ಥಾಣೆ: ಮಹಾರಾಷ್ಟ್ರದ ಥಾಣೆ ಬಳಿ ವಸತಿ ಕಟ್ಟಡವೊಂದರಲ್ಲಿರುವ ವಿದ್ಯುತ್ ಮೀಟರ್ ಬಾಕ್ಸ್ ಕೋಣೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 28 ವಿದ್ಯುತ್ ಮೀಟರ್ ಗಳು ಸುಟ್ಟು ಭಸ್ಮವಾಗಿವೆ. ಶನಿವಾರ ರಾತ್ರಿ 11.15ರ ಹೊತ್ತಿಗೆ ಥಾಣೆಯ ಕಲ್ವಾ ಪ್ರದೇಶದಲ್ಲಿರುವ ಎಸ್ಪಿ ಸೊಸೈಟಿಯ ನೆಲಮಹಡಿಯಲ್ಲಿರುವ ಪವರ್ ಮೀಟರ್ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಪ್ರಾದೇಶಿಕ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಸಂತೋಷ್ ಕದಂ ಹೇಳಿದ್ದಾರೆ. ಈ ಅವಘಡದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ
ಅಗ್ನಿಶಾಮಕ ದಳ, ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಒಂದು ಗಂಟೆಯಲ್ಲಿಯೇ ಬೆಂಕಿ ನಂದಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಬೆಂಕಿ ಅವಘಡ ಸಂಭವಿಸಿದ ಸ್ಥಳದ ಸುತ್ತುಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿರುವ 35 ಕುಟುಂಬಗಳು ಟೆರೆಸ್ಗೆ ಓಡಿಹೋಗಿದ್ದು, ಅಲ್ಲಿಂದ ಅವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ ಎಂದಿದ್ದಾರೆ ಕದಂ.
ಈ ಘಟನೆಯಲ್ಲಿ ಯಾರಿಗೂ ಸಾವು ನೋವು ಸಂಭವಿಸಿಲ್ಲ. 28 ವಿದ್ಯುತ್ ಮೀಟರ್ ಗಳು ಸುಟ್ಟು ಭಸ್ಮವಾಗಿದೆ. ಬೆಂಕಿಗೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಬೆಂಕಿ ಅನಾಹುತದಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲವು ಗಂಟೆಗಳ ಕಾಲ ವಿದ್ಯುತ್ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
ಗುರುವಾರ ಬೆಳಗ್ಗೆ ಥಾಣೆಯ ಅಂಬರ್ ನಾಥ್ ನಲ್ಲಿರುವ ಬಿಸ್ಕೆಟ್ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಬೆಳಗ್ಗೆ 5.45ಕ್ಕೆ ಈ ಅನಾಹುತ ಸಂಭವಿಸಿದ್ದು ಯಾವುದೇ ಸಾವು ನೋವು ವರದಿ ಆಗಿಲ್ಲ.ಅಂಬರ್ ನಾಥ್ ಮತ್ತು ಬದ್ಲಾಪುರ್ ನರದ ಸುತ್ತಮುತ್ತಲಿನ ಪ್ರದೇಶದಿಂದ ಎಂಟು ಅಗ್ನಿಶಾಮಕಗಳು ಬಂದು ಬೆಂಕಿ ನಂದಿಸಿದ್ದವು.
ಮಾರ್ಚ್ 9ರಂದು ಥಾಣೆ ಜಿಲ್ಲೆ ಅಸನ್ ಗಾಂವ್ ಬಳಿಯ ಪ್ಲಾಸ್ಟಿಕ್ ಗೂಡ್ಸ್ ನಿರ್ಮಾಣ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಮುಂಬೈ -ನಾಶಿಕ್ ರಾಷ್ಟ್ರೀಯ ಹೆದ್ದಾರಿ ಪಕ್ಕ ಶಹಾಪುರದ ವೆಹಲೋಲಿಯಲ್ಲಿರುವ ನಿರ್ಮಾಣ ಘಟಕದಲ್ಲಿ ಬೆಳಗ್ಗೆ 7.40ಕ್ಕೆ ಬೆಂಕ ಕಾಣಿಸಿಕೊಂಡಿತ್ತು ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಪ್ರಾದೇಶಿಕ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಸಂತೋಷ್ ಕದಂ ಹೇಳಿದ್ದರು. ಪ್ಲಾಸ್ಟಿಕ್ ವಸ್ತುಗಳಾದ ಕಾರಣ ಬೆಂಕಿ ಬೇಗನೆ ಸುತ್ತಲೂ ಹರಡಿತ್ತು ಎಂದು ಅವರು ಹೇಳಿದ್ದಾರೆ. 12ಕ್ಕಿಂತಲೂ ಹೆಚ್ಚು ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸಿದ್ದವು.
ಮಾರ್ಚ್ 10ರಂದು ಸಂಜೆ 6.45ಕ್ಕೆ ಉಲ್ಲಾಸನಗರ ತಾಜ್ಯ ರಾಶಿಗೆ ಬೆಂಕಿ ಬಿದ್ದಿತ್ತು. ಸುತ್ತಲಿನ ಪ್ರದೇಶಗಳಲ್ಲಿ ದಟ್ಟವಾದ ಹೊಗೆ ಆವರಿಸಿದ್ದರಿಂದ ಅಲ್ಲಿನ ನಿವಾಸಿಗಳು ಸಂಕಷ್ಟಕ್ಕೊಳಗಾಗಿದ್ದರು. ತಾಜ್ಯಗಳನ್ನು ಅಲ್ಲಿ ತಂದು ಸುರಿಯಬಾರದು ಎಂದು ಸ್ಥಳೀಯರು ಒತ್ತಾಯಿಸುತ್ತಲೇ ಇದ್ದಾರೆ. ಈ ಹಿಂದೆಯೂ ಇಲ್ಲಿ ಬೆಂಕಿ ಕಾಣಿಸಿಕೊಂಡಿದ್ದು , ಅಲ್ಲಿಂದ ಹೊರ ಸೂಸುವ ಹೊಗೆ ಉಸಿರಾಡಿ ಸ್ಥಳೀಯರು ಅಸ್ವಸ್ಥರಾದ ಘಟನೆ ವರದಿಯಾಗುತ್ತಲೇ ಇದೆ.
ಮಾನ್ಪಡೆಯ ಗೋದಾಮಿನಲ್ಲಿಯೂ ಸಂಭವಿಸಿತ್ತು ಅಗ್ನಿ ಅವಘಡ
ಫೆಬ್ರುವರಿ 19 ಶುಕ್ರವಾರ ಮುಂಜಾನೆ 2.20ಕ್ಕೆ ಥಾಣೆ ಮನ್ಪಡೆಯಲ್ಲಿರುವ ಗೋಜಾಮಿಗೆ ಬೆಂಕಿ ಬಿದ್ದಿತ್ತು. ರಾಜೇಂದ್ರ ಖಾನ್ವಿಲ್ಕರ್ ಅವರಿಗೆ ಸೇರಿದ ಗೋದಾಮು ಇದಾಗಿದ್ದು ಇಲ್ಲಿ ತಂಪು ಪಾನೀಯ ಮತ್ತು ಆಲೂಗಡ್ಡೆ ವೇಫರ್ಸ್ ಶೇಖರಣೆ ಮಾಡಲಾಗಿತ್ತು. ಈ ವಸ್ತುಗಳನ್ನು ತುಂಬಿದ್ದ ಸುಮಾರು 12 ವಾಹನಗಳು ಅಲ್ಲಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಸಾವು ನೋವು ವರದಿ ಆಗಿಲ್ಲ.
ಇದನ್ನೂ ಓದಿ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನೆ ಪುಂಡಾಟ.. 2ನೇ ದಿನವೂ ಕೆಎಸ್ಅರ್‌ಟಿಸಿ ಬಸ್ ಸಂಚಾರ ಸ್ಥಗಿತ
Published On - 12:13 pm, Sun, 14 March 21