ಒಮಿಕ್ರೋನ್ ರೂಪಾಂತರ (Omicron Variant) ಕೇವಲ ಸೌಮ್ಯವಾದ ಲಕ್ಷಣಗಳನ್ನು ಉಂಟುಮಾಡುತ್ತದೆ. ಗಂಭೀರ ಸ್ವರೂಪದ ಕಾಯಿಲೆಯನ್ನು ತರುವುದಿಲ್ಲ ಎಂಬುದು ತಪ್ಪು ಕಲ್ಪನೆ ಎಂದು ದೇಶದ ಉನ್ನತ ಜಿನೋಮ್ ಸಿಕ್ವೆನ್ಸಿಂಗ್ ಇನ್ಸ್ಟಿಟ್ಯೂಟ್ನ ಉನ್ನತ ವಿಜ್ಞಾನಿ ಡಾ.ಅನುರಾಗ್ ಅಗರ್ವಾಲ್ ಹೇಳಿದ್ದಾಗಿ ನ್ಯೂಸ್ 18 ವರದಿ ಮಾಡಿದೆ. ಕೊರೊನಾದ ಯಾವುದೇ ರೂಪಾಂತರ ಪ್ರಾರಂಭಿಕ ಹಂತದಲ್ಲಿ ಸೌಮ್ಯ ಲಕ್ಷಣಗಳನ್ನು ಉಂಟು ಮಾಡುತ್ತದೆ. ಈ ಹೊಸ ತಳಿಯ ಸಂಪೂರ್ಣ ಲಕ್ಷಣ, ಪ್ರಭಾವಗಳು ಡಿಸೆಂಬರ್ ಅಂತ್ಯದ ಹೊತ್ತಿಗೆ ಚೆನ್ನಾಗಿ ತಿಳಿಯಬಹುದು ಎಂದು ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಸೌಮ್ಯ ಲಕ್ಷಣಗಳ ವೈರಸ್ ಎಂದು ನಿರ್ಲಕ್ಯ ಮಾಡುವಂತಿಲ್ಲ. ಇಡೀ ಆರೋಗ್ಯ ವ್ಯವಸ್ಥೆ ಹಾಳುಗೆಡವಲು ಅದೇ ಸಾಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಒಂದು ಸಾಮಾನ್ಯ ವೈರಸ್ ಕೂಡ ಭಾರತಕ್ಕೆ ಕಾಲಿಟ್ಟ ಮೇಲೆ ಅದು ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಕಾರಣ ಇಲ್ಲಿನ ಜನಸಂಖ್ಯೆ. ಹಾಗಾಗಿ ಇಲ್ಲಿ ಗಂಭೀರ ಪರಿಸ್ಥಿತಿ ತಲುಪುವವರ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದು ಅನುರಾಗ್ ಅಗರ್ವಾಲ್ ವಿವರಿಸಿದ್ದಾರೆ. ಹಾಗೇ, ಡಿಸೆಂಬರ್ ಅಂತ್ಯದವರೆಗೂ ಏನೇನೂ ಹೇಳಲು ಸಾಧ್ಯವಿಲ್ಲ. ಒಮಿಕ್ರಾನ್ ಮೊದಲು ಯುವಜನರಿಗೇ ತಗಲುತ್ತಿರಲು ಕಾರಣ ಅವರು ಮನೆಯಿಂದ ಹೊರಗೆ ಬರುವುದು ಹೆಚ್ಚು. ಅತ್ತಿಂದತ್ತ ಚಲಿಸುತ್ತಾರೆ. ನಂತರ ಮನೆಗೆ ಹೋಗಿ, ಮನೆಯಲ್ಲಿರುವ ಮಕ್ಕಳು, ಹಿರಿಯರಿಗೂ ಹಿಡಿಸುತ್ತಾರೆ ಎಂದು ಹೇಳಿದ್ದಾರೆ.
ಮಾಸ್ಕ್ ಮಹತ್ವ ಅರಿಯಬೇಕು
ಇನ್ನೊಂದೆಡೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಡಾ. ಡಾ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಕೂಡ ಒಮಿಕ್ರಾನ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ 77ಕ್ಕೂ ಅಧಿಕ ದೇಶಗಳಲ್ಲಿ ಒಮಿಕ್ರಾನ್ ಕಾಣಿಸಿಕೊಂಡಿದೆ. ಕೊರೊನಾದ ಇನ್ಯಾವುದೇ ತಳಿಯ ಪ್ರಸರಣದ ಪ್ರಮಾಣಕ್ಕಿಂತಲೂ ಒಮಿಕ್ರಾನ್ ಹರಡುವಿಕೆ ಪ್ರಮಾಣ ಅತ್ಯಂತ ಹೆಚ್ಚಾಗಿದೆ. ಈ ಒಮಿಕ್ರಾನ್ ಬಗ್ಗೆ ಇನ್ನೂ ಜನರಲ್ಲಿ ಅರಿವು ಸರಿಯಾಗಿ ಮೂಡಿಲ್ಲ. ಆದರೆ ಕೇವಲ ಮುನ್ನೆಚ್ಚರಿಕಾ ಕ್ರಮಗಳು ಮಾತ್ರ ಸೋಂಕು ನಿಯಂತ್ರಣಕ್ಕೆ ಸಹಾಯವಾಗಬಲ್ಲವು ಎಂಬುದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು. ಮಾಸ್ಕ್ನ್ನು ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಆಶ್ಲೆ ಇಂಟರ್ ನ್ಯಾಷನಲ್ ಸ್ಕೂಲ್ ವಿರುದ್ಧ ಮತಾಂತರ ಯತ್ನ ಆರೋಪ, ಶಾಲೆ ವಿರುದ್ದ ಕ್ರಮಕ್ಕೆ ಹಿಂದೂ ಜಾಗರಣ ವೇದಿಕೆ ಆಗ್ರಹ
Published On - 12:44 pm, Thu, 16 December 21