PM Modi in Ajmer: ಕಾಂಗ್ರೆಸ್ ‘ಗ್ಯಾರಂಟಿ’ ದಶಕಗಳಷ್ಟು ಹಳೆಯದು, ಗರೀಬಿ ಹಟಾವೋ ದೊಡ್ಡ ಸುಳ್ಳು: ಮೋದಿ

|

Updated on: May 31, 2023 | 6:47 PM

ಬ್ರಹ್ಮದೇವನ ಆಶೀರ್ವಾದದಿಂದ ಭಾರತದಲ್ಲಿ ಹೊಸ ಸೃಷ್ಟಿಯ ಯುಗ ನಡೆಯುತ್ತಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ 9 ವರ್ಷ ಪೂರೈಸಿದೆ. ಈ 9 ವರ್ಷಗಳನ್ನು ನಾಗರಿಕರ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

PM Modi in Ajmer: ಕಾಂಗ್ರೆಸ್ ಗ್ಯಾರಂಟಿ ದಶಕಗಳಷ್ಟು ಹಳೆಯದು, ಗರೀಬಿ ಹಟಾವೋ ದೊಡ್ಡ ಸುಳ್ಳು: ಮೋದಿ
ಅಜ್ಮೇರ್ ನಲ್ಲಿ ಪ್ರಧಾನಿ ಮೋದಿ ಭಾಷಣ
Follow us on

ರಾಜಸ್ಥಾನಕ್ಕೆ(Rajasthan) ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅಜ್ಮೇರ್‌ನಲ್ಲಿ (Ajmer) ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ. ಅಜ್ಮೇರ್‌ಗೆ ಬರುವ ಮೊದಲು, ನನಗೆ ಪುಷ್ಕರ್‌ಗೆ ಭೇಟಿ ನೀಡುವ ಅವಕಾಶ ಸಿಕ್ಕಿತು. ನಮ್ಮ ಗ್ರಂಥಗಳಲ್ಲಿ, ಬ್ರಹ್ಮ ದೇವರನ್ನು ಬ್ರಹ್ಮಾಂಡದ ಸೃಷ್ಟಿಕರ್ತ ಎಂದು ಕರೆಯಲಾಗುತ್ತದೆ. ಬ್ರಹ್ಮದೇವನ ಆಶೀರ್ವಾದದಿಂದ ಭಾರತದಲ್ಲಿ ಹೊಸ ಸೃಷ್ಟಿಯ ಯುಗ ನಡೆಯುತ್ತಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ 9 ವರ್ಷ ಪೂರೈಸಿದೆ. ಈ 9 ವರ್ಷಗಳನ್ನು ನಾಗರಿಕರ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.


ಕಾಂಗ್ರೆಸ್ ನ ಈ ‘ಗ್ಯಾರಂಟಿ ಪದ್ಧತಿ’ ಹೊಸದಲ್ಲ, ಹಳೆಯದು. 50 ವರ್ಷಗಳ ಹಿಂದೆ ಕಾಂಗ್ರೆಸ್ ದೇಶಕ್ಕೆ ‘ಗರೀಬಿ ಹಟಾವೋ’ ಭರವಸೆ ನೀಡಿತ್ತು. ಇದು ಕಾಂಗ್ರೆಸ್ ಪಕ್ಷ ಬಡವರಿಗೆ ಮಾಡಿದ ದೊಡ್ಡ ದ್ರೋಹ. ಬಡವರನ್ನು ವಂಚಿಸುವುದು ಕಾಂಗ್ರೆಸ್‌ನ ತಂತ್ರವಾಗಿದೆ. ಇದರಿಂದ ರಾಜಸ್ಥಾನದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಂಗ್ರೆಸ್ ಸರ್ಕಾರವಿದ್ದಿದ್ದರೆ, ವ್ಯಾಕ್ಸಿನೇಷನ್ ವ್ಯಾಪ್ತಿಯು ಕೇವಲ ಶೇ 60 ತಲುಪುತ್ತಿತ್ತು. ಆ ಸಮಯದಲ್ಲಿ, 100 ರಲ್ಲಿ 40 ಗರ್ಭಿಣಿಯರು ಮತ್ತು ಮಕ್ಕಳು ಜೀವರಕ್ಷಕ ಲಸಿಕೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ.

ಈಗ  ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ, ದೇಶದಲ್ಲಿ ಶೇ 100 ವ್ಯಾಕ್ಸಿನೇಷನ್ ಕವರೇಜ್ ಇನ್ನೂ 40 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈಗ ಹಲವಾರು ತಲೆಮಾರುಗಳು ಕಳೆದಿವೆ. ಜೀವರಕ್ಷಕ ಲಸಿಕೆಗಳ ಅನುಪಸ್ಥಿತಿಯಲ್ಲಿ ಸಾಯುವ ಬಡ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯನ್ನು ನೀವು ಊಹಿಸಬಹುದೇ? ಎಂದು ಮೋದಿ ಕೇಳಿದ್ದಾರೆ.

ಇದನ್ನೂ ಓದಿ: PM Modi in Rajasthan: ಪುಷ್ಕರ್ ಬ್ರಹ್ಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

2014 ರ ಮೊದಲು ಪರಿಸ್ಥಿತಿ ಹೇಗಿತ್ತು? ಭ್ರಷ್ಟಾಚಾರದ ವಿರುದ್ಧ ಜನರು ಬೀದಿಗಿಳಿದಿದ್ದರು, ದೊಡ್ಡ ನಗರಗಳಲ್ಲಿ ಭಯೋತ್ಪಾದಕ ದಾಳಿಗಳು ನಡೆಯುತ್ತಿದ್ದವು, ಕಾಂಗ್ರೆಸ್ ಸರ್ಕಾರವು ಗಡಿಯಲ್ಲಿ ರಸ್ತೆಗಳನ್ನು ನಿರ್ಮಿಸಲು ಹೆದರುತ್ತಿತ್ತು, ಮಹಿಳೆಯರ ಮೇಲೆ ನಡೆಯುವ ಅಪರಾಧ ಹೆಚ್ಚಾಗಿತ್ತು. ಪ್ರಧಾನಿಗಿಂತ ಮೇಲೊಂದು ಅಧಿಕಾರವಿತ್ತು, ಕಾಂಗ್ರೆಸ್ ಸರ್ಕಾರ ರಿಮೋಟ್ ಕಂಟ್ರೋಲ್ ಮೂಲಕ ಕೆಲಸ ಮಾಡುತ್ತಿತ್ತು. ಯುವಕರ ಮುಂದೆ ಕತ್ತಲಿತ್ತು. ಇಂದು ವಿಶ್ವದಾದ್ಯಂತ ಭಾರತವನ್ನು ಹೊಗಳಲಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಕಾಂಗ್ರೆಸ್ ಯಾವಾಗಲೂ ಈ ಧೀರರ ಮತ್ತು ಧೈರ್ಯಶಾಲಿಗಳ ಈ ಭೂಮಿಯನ್ನು ವಂಚಿಸಿದೆ. 4 ದಶಕಗಳಿಂದ ಕಾಂಗ್ರೆಸ್ ಒನ್ ರ್ಯಾಂಕ್ ಒನ್ ಪಿಂಚಣಿ (ಒಆರ್‌ಒಪಿ) ಹೆಸರಿನಲ್ಲಿ ಮಾಜಿ ಸೈನಿಕರಿಗೆ ದ್ರೋಹ ಮಾಡುವುದನ್ನು ಮುಂದುವರೆಸಿದೆ. ಬಿಜೆಪಿ ಸರ್ಕಾರ ಒಆರ್‌ಒಪಿ ಜಾರಿಗೊಳಿಸಿದ್ದು ಮಾತ್ರವಲ್ಲದೆ ಮಾಜಿ ಸೈನಿಕರಿಗೆ ಬಾಕಿಯನ್ನೂ ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ವಿರುದ್ಧ  ವಾಗ್ದಾಳಿ ನಡೆಸಿದ ಮೋದಿ,  ಅವರು ಪ್ರತಿ ಅಭಿವೃದ್ಧಿ ಯೋಜನೆಯಲ್ಲಿ 85 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಮ್ಮ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇರಲಿಲ್ಲ.  ಕಾಂಗ್ರೆಸ್ ಪ್ರತಿ ಯೋಜನೆಯಲ್ಲಿ ಶೇ 85 ಕಮಿಷನ್ ಕಡಿತಗೊಳಿಸುವ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷವು ಸೃಷ್ಟಿಸಿದ ಸೋರಿಕೆಯನ್ನು ನಾವು ಮುಚ್ಚಿದ್ದರಿಂದ ನಾವು ಅಭಿವೃದ್ಧಿಯನ್ನು ಮಾಡಲು ಸಾಧ್ಯವಾಯಿತು ಎಂದಿದ್ದಾರೆ ಮೋದಿ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿ ವಾರಗಳ ನಂತರ ಪ್ರಧಾನಿಯವರ ದಾಳಿ ಬಂದಿದೆ.ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಈ ಹಿಂದೆ ಇದ್ದ ಬಿಜೆಪಿ ಸರ್ಕಾರವನ್ನು ಚುನಾವಣಾ ಪ್ರಚಾರದ ಸಮಯದಲ್ಲಿ  ‘40% ಕಮಿಷನ್ ಸರ್ಕಾರ’ ಎಂದು ಲೇವಡಿ ಮಾಡಿತ್ತು.

ಕಾಂಗ್ರೆಸ್ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದ ಮೋದಿ, ಲೂಟಿಯ ವಿಚಾರದಲ್ಲಿ ಕಾಂಗ್ರೆಸ್ ಯಾರ ನಡುವೆಯೂ ಭೇದಭಾವ ಮಾಡುವುದಿಲ್ಲ. ಇದು ಬಡವರು, ತುಳಿತಕ್ಕೊಳಗಾದವರು, ಆದಿವಾಸಿಗಳು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ದಿವ್ಯಾಂಗರು ಸೇರಿದಂತೆ ಪ್ರತಿಯೊಬ್ಬ ನಾಗರಿಕರನ್ನು ಅದು ಲೂಟಿ ಮಾಡುತ್ತದೆ.

ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಒಳ ಜಗಳದ ಬಗ್ಗೆಯೂ ಮಾತನಾಡಿದ ಮೋದಿ ಹಲವು ವರ್ಷಗಳ ನಂತರ, ನೀವು 2014 ರಲ್ಲಿ ಕೇಂದ್ರದಲ್ಲಿ ಸ್ಥಿರ ಸರ್ಕಾರವನ್ನು ಮಾಡಿದ್ದೀರಿ. ಬಿಜೆಪಿ ನಿಮ್ಮ ಜನಾದೇಶವನ್ನು ಗೌರವಿಸಿದೆ. ಆದರೆ ನೀವು ಐದು ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಜನಾದೇಶ ನೀಡಿದ್ದೀರಿ. ರಾಜಸ್ಥಾನಕ್ಕೆ ಪ್ರತಿಯಾಗಿ ಏನು ಸಿಕ್ಕಿತು? ಅಸ್ಥಿರತೆ ಮತ್ತು ಅರಾಜಕತೆ. ಕಳೆದ ಐದು ವರ್ಷಗಳಿಂದ ಸಚಿವರು, ಶಾಸಕರು ಮತ್ತು ಸಿಎಂ ಪರಸ್ಪರ ಹೊಡೆದಾಟದಲ್ಲಿ ನಿರತರಾಗಿದ್ದಾರೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಮುಸುಕಿನ ಗುದ್ದಾಟ ಬಗ್ಗೆ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:23 pm, Wed, 31 May 23