
ಫರಿದಾಬಾದ್, ನವೆಂಬರ್ 12: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಪಕ್ಕದಮನೆಯವರೊಂದಿಗಿನ ಸಣ್ಣ ಜಗಳ ಒಂದು ಸಾವಿಗೆ ಕಾರಣವಾಗಿರುವ ಘಟನೆ ಫರೀದಾಬಾದ್ನಲ್ಲಿ ನಡೆದಿದೆ. ಹರಿಯಾಣದ ಫರೀದಾಬಾದ್ನಲ್ಲಿ ಟೆಕ್ ಮಹೀಂದ್ರಾದ ಮಾಜಿ ಉದ್ಯೋಗಿ ಪರಮಜೀತ್ ಧಂಕರ್ ಅವರನ್ನು ಅದೇ ಕಟ್ಟಡದಲ್ಲಿ ವಾಸವಾಗಿದ್ದ ವ್ಯಕ್ತಿ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿದೆ.
ನವೆಂಬರ್ 6ರಂದು ಧಂತೇರಸ್ ಹಬ್ಬದ ದಿನ ಸಂಜೆ ಫರೀದಾಬಾದ್ನ ಸೆಕ್ಟರ್ 21ಸಿಯಲ್ಲಿ ಈ ಘಟನೆ ನಡೆದಿದೆ. ಮೃತ ಪರಮಜೀತ್ ಧಂಕರ್ ಸಿಂಗಾಪುರದ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಸಂಬಂಧಿಕರ ಮನೆಯ ಮದುವೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದ್ದರು. ಅವರು ವಾಸವಿದ್ದ ಕಟ್ಟಡದ ಮೂರನೇ ಮಹಡಿಯಲ್ಲಿ ಆರೋಪಿ ಮೋನು ಶರ್ಮಾ ಕೂಡ ವಾಸವಿದ್ದ.
ಸಣ್ಣ ಜಗಳಕ್ಕೆ ಬಂದೂಕಿನಿಂದ ಉತ್ತರ
ಪಾರ್ಕಿಂಗ್ ಸೇರಿದಂತೆ ಹಲವು ಸಣ್ಣಪುಟ್ಟ ವಿಚಾರಗಳಿಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ನವೆಂಬರ್ 6ರಂದು ಇದೇ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ವೇಳೆ ಮೋನು ಶರ್ಮಾ, ಮಾತನಾಡುವ ನೆಪದಲ್ಲಿ ಪರಮಜೀತ್ ಅವರನ್ನು ಮನೆಯ ಹೊರಗೆ ಕರೆದಿದ್ದಾನೆ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿ ಪರಮಜೀತ್ ಅವರನ್ನು ಪ್ರಶ್ನಿಸುತ್ತಾ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ. ಪರಮಜೀತ್ ಅವರಿಗೆ ವಿಚಾರವೇನು ಎಂಬುದು ಅರ್ಥವಾಗದೆ, ಕೈಮುಗಿದು ವಿವರಣೆ ಕೇಳುತ್ತಿರುವುದೂ ಸೆರೆಯಾಗಿದೆ. ಆದರೆ ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಐದು ಸೆಕೆಂಡ್ಗಳಲ್ಲಿ ಹಲವು ಸುತ್ತು ಗುಂಡು
ವಾದ ನಡೆಯುತ್ತಿದ್ದಂತೆಯೇ ಮೋನು ಶರ್ಮಾ ತನ್ನ ಜೇಬಿನಿಂದ ಪಿಸ್ತೂಲ್ ತೆಗೆದು ಪರಮಜೀತ್ ಮೇಲೆ ಗುಂಡು ಹಾರಿಸಲು ಆರಂಭಿಸಿದ್ದಾನೆ. ಕೆಲವೇ ಸೆಕೆಂಡ್ಗಳಲ್ಲಿ ಹಲವು ಸುತ್ತು ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಪರಮಜೀತ್ ಕಟ್ಟಡದ ಹೊರಗೆ ಓಡಿದ್ದಾರೆ. ಆದರೂ ಆರೋಪಿ ಅವರನ್ನು ಬೆನ್ನಟ್ಟಿದ್ದಾನೆ.
ತೀವ್ರವಾಗಿ ಗಾಯಗೊಂಡಿದ್ದ ಪರಮಜೀತ್, ಆರೋಪಿಯನ್ನು ತಡೆಯಲು ಆತನ ಅಂಗಿಯ ಕಾಲರ್ ಹಿಡಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮತ್ತೆ ಕೈಕೈ ಮಿಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆಯ ವೇಳೆ ಕಟ್ಟಡದಿಂದ ಮಹಿಳೆಯೊಬ್ಬರು ಹೊರಗೆ ಓಡಿ ಬಂದು ಸಹಾಯಕ್ಕಾಗಿ ಕೂಗಿರುವುದು ಕೂಡ ಸಿಸಿಟಿವಿಯಲ್ಲಿ ದಾಖಲಾಗಿದೆ.
ಇದನ್ನೂ ಓದಿ: ಪೋಲೆಂಡ್ನಲ್ಲಿ ಭೀಕರ ಗುಂಡಿನ ದಾಳಿಗೆ ಐವರು ಬಲಿ; ದಾಳಿಕೋರನನ್ನು ಗುಂಡಿಟ್ಟು ಕೊಂದ ಪೊಲೀಸರು!
‘ದೀಪಾವಳಿ ಶುಭಾಶಯಗಳು, ಎಲ್ಲರನ್ನೂ ಮುಗಿಸುತ್ತೇನೆ’
ಇಷ್ಟಾದರೂ ಆರೋಪಿ ಸುಮ್ಮನಾಗಿಲ್ಲ. ತನ್ನ ಪಿಸ್ತೂಲ್ಗೆ ಮತ್ತೆ ಗುಂಡು ತುಂಬಿಕೊಂಡು ಬಂದು ಪರಮಜೀತ್ ಮೇಲೆ ಮತ್ತಷ್ಟು ಗುಂಡು ಹಾರಿಸಿದ್ದಾನೆ. ಈ ವೇಳೆ, “ದೀಪಾವಳಿ ಶುಭಾಶಯಗಳು, ಎಲ್ಲರನ್ನೂ ಮುಗಿಸುತ್ತೇನೆ” ಎಂದು ಕೂಗಿರುವುದು ದೃಶ್ಯಾವಳಿಯಲ್ಲಿ ಕೇಳಿಬಂದಿದೆ. ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಪರಮಜೀತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿ ಮೋನು ಶರ್ಮಾನನ್ನು ಬಂಧಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಅಪರಾಧ ವಿಭಾಗದ ತಂಡಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿತ್ತು ಎಂದು ಸೂರಜ್ಕುಂಡ್ ಪೊಲೀಸ್ ಠಾಣೆಯ ಎಸ್ಎಚ್ಒ ಪ್ರಹ್ಲಾದ್ ಕುಮಾರ್ ತಿಳಿಸಿದ್ದಾರೆ.
ಪಾರ್ಕಿಂಗ್ ಸೇರಿದಂತೆ ಸಣ್ಣಪುಟ್ಟ ವಿಚಾರಗಳಿಂದ ಆರಂಭವಾದ ಪಕ್ಕದ ಮನೆಯವರೊಂದಿಗಿನ ವೈಷಮ್ಯ ಇಷ್ಟೊಂದು ಭೀಕರ ಘಟನೆಗೆ ಕಾರಣವಾಗಿದೆ. ಕುಟುಂಬದ ಮದುವೆ ಸಮಾರಂಭದಲ್ಲಿ ಭಾಗವಹಿಸಲು ವಿದೇಶದಿಂದ ಬಂದಿದ್ದ ವ್ಯಕ್ತಿಯೊಬ್ಬರು ತಮ್ಮದೇ ನಿವಾಸದ ಮುಂದೆ ಪ್ರಾಣ ಕಳೆದುಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:00 pm, Thu, 12 November 26