ವಿವಿಧ ಚ್ಯಾನೆಲ್ಗಳು ಮತ್ತು ಸಂಸ್ಥೆಗಳು ನಡೆಸಿರುವ ಬಿಹಾರ ವಿಧಾನಸಭಾ ಚುನಾವಣೋತ್ತರ ಮತದಾನ ಸಮೀಕ್ಷೆಗಳ ಪ್ರಕಾರ ಬಿಹಾರದಲ್ಲಿ ಬದಲಾವಣೆಯ ಗಾಳಿ ಬೀಸುವ ಲಕ್ಷಣಗಳು ಗೋಚರಿಸುತ್ತಿವೆ. ಎಲ್ಲ ಸಮೀಕ್ಷೆಗಳು ಮಹಾಘಟಬಂಧನ್‌ಗೆ ಹೆಚ್ಚು ಸ್ಥಾನಗಳು ಸಿಗಲಿವೆಯೆಂದು ಹೇಳುತ್ತಿವೆ.
ಟಿವಿ9 ಭರತ್ವರ್ಷ್ ನಡೆಸಿರುವ ಸಮೀಕ್ಷೆ ಅನ್ವಯ ಮಹಾಘಟಬಂಧನ್ 115-125 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಯಿದ್ದರೆ ಎನ್ಡಿಎ 110-120 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು. ಎಲ್ಜೆಪಿ 3 ರಿಂದ 5 ಕ್ಷೇತ್ರಗಳಲ್ಲಿ ಮತ್ತು ಪಕ್ಷೇತರರು 10-15 ಸೀಟುಗಳನ್ನು ಗೆಲ್ಲಬಹುದೆಂದು ಭರತ್ವರ್ಷ್ ಸಮೀಕ್ಷೆ ಹೇಳುತ್ತದೆ.
ಸಿ-ವೋಟರ್ ಸಮೀಕ್ಷೆ
ಜನ್ ಕಿ ಬಾತ್ ನಡೆಸಿರುವ ಸಮೀಕ್ಷೆಯ ಪ್ರಕಾರ ಮಹಾಘಟಬಂಧನ್‌ಗೆ ಹೆಚ್ಚು ಸ್ಥಾನ ಲಭ್ಯವಾಗಲಿವೆ. ಅದಕ್ಕೆ 118-138 ಕ್ಷೇತ್ರಗಳಲ್ಲಿ ಗೆಲ್ಲುವ ಅವಕಾಶಗಳಿದ್ದರೆ ಬಿಜೆಪಿ, ಜೆಡಿ (ಯು) ಪಕ್ಷಗಳನ್ನೊಳಗೊಂಡ ಎನ್ಡಿಎಗೆ 91-117 ಕ್ಷೇತ್ರಗಳಲ್ಲಿ ಗೆಲುವು ದಕ್ಕುವ ಸಾಧ್ಯತೆಯಿದೆ. ಎಲ್ಜೆಪಿ 5 ರಿಂದ 8 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವ ಸಾಧ್ಯತೆಯಿದ್ದರೆ ಪಕ್ಷೇತರ ಅಭ್ಯರ್ಥಿಗಳು 3-6 ಸೀಟುಗಳನ್ನು ಕಬಳಿಸಬಹುದೆಂದು ಜನ್ ಕಿ ಬಾತ್ ನಡೆಸಿರುವ ಸಮೀಕ್ಷೆ ಹೇಳುತ್ತದೆ.
ಟೈಮ್ಸ್ ನೌ ಚ್ಯಾನೆಲ್ ಸಿ ವೋಟರ್ ಸಹಯೋಗದೊಂದಿಗೆ ನಡೆಸಿರುವ ಸಮೀಕ್ಷೆಯ ಪ್ರಕಾರವೂ ಮಹಾಘಟಬಂಧನ್ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಮಹಾಘಟಬಂಧನ್ 120 ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳುವ ಸಾಧ್ಯತೆಯಿದ್ದರೆ ಎನ್ಡಿಎ 116 ಕ್ಷೇತ್ರಗಳಲ್ಲಿ ಗೆಲುವು ಲಭ್ಯವಾಗಬಹುದೆಂದು ಸಮೀಕ್ಷೆ ಹೇಳುತ್ತದೆ. ಎಲ್ಜೆಪಿ 6 ಕ್ಷೇತ್ರಗಳಲ್ಲಿ ಮತ್ತು 1 ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲ್ಲುವ ಸಾಧ್ಯತೆಯಿದೆ.
ಹಾಗೆಯೇ, ಎಬಿಪಿ ವಾಹಿನಿ ನಡೆಸಿರುವ ಸಮೀಕ್ಷೆಯ ಪ್ರಕಾರ ಮಹಾಘಟಬಂಧನ್‌ಗೆ 108-131 ಕ್ಷೇತ್ರಗಳಲ್ಲಿ ಜಯ ಲಭಿಸುವ ಸಾಧ್ಯತೆಯಿದೆ ಮತ್ತು ಎನ್ಡಿಎಗೆ 104-128 ಕ್ಷೇತ್ರಗಳಲ್ಲಿ ಗೆಲುವು ದಕ್ಕಬಹುದು. ಎಲ್ಜೆಪಿ 1-3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆಯಿದೆ ಮತ್ತು ಪಕ್ಷೇತರ ಅಭ್ಯರ್ಥಿಗಳು 4-8 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಬಹುದೆಂದು ಈ ಸಮೀಕ್ಷೆ ಹೇಳುತ್ತದೆ.
ಕೊನೆಯದಾಗಿ, ಪೋಲ್ ಆಫ್ ಪೋಲ್ಸ್ ಸಮೀಕ್ಷೆಯಂತೆಯೂ ಮಹಾಘಟಬಂಧನ್‌ಗೆ ಹೆಚ್ಚು ಸ್ಥಾನಗಳು ಲಭಿಸಲಿದೆ. ಇದರ ಪ್ರಕಾರ ಮಹಾಘಟಬಂಧನ್ 123 ಸೀಟುಗಳು ಸಿಗಲಿವೆ ಮತ್ತು ಎನ್ಡಿಎಗೆ 112 ಕ್ಷೇತ್ರಗಳಲ್ಲಿ ಜಯ ದಕ್ಕಲಿದೆ. ಎಲ್ಜೆಪಿ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆಯಿದೆ ಮತ್ತು 4 ಕ್ಷೇತ್ರಗಳು ಪಕ್ಷೇತರ ಅಭ್ಯರ್ಥಿಗಳ ಪಾಲಾಗಲಿವೆಯೆಂದು ಪೋಲ್ ಆಫ್ ಪೋಲ್ಸ್ ಸಮೀಕ್ಷೆ ಹೇಳುತ್ತದೆ.