ಹಿರಿಯ ಕಾಂಗ್ರೆಸ್ ಧುರೀಣ, ಆಸ್ಸಾಂ ಮಾಜಿ ಸಿಎಂ ಗೊಗೊಯಿ ಇನ್ನಿಲ್ಲ

| Updated By: Team Veegam

Updated on: Nov 24, 2020 | 1:49 AM

ಕಳೆದ ಕೆಲವು ವಾರಗಳಿಂದ ಕೊವಿಡ್-19 ಸೋಂಕಿನೊಂದಿಗೆ ಆಸ್ಪತ್ರೆಯೊಂದರಲ್ಲಿ ಹೋರಾಡುತ್ತಿದ್ದ ಅಸ್ಸಾಮಿನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ (86), ಬಹು ಅಂಗಾಂಗ ವೈಫಲ್ಯದಿಂಧ ಸೋಮವಾರ ನಿಧನ ಹೊಂದಿದರೆಂದು ರಾಜ್ಯದ ಆರೋಗ್ಯ ಸಚಿವ ಹಿಮಂತಾ ಬಿಸ್ವಾ ಸರ್ಮ ಹೇಳಿದರು. ಅವರ ಸಾವಿನ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಗೊಗೊಯಿ, ಬಹಳ ಜನಪ್ರಿಯ ಮತ್ತು ನುರಿತ ಆಡಳಿತಗಾರರಾಗಿದ್ದರು ಎಂದು ಹೇಳಿದ್ದಾರೆ.. ‘‘ಶ್ರೀ ತರುಣ್ ಗೊಗೊಯಿ ಅವರೊಬ್ಬ ಜನಪ್ರಿಯ ನಾಯಕ ಮತ್ತು ಅಸ್ಸಾಂ ಹಾಗೂ ಕೇಂದ್ರದಲ್ಲಿ ಸೇವೆ […]

ಹಿರಿಯ ಕಾಂಗ್ರೆಸ್ ಧುರೀಣ, ಆಸ್ಸಾಂ ಮಾಜಿ ಸಿಎಂ ಗೊಗೊಯಿ ಇನ್ನಿಲ್ಲ
Follow us on

ಕಳೆದ ಕೆಲವು ವಾರಗಳಿಂದ ಕೊವಿಡ್-19 ಸೋಂಕಿನೊಂದಿಗೆ ಆಸ್ಪತ್ರೆಯೊಂದರಲ್ಲಿ ಹೋರಾಡುತ್ತಿದ್ದ ಅಸ್ಸಾಮಿನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ (86), ಬಹು ಅಂಗಾಂಗ ವೈಫಲ್ಯದಿಂಧ ಸೋಮವಾರ ನಿಧನ ಹೊಂದಿದರೆಂದು ರಾಜ್ಯದ ಆರೋಗ್ಯ ಸಚಿವ ಹಿಮಂತಾ ಬಿಸ್ವಾ ಸರ್ಮ ಹೇಳಿದರು. ಅವರ ಸಾವಿನ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಗೊಗೊಯಿ, ಬಹಳ ಜನಪ್ರಿಯ ಮತ್ತು ನುರಿತ ಆಡಳಿತಗಾರರಾಗಿದ್ದರು ಎಂದು ಹೇಳಿದ್ದಾರೆ..

‘‘ಶ್ರೀ ತರುಣ್ ಗೊಗೊಯಿ ಅವರೊಬ್ಬ ಜನಪ್ರಿಯ ನಾಯಕ ಮತ್ತು ಅಸ್ಸಾಂ ಹಾಗೂ ಕೇಂದ್ರದಲ್ಲಿ ಸೇವೆ ಸಲ್ಲಿಸಿದ ಅಪಾರ ಅನುಭವವುಳ್ಳ ಆಡಳಿತಜ್ಞರಾಗಿದ್ದರು. ಅವರ ನಿಧನದ ವಾರ್ತೆ ಕೇಳಿ ಯಾತನೆಯಾಗಿದೆ. ದುಖಃದ ಈ ಸಂದರ್ಭದಲ್ಲಿ ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಸಂತಾಪ ಸೂಚಿಸುತ್ತೇನೆ, ಓಂ ಶಾಂತಿ,’’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಅಸ್ಸಾಮಿನ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್, ಗೊಗೊಯಿ ನಿಧನರಾದ ಗುವಾಹಾಟಿಯಲ್ಲಿರುವ ಜಿಎಮ್​ಸಿಹೆಚ್ ಆಸ್ಪತ್ರೆಗೆ ಬೇಟಿ ನೀಡಿ ದಿವಂಗತ ನಾಯಕನಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದರು.

ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರಲ್ಲೊಬ್ಬರಾಗಿದ್ದ ಗೊಗೊಯಿ ಅವರು ಕೊವಿಡ್-19 ಸೋಂಕು ತಗುಲಿಸಿಕೊಂಡಿದ್ದು ಖಚಿತಪಟ್ಟ ನಂತರ ಆಗಸ್ಟ್ 25 ರಂದು ಜಿಎಮ್​ಸಿಹೆಚ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ತಿಂಗಳ ನಂತರ ಅವರು ಸೋಂಕಿನಿಂದ ಚೇತರಿಸಿಕೊಂಡಿದ್ದರಿಂದ ಅಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.

ಆದರೆ, ಸೋಂಕಿಗೆ ಸಂಬಂಧಿಸಿದ ಸಮಸ್ಯೆಗಳು ಪುನಃ ಉಲ್ಬಣಿಸಿದ್ದರಿಂದ ನವೆಂಬರ್ 2ರಂದು ಅವರನ್ನು ಮತ್ತೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಶನಿವಾರದಂದು ಅವರ ಆರೋಗ್ಯ ಸ್ಥಿತಿ ಪೂರ್ತಿ ಹದಗೆಟ್ಟಿದ್ದರಿಂದ ವೆಂಟಿಲೇಟರ್ ಮೇಲೆ ಇರಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ರವಿವಾರದಂದು ಅವರ ಆರೋಗ್ಯ ಚಿಂತಾಜನಕ ಸ್ಥಿತಿ ತಲುಪಿತ್ತೆಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮೂಲಕ ಗೊಗೊಯಿ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

‘‘ಶ್ರೀ ತರುಣ್ ಗೊಗೊಯಿ ಅವರೊಬ್ಬ ಅಪ್ಪಟ ಕಾಂಗ್ರೆಸ್ ನಾಯಕರಾಗಿದ್ದರು. ಅಸ್ಸಾಮಿನ ಎಲ್ಲಾ ಸಮುದಾಯಗಳನ್ನು ಒಂದುಗೂಡಿಸಲು ತಮ್ಮ ಬದುಕನ್ನೇ ಸಮರ್ಪಿಸಿದರು. ವೈಯಕ್ತಿಕವಾಗಿ ನನಗವರು ಶ್ರೇಷ್ಠ ಮಾರ್ಗದರ್ಶಕ ಮತ್ತು ಗುರುವಾಗಿದ್ದರು. ಅವರೆಡೆಗಿನ ನನ್ನ ಗೌರವ ಮತ್ತು ಪ್ರೀತಿ ಬಹಳ ಆಳವಾಗಿದ್ದವು, ಅವರನ್ನು ಮಿಸ್ ಮಾಡಿಕೊಳ್ಳಲಿದ್ದೇನೆ. ಗೌರವ್ ಮತ್ತು ಅವರ ಕುಟುಂಬಕ್ಕೆ ಸಂತಾಪಗಳನ್ನು ಸೂಚಿಸುತ್ತೇನೆ,’’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

Published On - 10:27 pm, Mon, 23 November 20