ಸಮ್ಮೇಳನ ನಡೆಸುತ್ತೇವೆ ಎಂದು ಬ್ಯಾನರ್ ಹಾಕಿ ಅಧಿಕಾರಿಗಳನ್ನು ಕರೆಸಿ ಜಾರ್ಖಂಡ್​ನಲ್ಲಿ ದಾಳಿ ನಡೆಸಿದ ಇಡಿ

|

Updated on: Apr 20, 2023 | 7:08 PM

ಒಂದು ವೇಳೆ ಜಾರಿ ನಿರ್ದೇಶನಾಲಯದಂತಹ ಕೇಂದ್ರ ತನಿಖಾ ಸಂಸ್ಥೆಗಳು ಬಿಜೆಪಿಯೇತರ ಆಡಳಿತದ ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಶೋಧ ನಡೆಸಿದಾಗ, ರಾಜ್ಯ ಪೊಲೀಸರ ಗುಪ್ತಚರ ತಂಡಗಳು ಅವರ ಹಿಂದೆಯೇ ಹೋಗುತ್ತವೆ ಎಂದು ಮೂಲಗಳು ತಿಳಿಸಿವೆ

ಸಮ್ಮೇಳನ ನಡೆಸುತ್ತೇವೆ ಎಂದು ಬ್ಯಾನರ್ ಹಾಕಿ ಅಧಿಕಾರಿಗಳನ್ನು ಕರೆಸಿ ಜಾರ್ಖಂಡ್​ನಲ್ಲಿ ದಾಳಿ ನಡೆಸಿದ ಇಡಿ
ಇಡಿ ಬ್ಯಾನರ್
Follow us on

ರಾಂಚಿಯ (Ranchi) ಜಾರಿ ನಿರ್ದೇಶನಾಲಯ (Directorate of Enforcement) ‘ಅಕ್ರಮ ಹಣ ವರ್ಗಾವಣೆಯ ದುಷ್ಪರಿಣಾಮಗಳು ಮತ್ತು ಅದನ್ನು ನಿಭಾಯಿಸುವ ಮಾರ್ಗಗಳು’ ಎಂಬ ಸಮ್ಮೇಳನಕ್ಕೆ ಪ್ರತಿನಿಧಿಗಳು, ಭಾಷಣಕಾರರು ಮತ್ತು ಅತಿಥಿಗಳನ್ನು ಸ್ವಾಗತಿಸುತ್ತದೆ ಎಂಬ ಬ್ಯಾನರ್​​ಗಳನ್ನು ಜಾರ್ಖಂಡ್‌ನ (Jharkhand) ಅನೇಕ ಸ್ಥಳಗಳಲ್ಲಿ ಹಾಕಿತ್ತು. ಆದರೆ ಈ ಸಮ್ಮೇಳನ ನಡೆದಿಲ್ಲ.ಯಾಕೆಂದರೆ ಅದರಲ್ಲಿ ಭಾಗವಹಿಸಲು ಬಂದವರು ರಾಜ್ಯದ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಲು ಹೋಗಿದ್ದಾರೆ. ಹಾಗಾದರೆ, ಸಮ್ಮೇಳನದ ಹಿಂದಿನ ವಾಸ್ತವ ಏನು? ಇದರ ಹಿಂದಿನ ನಿಜ ಸಂಗತಿ ಏನಪ್ಪಾ ಅಂದರೆ ಇದು ನಿಜವಾದ ಸಮ್ಮೇಳನಕ್ಕಿರುವ ಆಹ್ವಾನವಲ್ಲ, ಅದಕ್ಕಿರುವ ಸ್ವಾಗತ ಬ್ಯಾನರ್  ಕೂಡಾ ಅಲ್ಲ.  ಸರ್ಕಾರದ ಅಧಿಕಾರಿಗಳನ್ನು ಮತ್ತು ರಾಜ್ಯ ಗುಪ್ತಚರ ಏಜೆನ್ಸಿಗಳನ್ನು ಮಂಗ ಮಾಡುವುದಕ್ಕಾಗಿ ಈ ಬ್ಯಾನರ್ ಹಾಕಲಾಗಿದೆ. ಒಂದು ವೇಳೆ ಜಾರಿ ನಿರ್ದೇಶನಾಲಯದಂತಹ ಕೇಂದ್ರ ತನಿಖಾ ಸಂಸ್ಥೆಗಳು ಬಿಜೆಪಿಯೇತರ ಆಡಳಿತದ ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಶೋಧ ನಡೆಸಿದಾಗ, ರಾಜ್ಯ ಪೊಲೀಸರ ಗುಪ್ತಚರ ತಂಡಗಳು ಅವರ ಹಿಂದೆಯೇ ಹೋಗುತ್ತವೆ ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ.

ಇಡಿ ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಬಂದಿಳಿದ ಕ್ಷಣದಿಂದ ರಾಜ್ಯ ಗುಪ್ತಚರ ಅಧಿಕಾರಿಗಳು ಟ್ರ್ಯಾಕ್ ಮಾಡುತ್ತಾರೆ ಎಂದು ಮೂಲಗಳು ತಿಳಿಸಿವೆ. ಕೆಲವು ಸಂದರ್ಭಗಳಲ್ಲಿ ಶಂಕಿತರಿಗೆ ದಾಳಿಗಳ ಬಗ್ಗೆ ಎಚ್ಚರಿಸಲಾಗುತ್ತದೆ. ಈ ಮೂಲಕ ತನಿಖೆಯ ಹಾದಿ ತಪ್ಪಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಆದ್ದರಿಂದ, ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ನ ಅನೇಕ ಸ್ಥಳಗಳಲ್ಲಿ ಇಡಿ ಹುಡುಕಾಟ ನಡೆಸುವ ಸಮಯ ಬಂದಾಗ, ತನಿಖಾ ಸಂಸ್ಥೆ ತಮ್ಮ ದಾಳಿಗಳನ್ನು ಯಶಸ್ವಿಯಾಗಿ ನಡೆಸಲು ವಿಶಿಷ್ಟ ವಿಧಾನವನ್ನು ತೆಗೆದುಕೊಳ್ಳಲು ನಿರ್ಧರಿಸಿತು. ಐಎಎಸ್ ಅಧಿಕಾರಿ ಮತ್ತು ರಾಜ್ಯ ಸರ್ಕಾರದ ರಿಜಿಸ್ಟ್ರಾರ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಸರ್ಕಾರಿ ಅಧಿಕಾರಿಗಳ ಮನೆ ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆಸಬೇಕಿತ್ತು.

ಅದಕ್ಕಾಗಿ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಉನ್ನತ ಅಧಿಕಾರಿಯೊಬ್ಬರು, ಜಾರ್ಖಂಡ್‌ನ ಇಡಿ ಅಧಿಕಾರಿಗಳನ್ನು ಎಲ್ಲೆಡೆ ಬ್ಯಾನರ್‌ಗಳನ್ನು ಹಾಕುವಂತೆ ಕೇಳಿಕೊಂಡರು. ಆ ಬ್ಯಾನರ್​​ನಲ್ಲಿ ರಾಂಚಿ ಜಾರಿ ನಿರ್ದೇಶನಾಲಯ, ರಾಂಚಿಯು ಪ್ರತಿನಿಧಿಗಳು, ಭಾಷಣಕಾರರು ಮತ್ತು ಅತಿಥಿಗಳನ್ನು ಮನಿ ಲಾಂಡರಿಂಗ್‌ನ ದುಷ್ಪರಿಣಾಮಗಳು ಮತ್ತು ಅದನ್ನು ನಿಭಾಯಿಸುವ ವಿಧಾನಗಳ ಕುರಿತು ಸಮ್ಮೇಳನಕ್ಕೆ ಸ್ವಾಗತಿಸುತ್ತದೆ ಎಂದು ಬರೆಯಲಾಗಿತ್ತು. ರಾಂಚಿಯಾದ್ಯಂತ ಬ್ಯಾನರ್‌ಗಳನ್ನು ಹಾಕಲಾಗಿತ್ತು. ಕೆಲವು ಸ್ಥಳೀಯ ಸುದ್ದಿ ಪತ್ರಿಕೆಗಳು ಸಮ್ಮೇಳನದ ಬಗ್ಗೆ ವರದಿಗಳನ್ನೂ ಪ್ರಕಟಿಸಿದ್ದವು.

ಸಾಮಾನ್ಯವಾಗಿ ಇಡಿ ಅಧಿಕಾರಿಗಳನ್ನು ಅನುಸರಿಸುವ ರಾಜ್ಯ ಪೊಲೀಸ್ ಅಧಿಕಾರಿಗಳು ಈ ಮಾಹಿತಿಯನ್ನು ರಾಜ್ಯ ಅಧಿಕಾರಿಗಳಿಗೆ ರವಾನಿಸಿಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನೆಪದಲ್ಲಿ ದೆಹಲಿ, ಕೋಲ್ಕತ್ತಾ ಮತ್ತು ಮುಂಬೈನಿಂದ 70 ಕ್ಕೂ ಹೆಚ್ಚು ಅಧಿಕಾರಿಗಳು ಜಾರ್ಖಂಡ್‌ಗೆ ಬಂದಿದ್ದಾರೆ. ಯಾವುದೇ ಅನುಮಾನ ಬಾರದಂತೆ ಸಾಧಾರಣ ವ್ಯಕ್ತಿಗಳಂತೆ ಹೋಟೆಲ್‌ನಲ್ಲಿ ತಂಗಿದ್ದ ಅವರು ಸಮ್ಮೇಳನದ ದಿನದಂದು ಶಂಕಿತರ ಮನೆಗಳಿಗೆ ತೆರಳಿ ದಾಳಿ ನಡೆಸಿದ್ದಾರೆ.

ಇಡಿ ಭಾರೀ ಪ್ರಮಾಣದ ಪುರಾವೆಗಳನ್ನು ಸಂಗ್ರಹಿಸಿದ್ದರಿಂದ ಶೋಧ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಯಿತು ಮತ್ತು ಏಳು ಆರೋಪಿಗಳನ್ನು ಸಹ ಬಂಧಿಸಲಾಯಿತು.ಈ ಹಿಂದೆಯೂ ಗಣಿ ಹಗರಣದ ಪ್ರಕರಣದಲ್ಲಿ ಜಾರ್ಖಂಡ್‌ನಲ್ಲಿ ಇಡಿ ಅಧಿಕಾರಿಗಳು ಹುಡುಕಾಟ ನಡೆಸಲು ಬಂದಾಗ ಅವರು ತಮ್ಮ ಗುರುತನ್ನು ಬದಲಾಯಿಸಿದರು. ಶೋಧ ನಡೆಸಲು ಅಲ್ಲಿದ್ದ ಪುರಾತತ್ವ ಇಲಾಖೆಯ ಅಧಿಕಾರಿಗಳಂತೆ ವೇಷ ಧರಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನೂ ಇಡಿ ವಿಚಾರಣೆಗೆ ಒಳಪಡಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ