ಕೃಷಿ ಕಾನೂನುಗಳ ಬಗ್ಗೆ ಕೇಂದ್ರ ಸರ್ಕಾರ ಜತೆ ಮಾತುಕತೆಗೆ ಸಿದ್ಧ: ರಾಕೇಶ್ ಟಿಕಾಯತ್

|

Updated on: May 24, 2021 | 12:21 PM

Rakesh Tikait: ಸರ್ಕಾರವು ಮಾತುಕತೆಗೆ ಬಯಸಿದರೆ ಸಂಯುಕ್ತಾ ಕಿಸಾನ್ ಮೋರ್ಚಾ ಸಿದ್ಧವಿದೆ ಎಂದು ಟಿಕಾಯತ್ ಹೇಳಿದ್ದು ಇದು ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ಇರಬೇಕು ಎಂದು ಪ್ರತಿಪಾದಿಸಿದರು.

ಕೃಷಿ ಕಾನೂನುಗಳ ಬಗ್ಗೆ ಕೇಂದ್ರ ಸರ್ಕಾರ ಜತೆ ಮಾತುಕತೆಗೆ ಸಿದ್ಧ: ರಾಕೇಶ್ ಟಿಕಾಯತ್
ರಾಕೇಶ್ ಟಿಕಾಯತ್
Follow us on

ಮೊಹಾಲಿ: ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ಚರ್ಚೆ ನಡೆಯಬೇಕಿದೆ ಎಂದು ಪ್ರತಿಪಾದಿಸಿದ ರೈತ ಸಂಘಗಳು ಕೇಂದ್ರದೊಂದಿಗೆ ಮಾತುಕತೆ ಪುನರಾರಂಭಿಸಲು ಸಿದ್ಧವಾಗಿವೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಭಾನುವಾರ ಹೇಳಿದ್ದಾರೆ. ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸದ ಹೊರತು ಪ್ರತಿಭಟನಾ ಸ್ಥಳಗಳಿಂದ ಮನೆಗೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ಅಭಯ್ ಸಿಂಗ್ ಸಂಧು ಅವರ ಕುಟುಂಬಕ್ಕೆ ಸಂತಾಪ ಸೂಚಿಸಲು ಮೊಹಾಲಿಗೆ ಹೋಗಿದ್ದ ಟಿಕಾಯತ್ ಅಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಸೋದರಳಿಯ ಸಂಧು ಅವರು ಇತ್ತೀಚೆಗೆ ಕೊವಿಡ್​ನಿಂದ ನಿಧನರಾಗಿದ್ದರು.

ಸರ್ಕಾರವು ಮಾತುಕತೆಗೆ ಬಯಸಿದರೆ ಸಂಯುಕ್ತಾ ಕಿಸಾನ್ ಮೋರ್ಚಾ ಸಿದ್ಧವಿದೆ ಎಂದು ಟಿಕಾಯತ್ ಹೇಳಿದ್ದು ಇದು ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ಇರಬೇಕು ಎಂದು ಪ್ರತಿಪಾದಿಸಿದರು.

ಪ್ರತಿಭಟನಾ ನಿರತ 40 ಕ್ಕೂ ಹೆಚ್ಚು ರೈತ ಸಂಘಗಳ ಒಕ್ಕೂಟ ಸಂಸ್ಥೆಯಾದ ಸಂಯುಕ್ತಾ ಕಿಸಾನ್ ಮೋರ್ಚಾ (ಎಸ್‌ಕೆಎಂ) ಶುಕ್ರವಾರ ಪ್ರಧಾನಿಗೆ ಪತ್ರ ಬರೆದಿದ್ದು, ಕಳೆದ ವರ್ಷ ನವೆಂಬರ್‌ನಿಂದ ಅವರು ಪ್ರತಿಭಟನೆ ನಡೆಸುತ್ತಿರುವ ಮೂರು ಕೃಷಿ ಕಾನೂನುಗಳ ಕುರಿತು ಮಾತುಕತೆ ಪುನರಾರಂಭಿಸುವಂತೆ ಒತ್ತಾಯಿಸಿದೆ.

ರೈತರು ಮತ್ತು ಸರ್ಕಾರದ ನಡುವೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿದ್ದರೂ ಫಲಕಾರಿಯಾಗಿಲ್ಲ. ಸರ್ಕಾರದ ಸಮಿತಿಯು ಜನವರಿ 22 ರಂದು ರೈತ ಮುಖಂಡರನ್ನು ಭೇಟಿ ಮಾಡಿತ್ತು. ಜನವರಿ 26 ರಿಂದ ರಾಷ್ಟ್ರ ರಾಜಧಾನಿಯಲ್ಲಿ ರೈತರ ಟ್ರಾಕ್ಟರ್ ಮೆರವಣಿಗೆ ಹಿಂಸಾತ್ಮಕವಾಗಿದ್ದರಿಂದ ಎರಡೂ ಕಡೆಯ ನಡುವೆ ಯಾವುದೇ ಮಾತುಕತೆ ನಡೆದಿಲ್ಲ.

ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮೇ26ರಂದು 6ತಿಂಗಳು ಪೂರೈಸಲಿದೆ. ಆರು ತಿಂಗಳಿನಿಂದ, ಗಡಿಭಾಗಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ, ಆದರೆ ಸರ್ಕಾರ ಆಲಿಸುತ್ತಿಲ್ಲ ಎಂದಿದ್ದಾರೆ ಟಿಕಾಯತ್.
ಕಾಂಗ್ರೆಸ್, ಟಿಎಂಸಿ, ಎಡ ಪಕ್ಷಗಳು, ಎಸ್‌ಪಿ, ಎನ್‌ಸಿಪಿ ಮತ್ತು ಡಿಎಂಕೆ ಸೇರಿದಂತೆ ಹನ್ನೆರಡು ಪ್ರಮುಖ ವಿರೋಧ ಪಕ್ಷಗಳು ಮೇ 26 ರಂದು ಸಂಯುಕ್ತಾ ಕಿಸಾನ್ ಮೋರ್ಚಾ ನೀಡಿದ ದೇಶವ್ಯಾಪಿ ಪ್ರತಿಭಟನಾ ಕರೆಗೆ ಬೆಂಬಲ ನೀಡಿದೆ.

ಕೊರೊನಾ ವೈರಸ್ ಉಲ್ಬಣದ ಮಧ್ಯೆಯೂ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ ರೈತರಿಗೆ ದೇಶದ 12 ಪ್ರಮುಖ ಪ್ರತಿಪಕ್ಷಗಳು ಬೆಂಬಲ ಸೂಚಿಸಿ ಹೇಳಿಕೆ ಬಿಡುಗಡೆ ಮಾಡಿವೆ. ಹಾಗೆ ಮೇ 26ರಂದು ಸಂಯುಕ್ತ ಕಿಸಾನ್ ಮೋರ್ಚಾ ಕರಾಳ ದಿನ ಆಚರಿಸಲು ನಿರ್ಧಾರ ಮಾಡಿರುವುದಕ್ಕೂ ನಮ್ಮ ಬೆಂಬಲವಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಈ 12 ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕೊವಿಡ್​ 19 ನಿಯಂತ್ರಣಕ್ಕಾಗಿ 9 ಸಲಹೆಗಳನ್ನು ನೀಡಿದ್ದವು. ಇದೀಗ ಪ್ರತಿಭಟನಾ ನಿರತ ರೈತರಿಗೆ ತಮ್ಮ ಬೆಂಬಲ ನೀಡುವುದಾಗಿ ತಿಳಿಸಿವೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ನಮ್ಮ ದೇಶದ ಲಕ್ಷಾಂತರ ಅನ್ನದಾತರು ಕಳೆದ ಆರು ತಿಂಗಳುಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಕೂಡಲೇ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ನಾವು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಲಿಖಿತ ಹೇಳಿಕೆಯಲ್ಲಿ ಕಾಂಗ್ರೆಸ್​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಎಚ್​. ಡಿ.ದೇವೇಗೌಡ, ಮಮತಾ ಬ್ಯಾನರ್ಜಿ, ಉದ್ಧವ್​ ಠಾಕ್ರೆ, ಎಂ.ಕೆ.ಸ್ಟಾಲಿನ್ ಸೇರಿ ಹಲವು ಪ್ರಮುಖ ನಾಯಕರ ಸಹಿ ಇದೆ.

ಮೇ 26ಕ್ಕೆ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ಪ್ರಾರಂಭಿಸಿ ಆರು ತಿಂಗಳು ಕಳೆಯುತ್ತದೆ. ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದು ಸರಿಯಾಗಿ ಏಳುವರ್ಷ ಕಳೆಯುತ್ತದೆ. ಹೀಗಾಗಿ ಮೇ 26ರಂದು ಕರಾಳ ದಿನ ಆಚರಿಸಲು ನಿರ್ಧಾರ ಮಾಡಿದ್ದಾರೆ. ಅಂದು ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿಯೂ ಹೇಳಿದ್ದಾರೆ. ಈ ಕರಾಳದಿನಕ್ಕೆ 12 ಪ್ರತಿಪಕ್ಷಗಳೂ ಬೆಂಬಲ ಸೂಚಿಸಿವೆ

ಹರ್ಯಾಣದ ಬಿಕೆಯು ಮುಖ್ಯಸ್ಥ ಗುರ್ನಮ್ ಸಿಂಗ್ ಚಾದುನಿ ಅವರ ಪ್ರಕಾರ, ಕರ್ನಾಲ್ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ರೈತರು ಭಾನುವಾರ ಸಿಂಗು ಗಡಿಗೆ ತೆರಳಿದ್ದಾರೆ. ರೈತರು ಮೇ 26 ಅನ್ನು “ಕಪ್ಪು ದಿನ” ಎಂದು ಆಚರಿಸಲಿದ್ದಾರೆ.

ಇದನ್ನೂ ಓದಿ: Farmers Protest ಹರ್ಯಾಣದ ಹಿಸಾರ್​ನಲ್ಲಿ ಇಂದು ರೈತರ ಪ್ರತಿಭಟನೆ, ಬಿಗಿ ಭದ್ರತೆ 

ಮೇ 26ರಂದು ಕರಾಳ ದಿನ ಆಚರಿಸಲಿರುವ ಸಂಯುಕ್ತ ಕಿಸಾನ್​ ಮೋರ್ಚಾ ರೈತ ಸಂಘಟನೆಗೆ 12 ಪ್ರತಿಪಕ್ಷಗಳ ಬೆಂಬಲ..

Published On - 12:18 pm, Mon, 24 May 21