Fact Check: ರಾಜಸ್ಥಾನಕ್ಕೆ ಪ್ರಧಾನಿ ಭೇಟಿ ಹೊತ್ತಲ್ಲಿ ವೈರಲ್ ಆಗಿರುವ ‘ಗೋ ಬ್ಯಾಕ್ ಮೋದಿ’ ಫೋಟೊ ಅಜ್ಮೇರ್ ರಸ್ತೆಯದ್ದಲ್ಲ

ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸಭೆಗೂ ಮುನ್ನ ಹಾಕಲಾಗಿದೆ ಎಂಬ ಹೇಳಿಕೆಯೊಂದಿಗೆ "Modi No Entry" ಎಂಬ ಹೋರ್ಡಿಂಗ್ ಫೋಟೊ ವೈರಲ್ ಆಗಿದೆ. ಆದರೆ ಈ ಫೋಟೊ ರಾಜಸ್ಥಾನದ್ದು ಅಲ್ಲ. ಅದೇ ರೀತಿ ರಸ್ತೆಯಲ್ಲಿ ಗೋ ಬ್ಯಾಕ್ ಮೋದಿ ಎಂದು ಬರೆದಿರುವುದು ಕೂಡಾ ಅಜ್ಮೇರ್​​ನದ್ದು ಅಲ್ಲ.

Fact Check: ರಾಜಸ್ಥಾನಕ್ಕೆ ಪ್ರಧಾನಿ ಭೇಟಿ ಹೊತ್ತಲ್ಲಿ ವೈರಲ್ ಆಗಿರುವ ಗೋ ಬ್ಯಾಕ್ ಮೋದಿ ಫೋಟೊ ಅಜ್ಮೇರ್ ರಸ್ತೆಯದ್ದಲ್ಲ
ವೈರಲ್ ಆಗಿರುವ ಫೋಟೊ

Updated on: May 31, 2023 | 8:57 PM

ಪ್ರಧಾನಿ ನರೇಂದ್ರ ಮೋದಿಯವರ (Narendra Modi) ರಾಜಸ್ಥಾನ (Rajasthan) ಭೇಟಿಯ ಸಂದರ್ಭದಲ್ಲಿ ‘ಗೋ ಬ್ಯಾಕ್ ಮೋದಿ’ ಎಂದು ರಸ್ತೆಯಲ್ಲಿ ಬರೆದಿರುವ ಫೋಟೊವೊಂದು ವೈರಲ್ ಆಗಿದೆ. ಮೇ 31 ರಂದು ರಾಜಸ್ಥಾನದ ಅಜ್ಮೇರ್‌ಗೆ (Ajmer) ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯನ್ನು ಪ್ರತಿಭಟಿಸುತ್ತಿರುವ ಜನರು ರಸ್ತೆಯಲ್ಲಿ ‘ಗೋ ಬ್ಯಾಕ್ ಮೋದಿ’ ಎಂದು ಬರೆದು ಪ್ರತಿಭಟಿಸಿರುವುದು ಎಂಬ ಪೋಸ್ಟ್​​ಗಳೊಂದಿಗೆ ಈ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆದರೆ ಈ ಫೋಟೊ ಹಳೇದು. 2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮೊದಲು ಮೋದಿ ರಾಜ್ಯಕ್ಕೆ ಭೇಟಿ ನೀಡಿದಾಗ, ನಗರದ ಎಸ್‌ಪ್ಲೇನೇಡ್ ಪ್ರದೇಶದಲ್ಲಿ CAA ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿತ್ತು. ಆ ವೇಳೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಈ ರೀತಿ ಪ್ರತಿಭಟನೆಯ ದನಿ ಕಾಣಿಸಿಕೊಂಡಿತ್ತು.

ಈ ಫೋಟೊದ ಫ್ಯಾಕ್ಟ್ ಚೆಕ್ ನಡೆಸಿದ ದಿ ಕ್ವಿಂಟ್ ಇದು ಕೊಲ್ಕತ್ತಾದ ಫೋಟೊ ಎಂದು ವರದಿ ಮಾಡಿದೆ. ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಪತ್ರಕರ್ತ ಮಯೂಖ್ ರಂಜನ್ ಘೋಷ್ ಅವರು 11 ಜನವರಿ 2020ರಂದು ಮಾಡಿದ ಟ್ವೀಟ್ ಸಿಕ್ಕಿದೆ. ಅದರಲ್ಲಿ ಅವರು ಕೋಲ್ಕತ್ತಾದ ಎಸ್ಪ್ಲೇನೇಡ್ ಪ್ರದೇಶದಿಂದ ತೆಗೆದ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಫೋಟೊದ ಹಿನ್ನಲೆಯಲ್ಲಿ ‘ಮೆಟ್ರೋ ಚಾನೆಲ್ ಕಂಟ್ರೋಲ್ ಪೋಸ್ಟ್ ಹೇರ್ ಸ್ಟ್ರೀಟ್ ಪೋಲೀಸ್ ಸ್ಟೇಷನ್’ ಎಂದು ಬರೆದಿರುವುದು ಕಾಣಬಹುದು.


2020 ರ ಜನವರಿಯಿಂದ ಸ್ಕ್ರಾಲ್ ಮತ್ತು ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿಯೂ ಈ ಫೋಟೊ ಬಳಕೆಯಾಗಿದೆ. ಹಾಗಾಗಿ ಈ ಫೋಟೊ ಅಜ್ಮೇರ್​​ನದ್ದು ಅಲ್ಲ ಎಂಬುದು ಸ್ಪಷ್ಟ.

ರಾಜಸ್ಥಾನದಲ್ಲಿ ‘ಮೋದಿ ನೋ ಎಂಟ್ರಿ’ ಹೋರ್ಡಿಂಗ್ಸ್?

ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸಭೆಗೂ ಮುನ್ನ ಹಾಕಲಾಗಿದೆ ಎಂಬ ಹೇಳಿಕೆಯೊಂದಿಗೆ “Modi No Entry” ಎಂಬ ಹೋರ್ಡಿಂಗ್ ಫೋಟೊ ವೈರಲ್ ಆಗಿದೆ.ಸಿಯಾ ಚೌಧರಿ ಎಂಬ ಬಳಕೆದಾರರು ಫೋಟೋ ಅಪ್‌ಲೋಡ್ ಮಾಡಿ, ಇದು ರಾಜಸ್ಥಾನ, ನೀವು ಇದು ಗುಜರಾತ್ ಎಂದು ನೀವು ಭಾವಿಸಿದ್ದೀರಾ ಎಂದು ಫೋಟೊ ಶೇರ್ ಮಾಡಿ #Modi_Go_Back ಹ್ಯಾಶ್ ಟ್ಯಾಗ್ ಬಳಸಿದ್ದಾರೆ.


ಕೇಂದ್ರ ಸರ್ಕಾರದ ಒಂಬತ್ತನೇ ವರ್ಷಾಚರಣೆಯನ್ನು ಗುರುತಿಸಲು ಮತ್ತು ಮುಂಬರುವ 2023 ರ ವಿಧಾನಸಭೆ ಚುನಾವಣೆಗೆ ಬೆಂಬಲವನ್ನು ಪಡೆಯಲು ಪ್ರಧಾನ ಮಂತ್ರಿ ಅವರು ಮೇ 31 ರಂದು ರಾಜಸ್ಥಾನದ ಪುಷ್ಕರ್ ಮತ್ತು ಅಜ್ಮೇರ್ ಗೆ ಭೇಟಿ ನೀಡಿದ್ದು, ಈ ಹೊತ್ತಲ್ಲಿ #Modi_Go_Back ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿದೆ.

ಇದನ್ನೂ ಓದಿ: Fact Check: ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಒಣಗಿಸಲು ಹೇರ್ ಡ್ರೈಯರ್, ಇಸ್ತ್ರಿ ಪೆಟ್ಟಿಗೆ ಬಳಕೆ?; ವೈರಲ್ ಫೋಟೊ ಐಪಿಎಲ್​​ನದ್ದು ಅಲ್ಲ

ಫ್ಯಾಕ್ಟ್ ಚೆಕ್

ಈ ಬಗ್ಗೆ ವರದಿ ಪ್ರಕಟಿಸಿರುವ ದಿ ಕ್ವಿಂಟ್, ಪ್ರಧಾನಿ ಮೋದಿ ತಲೆ ತಗ್ಗಿಸಿ ನಿಂತಿರುವ ಫೋಟೊದೊಂದಿಗೆ “Modi No Entry” ಎಂದು ಈಗ ವೈರಲ್ ಆಗುತ್ತಿರುವ ಹೋರ್ಡಿಂಗ್​​ಗೂ ರಾಜಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.ಈ ಚಿತ್ರ ಫೆಬ್ರವರಿ 2019ರದ್ದು. ಮಾಧ್ಯಮ ವರದಿಗಳ ಪ್ರಕಾರ, ಪ್ರಧಾನಿ ಮೋದಿಯವರ ಭೇಟಿಗೆ ಮುಂಚಿತವಾಗಿ ಆಂಧ್ರಪ್ರದೇಶದಲ್ಲಿ ಹೋರ್ಡಿಂಗ್‌ಗಳನ್ನು ಹಾಕಲಾಗಿದೆ.

ವೈರಲ್ ಚಿತ್ರದ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ದಿ ನ್ಯೂಸ್ ಮಿನಿಟ್‌ನ ವೆಬ್‌ಸೈಟ್‌ನಲ್ಲಿ ಈ ಚಿತ್ರ ಪ್ರಕಟವಾಗಿರುವುದು ಸಿಕ್ಕಿದೆ. ಪ್ರಧಾನಿ ಮೋದಿಯವರ ಭೇಟಿಗೂ ಮುನ್ನ ಆಂಧ್ರಪ್ರದೇಶದ ಗುಂಟೂರು ಮತ್ತು ವಿಜಯವಾಡದ ಸುತ್ತಮುತ್ತ ಹಲವಾರು ಸ್ಥಳಗಳಲ್ಲಿ ಹೋರ್ಡಿಂಗ್‌ಗಳನ್ನು ಹಾಕಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ