
ನವದೆಹಲಿ, ಅಕ್ಟೋಬರ್ 30: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ಚುನಾವಣಾ ಆಯೋಗ ಮತ್ತಷ್ಟು ಸಮಯ ನೀಡಿದೆ. ದೆಹಲಿ ಸೇರಿದಂತೆ ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಮಹಾರಾಷ್ಟ್ರ, ದೆಹಲಿ, ಆಂಧ್ರಪ್ರದೇಶ, ಹರಿಯಾಣ, ತೆಲಂಗಾಣ ಮತ್ತು ನಾಗಾಲ್ಯಾಂಡ್‌ಗಳಲ್ಲಿ ಈ ಬದಲಾವಣೆ ಮಾಡಲಾಗಿದೆ.
ಆಯಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು ಕಾಲಾವಕಾಶ ವಿಸ್ತರಿಸುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ನಿರ್ಧಾರ ಕೈಗೊಂಡಿದೆ. ಹೊಸ ವೇಳಾಪಟ್ಟಿಯ ಪ್ರಕಾರ, ಐದು ರಾಜ್ಯಗಳ ಅಂತಿಮ ಮತದಾರರ ಪಟ್ಟಿಯನ್ನು ನವೆಂಬರ್ 30ರಂದು ಪ್ರಕಟಿಸಲಾಗುತ್ತದೆ. ದೆಹಲಿಯ ಅಂತಿಮ ಪಟ್ಟಿ ಡಿಸೆಂಬರ್ 22ರಂದು ಬಿಡುಗಡೆಯಾಗಲಿದೆ.
ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಅಕ್ಟೋಬರ್ 26ರಿಂದ ನವೆಂಬರ್ 13ರವರೆಗೆ ವಿಸ್ತರಿಸಲಾಗಿದೆ. ಹಕ್ಕು ಮತ್ತು ಆಕ್ಷೇಪಣೆಗಳ ಪರಿಶೀಲನೆ ಹಾಗೂ ವಿಲೇವಾರಿಗೆ ನವೆಂಬರ್ 25ರವರೆಗೆ ಅವಕಾಶ ನೀಡಲಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ನವೆಂಬರ್ 30ರಂದು ಪ್ರಕಟಿಸಲಾಗುತ್ತದೆ.
ಈ ಹಿಂದೆ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 31ರಂದು ಪ್ರಕಟಿಸಲಾಗಿತ್ತು. ಹಕ್ಕು ಮತ್ತು ಆಕ್ಷೇಪಣೆಗಳ ಪ್ರಕ್ರಿಯೆ ನವೆಂಬರ್ 10ಕ್ಕೆ ಮುಗಿಯಬೇಕಿತ್ತು.
ದೆಹಲಿಯ ಮತದಾರರಿಗೆ ಹೆಚ್ಚುವರಿ ಸಮಯ
ದೆಹಲಿಯಲ್ಲಿಯೂ ಗಡುವು ವಿಸ್ತರಿಸಲಾಗಿದೆ. ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಅಕ್ಟೋಬರ್ 30ರಿಂದ ನವೆಂಬರ್ 25ಕ್ಕೆ ಮುಂದೂಡಲಾಗಿದೆ.ಅವುಗಳ ಪರಿಶೀಲನೆ ಮತ್ತು ವಿಲೇವಾರಿಗೆ ಡಿಸೆಂಬರ್ 15ರವರೆಗೆ ಸಮಯ ನೀಡಲಾಗಿದೆ. ಅಂತಿಮ ಮತದಾರರ ಪಟ್ಟಿ ಡಿಸೆಂಬರ್ 22ರಂದು ಪ್ರಕಟವಾಗಲಿದೆ.
ಇದನ್ನೂ ಓದಿ:
ಕರ್ನಾಟಕ SIR ಅಂತಿಮ ಮತದಾರರ ಪಟ್ಟಿ ಪ್ರಕಟ: 1.7 ಕೋಟಿ ವೋಟ್ ಡಿಲೀಟ್, ರಾಜ್ಯದ ಮತದಾರರ ಅಂಕಿ-ಸಂಖ್ಯೆ ಹೀಗಿದೆ
ಅಂದರೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ. ಈ ಪ್ರಕ್ರಿಯೆಯಲ್ಲಿ ಚುನಾವಣಾ ಅಧಿಕಾರಿಗಳು ಮನೆಮನೆಗೆ ತೆರಳಿ ಮತದಾರರ ವಿವರಗಳನ್ನು ಪರಿಶೀಲಿಸುತ್ತಾರೆ.
ಈ ಪ್ರಕ್ರಿಯೆಯ ಮುಖ್ಯ ಉದ್ದೇಶಗಳು
– ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸುವುದು.
– ಮೃತಪಟ್ಟವರ ಹೆಸರುಗಳನ್ನು ನಿಯಮಾನುಸಾರ ತೆಗೆದುಹಾಕುವುದು.
– ಒಂದಕ್ಕಿಂತ ಹೆಚ್ಚು ಕಡೆ ದಾಖಲಾಗಿರುವ ಹೆಸರುಗಳನ್ನು ಪರಿಶೀಲಿಸುವುದು.
– ಸ್ಥಳ ಬದಲಾಯಿಸಿದ ಮತದಾರರ ವಿವರಗಳನ್ನು ಸರಿಪಡಿಸುವುದು.
– ಮತದಾರರ ಪಟ್ಟಿಯಲ್ಲಿರುವ ತಪ್ಪುಗಳನ್ನು ತಿದ್ದುಪಡಿ ಮಾಡುವುದು.
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅಥವಾ ವಿವರಗಳಲ್ಲಿ ತಪ್ಪಿದ್ದರೆ, ನಿಗದಿತ ಅವಧಿಯಲ್ಲಿ ಸಂಬಂಧಪಟ್ಟ ಅರ್ಜಿ ಸಲ್ಲಿಸಿ ಆಕ್ಷೇಪಣೆ ಅಥವಾ ತಿದ್ದುಪಡಿ ಕೋರಬಹುದು. ಮೇ 14ರಂದು ಆರಂಭವಾದ ಮೂರನೇ ಹಂತದ ಎಸ್ಐಆರ್ ಪ್ರಕ್ರಿಯೆಯಲ್ಲಿ ದೆಹಲಿ ಮತ್ತು ಮಹಾರಾಷ್ಟ್ರವೂ ಸೇರಿವೆ. ಈ ಹಂತ ಪೂರ್ಣಗೊಂಡ ನಂತರ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೊರತುಪಡಿಸಿ ದೇಶದ ಉಳಿದ ಭಾಗಗಳಲ್ಲಿಯೂ ಈ ಪ್ರಕ್ರಿಯೆ ಕೈಗೊಳ್ಳುವ ಯೋಜನೆ ಇದೆ ಎಂದು ವರದಿ ತಿಳಿಸಿದೆ.
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸುವುದು ಮುಖ್ಯ. ಕರಡು ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅಥವಾ ನಿಮ್ಮ ಹೆಸರು, ವಿಳಾಸ ಸೇರಿದಂತೆ ಇತರ ವಿವರಗಳಲ್ಲಿ ತಪ್ಪಿದ್ದರೆ, ನಿಗದಿತ ಗಡುವಿನೊಳಗೆ ಸಂಬಂಧಪಟ್ಟ ಚುನಾವಣಾಧಿಕಾರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.
ಎಸ್ಐಆರ್ ಪ್ರಕ್ರಿಯೆಯಲ್ಲಿ ಜನರಿಗೆ ತಮ್ಮ ವಿವರಗಳನ್ನು ಪರಿಶೀಲಿಸಲು ಮತ್ತು ಆಕ್ಷೇಪಣೆ ಸಲ್ಲಿಸಲು ಹೆಚ್ಚಿನ ಸಮಯ ಸಿಕ್ಕಿದೆ. ಆದರೆ ಈ ಗಡುವುಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗಿರುವುದರಿಂದ ಮತದಾರರು ತಮ್ಮ ರಾಜ್ಯದ ಹೊಸ ವೇಳಾಪಟ್ಟಿಯನ್ನು ಗಮನಿಸುವುದು ಅಗತ್ಯ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ