ಕೊರೊನಾವೈರಸ್‌ನ (Coronavirus) ಹೊಸ XBB.1.16 ರೂಪಾಂತರವು ಕೋವಿಡ್ -19 (Covid 19) ಪ್ರಕರಣಗಳಲ್ಲಿ ಇತ್ತೀಚಿನ ಏರಿಕೆಗೆ ಕಾರಣವಾಗಬಹುದು. ಆದರೆ ಇದು ತೀವ್ರವಾದ ಅನಾರೋಗ್ಯ, ಆಸ್ಪತ್ರೆಗೆ ದಾಖಲು ಮತ್ತು ಸಾವುಗಳಿಗೆ ಕಾರಣವಾಗದಿರುವವರೆಗೆ ಚಿಂತಿಸಬೇಕಾಗಿಲ್ಲ ಎಂದು ಏಮ್ಸ್ ಮಾಜಿ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಬುಧವಾರ ಹೇಳಿದ್ದಾರೆ. ವೈರಸ್ ಕಾಲಾಂತರದಲ್ಲಿ ರೂಪಾಂತರಗೊಳ್ಳುತ್ತಿರುವುದರಿಂದ ಹೊಸ ರೂಪಾಂತರಗಳು ಬರುತ್ತಲೇ ಇರುತ್ತವೆ. ಹೀಗಿರುವಾಗ XBB 1.16 ಒಂದು ರೀತಿಯ ನ್ಯೂ ಕಿಡ್ ಆನ್ ದಿ ಬ್ಲಾಕ್ ಆಗಿದೆ ಎಂದು ಗುಲೇರಿಯಾ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಎಲ್ಲಿಯವರೆಗೆ ಅದು ತೀವ್ರ ಅನಾರೋಗ್ಯ, ಆಸ್ಪತ್ರೆಗೆ ದಾಖಲು ಮತ್ತು ಸಾವುಗಳಿಗೆ ಕಾರಣವಾಗುವುದಿಲ್ಲವೋ ಅಲ್ಲಿಯವರೆಗೆ ಆತಂಕ ಬೇಡ. ಏಕೆಂದರೆ ಸೋಂಕಿತರು ಸೌಮ್ಯವಾದ ಅನಾರೋಗ್ಯವನ್ನು ಹೊಂದಿದ್ದರೆ ಜನಸಂಖ್ಯೆಗೆ ಸ್ವಲ್ಪ ಮಟ್ಟಿಗೆ ಪ್ರತಿರೋಧ ನೀಡಲು ಸಹಾಯ ಮಾಡುತ್ತದೆ ಎಂದು ಎಂದು ರಾಷ್ಟ್ರೀಯ ಕೋವಿಡ್ ಕಾರ್ಯದ ಭಾಗವಾಗಿದ್ದ ಖ್ಯಾತ ಶ್ವಾಸಕೋಶಶಾಸ್ತ್ರಜ್ಞ ಗುಲೇರಿಯಾ ಹೇಳಿದ್ದಾರೆ.
ಭಾರತದಲ್ಲಿ ಕೋವಿಡ್ ಪ್ರಕರಣ ಏರಿಕೆಯಾಗಿದೆ.ಎಲ್ಲಾ ವೈರಸ್-ಪ್ರೇರಿತ ನಿರ್ಬಂಧಗಳನ್ನು ತೆಗೆದುಹಾಕಿರುವ ದೇಶದಲ್ಲಿ ಸಾಂಕ್ರಾಮಿಕದ ಮತ್ತೊಂದು ಅಲೆಯ ಭಯ ಮನೆ ಮಾಡಿದೆ. ಭಾರತದಲ್ಲಿ ಮಂಗಳವಾರ 1,134 ಹೊಸ ಹೊಸ ಸೋಂಕುಗಳು ದಾಖಲಾಗಿವೆ, ಇದು 138 ದಿನಗಳಲ್ಲಿ ಅತಿ ಹೆಚ್ಚು. ಸಕ್ರಿಯ ಪ್ರಕರಣಗಳು 7,026 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.
XBB.1.16 ರೂಪಾಂತರವು ಮುಂದಿನ ಕೆಲವು ದಿನಗಳಲ್ಲಿ ಕೋವಿಡ್ ತರಂಗವನ್ನು ಉಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆಯೇ ಎಂದು ಕೇಳಿದಾಗ, “ನೀವು ಪ್ರಕರಣಗಳ ಸಂಖ್ಯೆಯಲ್ಲಿ ಉಲ್ಬಣವನ್ನು ನೋಡಬಹುದು” ಆದರೆ ನಂತರ ಅದು ಕಡಿಮೆಯಾಗುತ್ತಾ ಬರಬಹುದು ಎಂದಿದ್ದಾರೆ.
ಜನರಲ್ಲಿ ಈಗ ಜ್ವರ ತರಹದ ರೋಗಲಕ್ಷಣಗಳು ಕಂಡು ಬಂದರೂ ಹೆಚ್ಚಿನ ಜನರು ಪರೀಕ್ಷಿಸಿಕೊಳ್ಳುವುದಿಲ್ಲ. ಕೆಲವರು ಕ್ಷಿಪ್ರ ಆಂಟಿಜನ್ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಹಾಗಾಗಿ ಅವರು ಪಾಸಿಟಿವ್ ಆಗಿದ್ದರೂ ಅದು ವರದಿಯಾಗುವುದಿಲ್ಲ. ಆದ್ದರಿಂದ ನಾವು ನಿಜವಾಗಿ ವರದಿ ಮಾಡುತ್ತಿರುವ ಸಂಖ್ಯೆಯು ಸಮುದಾಯದಲ್ಲಿನ ನಿಜವಾದ ಸಂಖ್ಯೆಗಿಂತ ಕಡಿಮೆಯಿರಬಹುದು ಎಂದು ಅವರು ಹೇಳಿದ್ದಾರೆ.
ಆದ್ದರಿಂದ ನಾವು ಉಲ್ಬಣವನ್ನು ಕಂಡರೂ ಸಹ, ಚಿಂತಿಸಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ.
ದೇಶದ ಕೋವಿಡ್ ಮತ್ತು ಇನ್ಫ್ಲುಯೆನ್ಸ ಪರಿಸ್ಥಿತಿಯನ್ನು ನಿರ್ಣಯಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದು, ಸಾರ್ವಜನಿಕ ಆರೋಗ್ಯದ ಸನ್ನದ್ಧತೆಯ ಬಗ್ಗೆಯೂ ಅವಲೋಕನ ನಡೆಸಿದ್ದಾರೆ. ರೋಗಿಗಳು, ಆರೋಗ್ಯ ವೃತ್ತಿಪರರು ಮತ್ತು ಆರೋಗ್ಯ ಕಾರ್ಯಕರ್ತರು ಆಸ್ಪತ್ರೆಯ ಆವರಣದಲ್ಲಿ ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ಸೂಕ್ತ ನಡವಳಿಕೆ ಅನುಸರಿಸುವಂತೆ ಪ್ರಧಾನಿ ಮೋದಿ ಹೇಳಿದ್ದಾರೆ.
ಆರೋಗ್ಯ ಸಂಬಂಧಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ