ಮುಂಬೈ: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಅವಳಿ ಸ್ಫೋಟವುಂಟಾಗಿ ನಾಲ್ವರು ಮೃತಪಟ್ಟಿದ್ದು, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಮುಂಜಾನೆ 9.15ರ ಹೊತ್ತಿಗೆ ದುರಂತ ನಡೆದಿದ್ದು, ಕಾರ್ಖಾನೆಯಲ್ಲಿ ಸಿಲುಕಿದ್ದ 40 ಜನರನ್ನು ಸುರಕ್ಷಿತವಾಗಿ ಹೊರಕರೆತರಲಾಗಿದೆ.
ಲೋಟೆ-ಪರಶುರಾಮ್ ಎಂಐಡಿಸಿ ಸಂಕೀರ್ಣದಲ್ಲಿರುವ ಘರ್ದಾ ಕೆಮಿಕಲ್ ಲಿಮಿಟೆಡ್ನಲ್ಲಿ ಎರಡು ಬಾರಿ ಸ್ಫೋಟವಾಗಿದೆ. ಸ್ಥಳಕ್ಕೆ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಬೆಂಕಿಯನ್ನು ನಂದಿಸಿದ್ದಾರೆ. ಒಳಗೆ ಸಿಲುಕಿದ್ದ ಉದ್ಯೋಗಿಗಳ ರಕ್ಷಣೆಯನ್ನೂ ಮಾಡಿದ್ದಾರೆ. ಆದರೂ ನಾಲ್ವರು ಮೃತಪಟ್ಟಿದ್ದು, ಇನ್ನೊಬ್ಬಾತ ಗಂಭೀರವಾಗಿ ಗಾಯಗೊಂಡಿದ್ದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಕೆಲಸಗಾರನನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತದೇಹಗಳನ್ನು ಪೋಸ್ಟ್ಮಾರ್ಟಮ್ಗಾಗಿ ಕಳಿಸಲಾಗಿದೆ. ಸ್ಫೋಟದ ನಂತರ ಭಯಂಕರ ಬೆಂಕಿ ಕಾಣಿಸಿಕೊಂಡಿತ್ತು. ಅದನ್ನು ನಂದಿಸಲಾಗಿದೆ. ಸ್ಥಳದಲ್ಲಿ ಇನ್ನೂ ಕಾರ್ಯಾಚರಣೆ ನಡೆಯುತ್ತಿದೆ ಎಂದೂ ಮಾಹಿತಿ ನೀಡಿದ್ದಾರೆ.
ಇಂಥ ಸ್ಫೋಟಗಳು, ವಿಷಾನಿಲ ಸೋರಿಕೆ ದುರಂತಗಳು ಆಗಾಗ ಮರುಕಳಿಸುತ್ತಿರುತ್ತವೆ. ಕಳೆದ ವರ್ಷ ಮೇ ತಿಂಗಳಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂದಲ್ಲಿರುವ ಎಲ್ಜಿ ಪಾಲಿಮರ್ಸ್ನಲ್ಲಿ ವಿಷ ಅನಿಲ ಸೋರಿಕೆಯಾಗಿ ಸುಮಾರು 11 ಮಂದಿ ಮೃತಪಟ್ಟಿದ್ದರು. ನೂರಾರು ಮಂದಿಯನ್ನು ಆಸ್ಪತ್ರೆಗೆ ದಾಖಲುಮಾಡಲಾಗಿತ್ತು. ಅಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಮೃತರ ಕುಟುಂಬಗಳಿಗೆ ತಲಾ 1 ಕೋಟಿ ರೂ.ಪರಿಹಾರ ನೀಡಿದ್ದರು.