ಒಬ್ಬ ಬಿಹಾರಿ ನೂರು ರೋಗಗಳಿಗೆ ಸಮ; ವಿವಾದ ಸೃಷ್ಟಿಸಿದ ಟಿಎಂಸಿ ನಾಯಕನ ವಿಡಿಯೋ ವೈರಲ್

| Updated By: ಸುಷ್ಮಾ ಚಕ್ರೆ

Updated on: Mar 15, 2022 | 7:33 PM

ತೃಣಮೂಲ ಕಾಂಗ್ರೆಸ್ ಶಾಸಕ ಮನೋರಂಜನ್ ಬ್ಯಾಪಾರಿ ಅವರು ಬಿಹಾರದ ಜನರನ್ನು "ಬಿಮಾರಿ" ಅಥವಾ ರೋಗಿಗಳು ಎಂದು ಕರೆದಿದ್ದಾರೆ. ಹಾಗೇ, ಬಂಗಾಳವನ್ನು "ರೋಗ ಮುಕ್ತ" ರಾಜ್ಯ ಎಂದು ಹೇಳಿಕೆ ನೀಡಿದ್ದು, ಈ ವಿಡಿಯೋ ವೈರಲ್ ಆಗಿದೆ

ಒಬ್ಬ ಬಿಹಾರಿ ನೂರು ರೋಗಗಳಿಗೆ ಸಮ; ವಿವಾದ ಸೃಷ್ಟಿಸಿದ ಟಿಎಂಸಿ ನಾಯಕನ ವಿಡಿಯೋ ವೈರಲ್
ಮನೋರಂಜನ್ ಬ್ಯಾಪಾರಿ
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಟಿಎಂಸಿ (TMC) ಪಕ್ಷದ ನಾಯಕರೊಬ್ಬರು ಸಾರ್ವಜನಿಕ ಸಭೆಯೊಂದರಲ್ಲಿ ಬಿಹಾರದ ವಿರುದ್ಧ ವಾಗ್ದಾಳಿ ನಡೆಸಿ ವಿವಾದ ಹುಟ್ಟುಹಾಕಿದ್ದಾರೆ. ತೃಣಮೂಲ ಕಾಂಗ್ರೆಸ್ ಶಾಸಕ ಮನೋರಂಜನ್ ಬ್ಯಾಪಾರಿ ಅವರು ಬಿಹಾರದ ಜನರನ್ನು “ಬಿಮಾರಿ” ಅಥವಾ ರೋಗಿಗಳು ಎಂದು ಕರೆದಿದ್ದಾರೆ. ಹಾಗೇ, ಬಂಗಾಳವನ್ನು “ರೋಗ ಮುಕ್ತ” ರಾಜ್ಯ ಎಂದು ಹೇಳಿಕೆ ನೀಡಿದ್ದು, ಈ ವಿಡಿಯೋ ವೈರಲ್ ಆಗಿದೆ.

“ಬಂಗಾಳಿ ರಕ್ತವು ನಿಮ್ಮ ರಕ್ತನಾಳಗಳಲ್ಲಿ ಹರಿಯುತ್ತಿದ್ದರೆ, ಖುದಿರಾಮ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ರಕ್ತವು ನಿಮ್ಮ ರಕ್ತನಾಳಗಳಲ್ಲಿ ಹಾದು ಹೋಗಿದ್ದರೆ, ನೀವು ನಿಮ್ಮ ಮಾತೃಭಾಷೆ ಮತ್ತು ಮಾತೃಭೂಮಿಯನ್ನು ಪ್ರೀತಿಸುತ್ತಿದ್ದರೆ, ನೀವೆಲ್ಲರೂ ‘ಏಕ್ ಬಿಹಾರಿ, ಸೌ ಬಿಮಾರಿ’ (ಒಬ್ಬ ಬಿಹಾರದ ವ್ಯಕ್ತಿ 100 ರೋಗಗಳಿಗೆ ಸಮಾನ) ಎಂದು ಜೋರಾಗಿ ಕೂಗಬೇಕು. ನಮಗೆ ರೋಗಗಳು ಬೇಡ. ಬಂಗಾಳವನ್ನು ರೋಗಮುಕ್ತಗೊಳಿಸಿ. ಜೈ ಬಾಂಗ್ಲಾ, ಜೈ ದೀದಿ ಮಮತಾ ಬ್ಯಾನರ್ಜಿ” ಎಂದು ಮನೋರಂಜನ್ ಬ್ಯಾಪಾರಿ ಕೋಲ್ಕತ್ತಾ ಪುಸ್ತಕ ಮೇಳದಲ್ಲಿ ಹೇಳಿದ್ದಾರೆ.

“ಬಿಹಾರದಲ್ಲಿ ಎಲ್ಲವೂ ಸರಿಯಾಗಿದ್ದರೆ, ಬಿಹಾರಕ್ಕೆ ಹಿಂತಿರುಗಿ” ಎಂದು ಅವರು ಹೇಳುವುದು ಕೂಡ ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ. ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿರುವ ತೃಣಮೂಲ ಕಾಂಗ್ರೆಸ್‌ನ ಮಾಜಿ ನಾಯಕ, ಹಾಲಿ ಬಿಜೆಪಿಯ ಸುವೇಂದು ಅಧಿಕಾರಿ ಟಿಎಂಸಿ ವಿರುದ್ಧ ಕಿಡಿ ಕಾರಿದ್ದಾರೆ.

ಈ ಮೊದಲು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯವರು ಬಿಹಾರಿಗಳು ಮತ್ತು ಉತ್ತರ ಪ್ರದೇಶದವರನ್ನು ‘ಬೋಹಿರಾಗೋಟೋಸ್’ (ಹೊರಗಿನವರು) ಎಂದು ಲೇಬಲ್ ಮಾಡಿದ್ದರು. ಈಗ ಬಂಗಾಳವನ್ನು ಬಿಹಾರಿಗಳಿಂದ ಮುಕ್ತಗೊಳಿಸಲು ಕರೆ ನೀಡಿದ್ದಾರೆ” ಎಂದು ಸುವೇಂದು ಅಧಿಕಾರಿ ಟೀಕಿಸಿದ್ದಾರೆ.

ಬಿಜೆಪಿ ತೊರೆದು ಟಿಎಂಸಿ ಸೇರಿರುವ ಬಿಹಾರಿ ಬಾಬು ಶತ್ರುಘ್ನ ಸಿನ್ಹಾ ಅವರಿಗೆ ನನ್ನದೊಂದು ವಿನಮ್ರ ಪ್ರಶ್ನೆ. ಸರ್, ಟಿಎಂಸಿ ಶಾಸಕ ಮನೋರಂಜನ್ ಬ್ಯಾಪಾರಿಯ ಈ ಅವಮಾನಕರ ವಾಗ್ದಾಳಿ ಬಗ್ಗೆ ನಿಮಗೆ ಏನನಿಸುತ್ತದೆ? ನಿಮ್ಮ ಹೊಸ ಪಕ್ಷದ ನಾಯಕ ಬಿಹಾರಿಗಳ ಬಗ್ಗೆ ಈ ರೀತಿ ಮಾತನಾಡಿರುವುದು ಸರಿಯೇ? ಎಂದು ಸುವೇಂದು ಅಧಿಕಾರಿ ಟ್ವೀಟ್ ಮಾಡಿದ್ದಾರೆ.

ನಟ ಶತ್ರುಘ್ನ ಸಿನ್ಹಾ ಅವರಿಗೆ ಟಿಎಂಸಿಯಿಂದ ಈ ಬಾರಿ ಚುನಾವಣೆಗೆ ಟಿಕೆಟ್ ನೀಡಲಾಗಿದೆ. ಕಳೆದ ವರ್ಷದ ಬಂಗಾಳ ಚುನಾವಣೆಯಲ್ಲಿ ಹೂಗ್ಲಿಯಿಂದ ಗೆದ್ದಿದ್ದ ಬ್ಯಾಪಾರಿ ಮೊದಲ ಬಾರಿಗೆ ಟಿಎಂಸಿಯ ಶಾಸಕರಾಗಿದ್ದಾರೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿ ನಿಜಕ್ಕೂ ಮಹಾನ್ ನಾಯಕಿ, ಬಂಗಾಳದ ಹುಲಿ; ಟಿಎಂಸಿಗೆ ಸೇರ್ಪಡೆಯಾದ ಶತ್ರುಘ್ನ ಸಿನ್ಹಾ ಬಣ್ಣನೆ

ಬಂಗಾಳ ಉಪಚುನಾವಣೆಯಲ್ಲಿ ಟಿಎಂಸಿಯಿಂದ ಸ್ಪರ್ಧಿಸಲಿದ್ದಾರೆ ಶತ್ರುಘ್ನ ಸಿನ್ಹಾ, ಬಾಬುಲ್ ಸುಪ್ರಿಯೋ

Published On - 7:32 pm, Tue, 15 March 22