ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ (Arvind Kejriwal) ಮಧ್ಯಂತರ ಜಾಮೀನು ನೀಡುವುದನ್ನು ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ವಿರೋಧಿಸಿದ ಜಾರಿ ನಿರ್ದೇಶನಾಲಯ (ED) ಚುನಾವಣೆಯಲ್ಲಿ ಪ್ರಚಾರ ಮಾಡುವುದು ಮೂಲಭೂತ ಹಕ್ಕಲ್ಲ. ಹೀಗಾಗಿ, ಚುನಾವಣೆಯ ಕಾರಣಕ್ಕೆ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು (Interim Bail) ನೀಡಬಾರದು ಎಂದು ಆಗ್ರಹಿಸಿದೆ.
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಹೊಸ ಅಫಿಡವಿಟ್‌ನಲ್ಲಿ ಇಡಿ, ಇದುವರೆಗೂ ಯಾವುದೇ ರಾಜಕೀಯ ನಾಯಕ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಪ್ರಚಾರದ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದಿಲ್ಲ ಎಂದು ಹೇಳಿದೆ.
“ಚುನಾವಣೆಗಾಗಿ ಪ್ರಚಾರ ಮಾಡುವ ಹಕ್ಕು ಮೂಲಭೂತ ಹಕ್ಕು ಅಥವಾ ಸಾಂವಿಧಾನಿಕ ಹಕ್ಕಲ್ಲ. ಇದು ಕಾನೂನುಬದ್ಧ ಹಕ್ಕು ಕೂಡ ಅಲ್ಲ ಎಂಬುದನ್ನು ಗಮನಿಸುವುದು ಪ್ರಸ್ತುತವಾಗಿದೆ. ಯಾವುದೇ ರಾಜಕೀಯ ನಾಯಕನು ಸ್ಪರ್ಧೆಗೆ ಇಳಿಯದಿದ್ದರೂ ಬೇರೆಯವರ ಪರ ಪ್ರಚಾರಕ್ಕಾಗಿ ಮಧ್ಯಂತರ ಜಾಮೀನು ಪಡೆದಿಲ್ಲ. ಬಂಧನದಲ್ಲಿದ್ದರೆ ಸ್ಪರ್ಧಿಸುವ ಅಭ್ಯರ್ಥಿಗೆ ಸಹ ಮಧ್ಯಂತರ ಜಾಮೀನು ನೀಡಲಾಗುವುದಿಲ್ಲ.” ಎಂದು ಇಡಿ ಹೇಳಿದೆ.
ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ನಿಂದ ಮಧ್ಯಂತರ ಜಾಮೀನು ಸಾಧ್ಯತೆ
“ಚುನಾವಣಾ ಪ್ರಚಾರಕ್ಕಾಗಿ, ವಿಶೇಷವಾಗಿ ಅವರು ಚುನಾವಣೆಯಲ್ಲಿ ಸ್ಪರ್ಧಿಸದಿರುವಾಗ ಯಾವುದೇ ರಾಜಕಾರಣಿಗೆ ಇಲ್ಲಿಯವರೆಗೆ ಮಧ್ಯಂತರ ಜಾಮೀನು ನೀಡಲಾಗಿಲ್ಲ ಎಂದು ಇಡಿ ಪ್ರತಿಪಾದಿಸಿದೆ. ಇದಲ್ಲದೆ, ಅವರು ಸ್ಪರ್ಧಿಸಿದಾಗಲೂ ನ್ಯಾಯಾಲಯವು ಕೇವಲ ಪ್ರಚಾರಕ್ಕಾಗಿ ಜಾಮೀನು ನಿರಾಕರಿಸಿದೆ. ಕಳೆದ 5 ವರ್ಷಗಳಲ್ಲಿ 123 ಚುನಾವಣೆಗಳು ನಡೆದಿವೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಪ್ರಚಾರದ ಉದ್ದೇಶಕ್ಕಾಗಿ ಮಧ್ಯಂತರ ಜಾಮೀನು ನೀಡಿದರೆ, ವರ್ಷವಿಡೀ ಚುನಾವಣೆಗಳು ನಡೆಯುವುದರಿಂದ ಯಾವುದೇ ರಾಜಕಾರಣಿಯನ್ನು ಬಂಧಿಸಲಾಗುವುದಿಲ್ಲ ಮತ್ತು ನ್ಯಾಯಾಂಗ ಬಂಧನದಲ್ಲಿ ಇಡಲಾಗುವುದಿಲ್ಲ.” ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಬುಧವಾರ ಈ ಪ್ರಕರಣದಲ್ಲಿ ಕೇಜ್ರಿವಾಲ್ ಅವರ ಬಂಧನದ ವಿರುದ್ಧದ ಅರ್ಜಿಯನ್ನು ಆಲಿಸಿದ ಪೀಠದ ನೇತೃತ್ವದ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು, ನಾವು ಜಾಮೀನಿನ ಕುರಿತು ಶುಕ್ರವಾರ ಮಧ್ಯಂತರ ಆದೇಶವನ್ನು ಪ್ರಕಟಿಸುತ್ತೇವೆ ಎಂದಿದ್ದರು.
ಇದನ್ನೂ ಓದಿ: ಮದ್ಯ ನೀತಿ ಪ್ರಕರಣ: ಅರವಿಂದ್ ಕೇಜ್ರಿವಾಲ್ ನ್ಯಾಯಾಂಗ ಬಂಧನ ಮೇ 20ರವರೆಗೆ ವಿಸ್ತರಣೆ
ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಇಡಿ ಬಂಧಿಸಿತ್ತು. ಪ್ರಸ್ತುತ ಅವರನ್ನು ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಮೇ 7ರಂದು ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು ಅರವಿಂದ್ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು. ಮೇ 10ರಂದು ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ