ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಹೀರಾ ಧಾಬಾ ಹಾಗೂ ಸಂಗೇಶರ ಸಮೀಪದ ಸೇತುವೆ ಬಳಿ ಭಾನುವಾರ ತಡರಾತ್ರಿ ಸುಮಾರು 11:14 ರಿಂದ 11:30ರ ವೇಳೆಗೆ ಈ ದುರಂತ ನಡೆದಿದೆ. ಸಾಂಗೋರ್ ಗ್ರಾಮದ ಐವರು ಯುವಕರು ದೇವಸ್ಥಾನದ ದರ್ಶನ ಮುಗಿಸಿ ತಮ್ಮ ಸ್ವಿಫ್ಟ್ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಸೇತುವೆ ದಾಟುವ ವೇಳೆ ಕಾರಿನ ಚಾಲಕನ ಬದಿಯ ಮುಂಭಾಗದ ಟೈರ್ ದಿಢೀರನೆ ಸ್ಫೋಟಗೊಂಡಿದೆ . ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಪಕ್ಕದ ಕಾಲುವೆ/ಸೇತುವೆಯ ತಗ್ಗಿಗೆ ಬಿದ್ದು, ಕ್ಷಣಾರ್ಧದಲ್ಲೇ ತೀವ್ರವಾಗಿ ಬೆಂಕಿ ಹೊತ್ತಿಕೊಂಡಿದೆ.
ಅಪಘಾತ ಸಂಭವಿಸಿದ ವೇಳೆ ಕಾರಿನಲ್ಲಿದ್ದ ಬಹುತೇಕ ಯುವಕರು ನಿದ್ರೆಯಲ್ಲಿದ್ದರೆನ್ನಲಾಗಿದೆ. ಸೇತುವೆಗೆ ಢಿಕ್ಕಿ ಹೊಡೆದು ತಗ್ಗಿಗೆ ಬಿದ್ದಾಗ ಶಬ್ದದೊಂದಿಗೆ ಬೆಂಕಿ ಇಡೀ ಕಾರನ್ನು ಆವರಿಸಿಕೊಂಡಿದ್ದರಿಂದ ಯುವಕರಿಗೆ ಹೊರಬರಲು ಸಾಧ್ಯವಾಗದೆ ಒಳಗೆಯೇ ಸಜೀವ ದಹನಗೊಂಡಿದ್ದಾರೆ. ಇನ್ನು ಮೃತಪಟ್ಟವರನ್ನು ಭೀಮ್ ಢಾಕಡ್(24 ವರ್ಷ), ಆದಿತ್ಯ ತಿವಾರಿ (22 ವರ್ಷ), ಚೇತನ್ ಢಾಕಡ್ ( 21 ವರ್ಷ), ಅಭಿಷೇಕ್ ಸೋಲಂಕಿ (19 ವರ್ಷ) ಎಂದು ಗುರುತಿಸಲಾಗಿದೆ. ಇನ್ನು ಮೃತಪಟ್ಟ ನಾಲ್ವರೂ ಸಾಂಗೋರ್ ನಿವಾಸಿಗಳಾಗಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿಗೆ ಬಿಗ್ ರಿಲೀಫ್: ಅಮಿತ್ ಶಾ ವಿರುದ್ಧದ ಮಾನನಷ್ಟ ಮೊಕದ್ದಮೆ ವಜಾಗೊಳಿಸಿದ ಕೋರ್ಟ್
ತುಷಾರ್ ಮುಖೇಶ್ ಮಂಡ್ಲೋಯಿ (20 ವರ್ಷ) ಎಂಬ ಯುವಕ ಅಪಘಾತದ ರಭಸಕ್ಕೆ ಕಾರಿನಿಂದ ಹೊರಗೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಶೇ. 35 ರಿಂದ 40 ಪ್ರತಿಶತ ಬೆಂಕಿಯ ಗಾಯಗಳಿಂದ ಬಳಲುತ್ತಿರುವ ಇವನಿಗೆ ಧಾರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಇಂದೋರ್‌ಗೆ ರವಾನಿಸಲಾಗಿದೆ. ಇವನ ಸ್ಥಿತಿ ಗಂಭೀರವಾಗಿದೆ. ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರಾದರೂ, ಕಾರು ಸಂಪೂರ್ಣವಾಗಿ ಭಸ್ಮಗೊಂಡಿತ್ತು. ಕಾರಿನೊಳಗೆ ನಾಲ್ವರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಧಾರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಧಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಪಾರುಲ್ ಬೇಲಾಪುರ್ಕರ್ ಹಾಗೂ ಎಸ್‌ಪಿ ಸಚಿನ್ ಶರ್ಮಾ ಅವರ ನಿರ್ದೇಶನದಂತೆ ಸಾದಲ್‌ಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ