ತಮಿಳುನಾಡಿನ (Tamil Nadu) ಕರೂರ್ ಜಿಲ್ಲೆಯ ಮಾಯನೂರಿನ ಕಾವೇರಿ ನದಿಯಲ್ಲಿ(Cauvery river)ಬುಧವಾರ ಸರ್ಕಾರಿ ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಮುಳುಗಿ ಸಾವಿಗೀಡಾಗಿದ್ದಾರೆ. ಕರೂರ್ (Karur) ಜಿಲ್ಲಾ ಪೋಲೀಸರ ಪ್ರಕಾರ, ಪುದುಕೊಟ್ಟೈ ಜಿಲ್ಲೆಯ ವಿರಲಿಮಲೈ ಫಿಲಿಪ್ಪೂರ್ ಸರ್ಕಾರಿ ಮಾಧ್ಯಮಿಕ ಶಾಲೆಯ 15 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಮಂಗಳವಾರ ತಿರುಚ್ಚಿ ಜಿಲ್ಲೆಯ ಥಾನಿಯಂನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಫುಟ್ಬಾಲ್ ಪಂದ್ಯದಲ್ಲಿ ಭಾಗವಹಿಸಲು ಹೋಗಿದ್ದರು. ಬುಧವಾರ ಕ್ರೀಡಾಕೂಟ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಹಿಂತಿರುಗುವ ಮಾರ್ಗದಲ್ಲಿ ಮಾಯನೂರು ಅಣೆಕಟ್ಟು ನೋಡಲು ಅವರು ತೆರಳಿದ್ದರು.
ನದಿ ದಡದ ಬಳಿ ನಿಂತಿದ್ದಾಗ ಒಬ್ಬ ವಿದ್ಯಾರ್ಥಿನಿ ನದಿಗೆ ಹಾರಿದ್ದು ಸುಳಿಗೆ ಸಿಲುಕಿದ್ದಾಳೆ. ಈ ವೇಳೆ ನದಿಯಲ್ಲಿ ನೀರಿನ ಹರಿವು ಜೋರಾಗಿತ್ತು. ತಮ್ಮ ಸ್ನೇಹಿತೆ ಹೆಣಗಾಡುತ್ತಿರುವುದನ್ನು ಕಂಡು ಇನ್ನೂ ಮೂವರು ವಿದ್ಯಾರ್ಥಿಗಳು ನದಿಗೆ ಹಾರಿದ್ದು ಅವರೂ ಸುಳಿಗೆ ಸಿಲುಕಿ ನಾಲ್ವರೂ ನದಿಯಲ್ಲಿ ಮುಳುಗಿದ್ದಾರೆ.
ಅಗ್ನಿಶಾಮಕ ದಳದ 20 ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಮೃತದೇಹಗಳನ್ನು ಹೊರತೆಗೆಯಲು ಸುಮಾರು ಎರಡು ಗಂಟೆಗಳ ಕಾಲ ಶ್ರಮಿಸಿದ್ದಾರೆ. ನದಿಯ ಪ್ರವಾಹ ಮತ್ತು ಆಳದ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಫಲಕವಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:2008ರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಪುತ್ರ ಅಬ್ದುಲ್ಲಾ ಅಜಂ ಖಾನ್ ಶಾಸಕ ಸ್ಥಾನದಿಂದ ಅನರ್ಹ
ಮೃತರನ್ನು ತಮಿಳರಸಿ (7ನೇ ತರಗತಿ), ಇನಿಯಾ (6ನೇ ತರಗತಿ), ಲಾವಣ್ಯ (6ನೇ ತರಗತಿ) ಮತ್ತು ಸೋಫಿಯಾ (8ನೇ ತರಗತಿ) ಎಂದು ಗುರುತಿಸಲಾಗಿದೆ.
ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕರೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿ ಸಾಂತ್ವನ ಹೇಳಿದರು.