ರಸಗುಲ್ಲಾ ಎಂದು ಕೊಟ್ಟಿದ್ದು ಸಿಹಿಯಲ್ಲ, ಸ್ಫೋಟಕ, ಬಾಯಿಗೆ ಹಾಕಿಕೊಂಡ ವ್ಯಕ್ತಿ ಸಾವು

ಮಧ್ಯಪ್ರದೇಶದ ದಿಂಡೋರಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ವ್ಯಕ್ತಿಯೊಬ್ಬ 'ರಸಗುಲ್ಲಾ' ಎಂದು ಭಾವಿಸಿ ಸ್ಫೋಟಕವನ್ನು ಬಾಯಿಗೆ ಹಾಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿ ರಾಮ್ ಭಗತ್ ನೀಡಿದ ದೇಶೀಯ ಬಾಂಬ್ ಅನ್ನು ರಾಜೇಂದ್ರ ಬರೋಟಿಯಾ ಸೇವಿಸಿದ್ದರು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಉದ್ದೇಶಪೂರ್ವಕ ಕೊಲೆ ಅಥವಾ ಪ್ರಾಣಿಗಳನ್ನು ಕೊಲ್ಲಲು ಬಳಸುವ ಬಾಂಬ್‌ನ ದುರುಪಯೋಗದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ರಸಗುಲ್ಲಾ ಎಂದು ಕೊಟ್ಟಿದ್ದು ಸಿಹಿಯಲ್ಲ, ಸ್ಫೋಟಕ, ಬಾಯಿಗೆ ಹಾಕಿಕೊಂಡ ವ್ಯಕ್ತಿ ಸಾವು
ರಸಗುಲ್ಲಾ

Updated on: Nov 13, 2026 | 8:32 AM

ದಿಂಡೋರಿ, ನವೆಂಬರ್ 13: ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ರಸಗುಲ್ಲಾ ಎಂದು ಭಾವಿಸಿ ವ್ಯಕ್ತಿಯೊಬ್ಬ ಸ್ಫೋಟಕವನ್ನು ಬಾಯಿಗೆ ಹಾಕಿಕೊಂಡಿದ್ದು, ಅದು ಸ್ಫೋಟಗೊಂಡ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನವೆಂಬರ್ 10ರ ತಡರಾತ್ರಿ ಪದಾರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ರಾಜೇಂದ್ರ ಬರೋಟಿಯಾ ಎಂದು ಗುರುತಿಸಲಾಗಿದೆ. ಅವರು ತಮ್ಮ ಮನೆಯಲ್ಲಿದ್ದಾಗ ರಾಮ್ ಭಗತ್ ಬರೋಟಿಯಾ ಎಂಬಾತ ಅಲ್ಲಿಗೆ ಬಂದಿದ್ದಾನೆ. ಆತನ ಕೈಯಲ್ಲಿದ್ದ ಬಿಳಿ ಬಣ್ಣದ ದುಂಡನೆಯ ವಸ್ತುವನ್ನು ರಾಜೇಂದ್ರ ಅವರಿಗೆ ನೀಡಿ, ಅದು ರಸಗುಲ್ಲಾ ಎಂದು ಹೇಳಿದ್ದಾನೆ ಎನ್ನಲಾಗಿದೆ.

Loading...

ಅದನ್ನು ಸಿಹಿತಿಂಡಿ ಎಂದು ಭಾವಿಸಿದ ರಾಜೇಂದ್ರ ಬಾಯಿಗೆ ಹಾಕಿಕೊಂಡು ಕಚ್ಚಿದ್ದಾರೆ. ಆದರೆ ಅದು ರಸಗುಲ್ಲಾ ಆಗಿರಲಿಲ್ಲ, ದೇಶೀಯವಾಗಿ ತಯಾರಿಸಿದ ಸ್ಫೋಟಕವಾಗಿತ್ತು. ಬಾಯಿಗೆ ಹಾಕಿಕೊಂಡ ಕೆಲವೇ ಕ್ಷಣಗಳಲ್ಲಿ ಅದು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ರಾಜೇಂದ್ರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ; ಮತ್ತೆ ಪಟಾಕಿ ಹೊಡೆಯಿರಿ ಎಂದ ಮನೆಯವರು

ಸ್ಫೋಟದ ಶಬ್ದ ಕೇಳಿದ ತಕ್ಷಣ ರಾಜೇಂದ್ರ ಅವರ ಪತ್ನಿ ಸುಶೀಲಾ ಬಾಯಿ ಕೋಣೆಯಿಂದ ಹೊರಗೆ ಬಂದು ನೋಡಿದ್ದಾರೆ. ಪತಿ ಗಾಯಗೊಂಡು ಬಿದ್ದಿರುವುದನ್ನು ಕಂಡು ನೆರೆಹೊರೆಯವರ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ರಾಮ್ ಭಗತ್ ಬರೋಟಿಯಾ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ರಾಮ್ ಭಗತ್, ತನಗೆ ಒಬ್ಬ ಹುಡುಗ ಬಾಂಬ್ ನೀಡಿದ್ದ ಎಂದು ಹೇಳಿದ್ದಾನೆ. ಆ ಹುಡುಗನನ್ನೂ ಪೊಲೀಸರು ಬಂಧಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಬಾಂಬ್‌ಗಳನ್ನು ಪ್ರಾಣಿಗಳನ್ನು ಕೊಲ್ಲಲು ಬಳಸಲಾಗುತ್ತಿತ್ತು ಎನ್ನಲಾಗಿದೆ. ಆರೋಪಿಗಳು ಉದ್ದೇಶಪೂರ್ವಕವಾಗಿ ರಾಜೇಂದ್ರ ಅವರಿಗೆ ಬಾಂಬ್ ನೀಡಿದ್ದರೇ ಅಥವಾ ಇದರ ಹಿಂದೆ ಬೇರೆ ಕಾರಣವಿದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us