CRPF ಚೆಕ್‌ಪೋಸ್ಟ್ ಮೇಲೆ ಉಗ್ರರ ಅಟ್ಯಾಕ್: ಕೇವಲ 15 ಸೆಕೆಂಡ್‌ಗಳಲ್ಲಿ ಸುಮಾರು 30 ಸುತ್ತು ಗುಂಡಿನ ದಾಳಿ
ಜಮ್ಮು-ಕಾಶ್ಮೀರದ ಕುಲ್ಗಾಂನ ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಮೇಲೆ ಉಗ್ರರು ನಡೆಸಿದ ಭೀಕರ ಗುಂಡಿನ ದಾಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದು, ಉಗ್ರರಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ಮಧ್ಯಾಹ್ನ ಸುಮಾರು 2.15ರ ವೇಳೆಗೆ ದಾಳಿಕೋರರು ಸಿಆರ್‌ಪಿಎಫ್ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಗೊಂಡ ಯೋಧರನ್ನು ಚಿಕಿತ್ಸೆಗಾಗಿ ಅನಂತ್‌ನಾಗ್ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಆರ್‌ಪಿಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ಜಮ್ಮು, ನವೆಂಬರ್ 11: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ಇಂದು (ನವೆಂಬರ್ 11) ಮಧ್ಯಾಹ್ನ ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಚೆಕ್‌ಪೋಸ್ಟ್ ಮೇಲೆ ನಡೆದ ದಾಳಿಯ ವೇಳೆ ಉಗ್ರರು ಗುಂಡಿನ ಮಳೆಗರೆದ ದೃಶ್ಯಗಳು ಹಾಗೂ ಗುಂಡಿನ ಸದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಿರ್ ಬಜಾರ್ ಬಳಿಯ ಅಖ್ರಾನ್‌ನಲ್ಲಿರುವ ಸಿಆರ್‌ಪಿಎಫ್ ಶಿಬಿರದ ಮೇಲೆ ಬೈಕ್‌ನಲ್ಲಿ ಬಂದ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯ ಸಿಸಿಟಿವಿ ದೃಶ್ಯಾವಳಿ ಲಭ್ಯ
#BREAKING: Dramatic footage of Terror attack on CRPF Naka at Kulgam of South Kashmir earlier this afternoon. Three CRPF personnel were injured in the terror attack. Pakistani terrorists behind the attack with the help of local OGWs. https://t.co/yh8wdiEwWb
— Aditya Raj Kaul (@AdityaRajKaul) November 11, 2026
ಸಿಸಿಟಿವಿ ದೃಶ್ಯಾವಳಿಯಲ್ಲಿ ಮೊದಲಿಗೆ ಕೇವಲ 15 ಸೆಕೆಂಡ್‌ಗಳಲ್ಲಿ ಸುಮಾರು 30 ಸುತ್ತು ಗುಂಡು ಹಾರಿಸಿದ ಸದ್ದು ಕೇಳಿಸುತ್ತದೆ. ನಂತರದ ಒಂದು ನಿಮಿಷದೊಳಗೆ ಮತ್ತೆ ಸುಮಾರು 12 ಸುತ್ತು ಗುಂಡು ಹಾರಿಸಿದ ಶಬ್ದ ಕೇಳಿಬಂದಿದೆ. ಈ ವೇಳೆ ಸಣ್ಣ ಕಲ್ಲುಗಳು ಅಥವಾ ಗುಂಡಿನ ಚೂರುಗಳು ಕ್ಯಾಮೆರಾ ದೃಶ್ಯದಲ್ಲಿ ಬೀಳುವುದೂ ಕಂಡುಬಂದಿದೆ. ಆರಂಭದಲ್ಲಿ ಅಂಗಡಿಗಳ ಸಾಲಿನ ಮುಂದೆ ಕುಳಿತಿರುವ ಓರ್ವ ಸಿಆರ್‌ಪಿಎಫ್ ಯೋಧ ಮಾತ್ರ ಕಾಣಿಸುತ್ತಾರೆ. ಅವರ ಬಲಭಾಗದಿಂದ ದಾಳಿ ನಡೆಯುತ್ತಿರುವಂತೆ ಕಂಡುಬರುತ್ತಿದ್ದು, ಮತ್ತೊಬ್ಬ ಯೋಧ ಓಡಿಬಂದು ಕ್ಯಾಮೆರಾ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಬಳಿಕ ಇಬ್ಬರೂ ಮೆಷಿನ್ ಗನ್‌ಗಳನ್ನು ಹಿಡಿದು ಗುಂಡಿನ ಸದ್ದು ಕೇಳಿಬಂದ ದಿಕ್ಕಿನತ್ತ ತೆರಳುತ್ತಿರುವುದು ಕಂಡುಬಂದಿದೆ. ಇದೇ ವೇಳೆ ದಾಳಿಕೋರರನ್ನು ಉದ್ದೇಶಿಸಿ ಯೋಧರು ಕೂಗುತ್ತಿರುವ ಹಾಗೂ ಸವಾಲು ಹಾಕುತ್ತಿರುವಂತೆ ಕೇಳಿಸುವ ಧ್ವನಿಗಳೂ ಸೆರೆಯಾಗಿವೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಸಿಆರ್‌ಪಿಎಫ್ ಶಿಬಿರದ ಮೇಲೆ ಉಗ್ರರ ದಾಳಿ, ಮೂವರು ಸಿಬ್ಬಂದಿಗೆ ಗಾಯ
ಮಧ್ಯಾಹ್ನ ಸುಮಾರು 2.15ರ ವೇಳೆಗೆ ದಾಳಿಕೋರರು ಸಿಆರ್‌ಪಿಎಫ್ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಗೊಂಡ ಯೋಧರನ್ನು ಚಿಕಿತ್ಸೆಗಾಗಿ ಅನಂತ್‌ನಾಗ್ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಆರ್‌ಪಿಎಫ್ ಪ್ರಕಟಣೆಯಲ್ಲಿ ತಿಳಿಸಿದೆ. ಗಾಯಗೊಂಡ ಮೂವರು ಯೋಧರನ್ನು ರಾಕೇಶ್ ದಾಸ್, ಸಂತೋಷ್ ಚಂದ್ರು ಮತ್ತು ಸೋಮವೀರ್ ಸಿಂಗ್ ಎಂದು ಗುರುತಿಸಲಾಗಿದೆ. ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ರಾಕೇಶ್ ದಾಸ್ ಅವರ ಎಡಗಾಲಿಗೆ ಗಾಯವಾಗಿದ್ದರೆ, ಸಂತೋಷ್ ಚಂದ್ರು ಅವರ ಹೊಟ್ಟೆ ಮತ್ತು ಬೆನ್ನುಮೂಳೆಯ ಭಾಗಕ್ಕೆ ಗಾಯಗಳಾಗಿವೆ. ಇನ್ನು ಸೋಮವೀರ್ ಸಿಂಗ್ ಅವರ ಎಡಗೈಗೆ ಗುಂಡು ತಗುಲಿ ಗಾಯವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:54 pm, Wed, 11 November 26
