Free FASTag: ಮಾರ್ಚ್​ 1ರ ತನಕ ಉಚಿತವಾಗಿ ಸಿಗಲಿದೆ ಫಾಸ್​ಟ್ಯಾಗ್, ಈಗಾಗಲೇ ಫಾಸ್​ಟ್ಯಾಗ್​ ಕೊಂಡವರು ಖಾತೆ ಪರೀಕ್ಷಿಸಲು ಹೀಗೆ ಮಾಡಿ

| Updated By: ಸಾಧು ಶ್ರೀನಾಥ್​

Updated on: Feb 20, 2021 | 11:36 AM

FASTag: ಒಂದುವೇಳೆ ಜನರ ಫಾಸ್​ಟ್ಯಾಗ್ ಖಾತೆಯಲ್ಲಿ ಹಣವಿದ್ದು, ಟೋಲ್​ಪ್ಲಾಜಾಗಳ ತಾಂತ್ರಿಕ ದೋಷದ ಕಾರಣ ಸ್ಕ್ಯಾನ್​ ಆಗದೇ ಇದ್ದರೆ ಅಂತಹ ಸಂದರ್ಭದಲ್ಲಿ ವಾಹನ ಸವಾರರು ಯಾವುದೇ ಹಣ ನೀಡದೇ ಮುಂದೆ ಹೋಗಲು ಅವಕಾಶ ನೀಡಲಾಗಿದೆ.

Free FASTag: ಮಾರ್ಚ್​ 1ರ ತನಕ ಉಚಿತವಾಗಿ ಸಿಗಲಿದೆ ಫಾಸ್​ಟ್ಯಾಗ್, ಈಗಾಗಲೇ ಫಾಸ್​ಟ್ಯಾಗ್​ ಕೊಂಡವರು ಖಾತೆ ಪರೀಕ್ಷಿಸಲು ಹೀಗೆ ಮಾಡಿ
ಸಂಗ್ರಹ ಚಿತ್ರ
Follow us on

ಈಗಾಗಲೇ ದೇಶಾದ್ಯಂತ ಫಾಸ್​ಟ್ಯಾಗ್ (FASTag) ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ. ಟೋಲ್​ ಗೇಟ್​ಗಳಲ್ಲಿ ವಾಹನ ದಟ್ಟಣೆ ತಗ್ಗಿಸಲು ಮತ್ತು ಡಿಜಿಟಲ್​ ಇಂಡಿಯಾ ಯೋಜನೆಯನ್ನು ಪ್ರೇರೇಪಿಸಲು ಫಾಸ್​ಟ್ಯಾಗ್​ಗೆ ಹೆಚ್ಚು ಒತ್ತು ನೀಡಲಾಗಿದ್ದು, ಸದ್ಯ ಮಾರ್ಚ್​ 1ರ ತನಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highways Authority of India) ಟೋಲ್​ ಪ್ಲಾಜಾಗಳಲ್ಲಿ (Toll Plaza) ಉಚಿತವಾಗಿ ಫಾಸ್​ಟ್ಯಾಗ್ ವಿತರಿಸುವ ಕಾರ್ಯಕ್ಕೂ ಮುಂದಾಗಿದೆ. ಪ್ರತಿನಿತ್ಯ 60 ಲಕ್ಷಕ್ಕೂ ಹೆಚ್ಚು ವಾಹನಗಳು ಟೋಲ್​ಗೇಟ್​ನಲ್ಲಿ ಫಾಸ್​ಟ್ಯಾಗ್ ಮೂಲಕ ಟೋಲ್​ ಪಾವತಿಸಿದ್ದು, ಕಳೆದ ಬುಧವಾರ ಒಂದೇ ದಿನ ಸುಮಾರು ₹95ಕೋಟಿಯಷ್ಟು ಹಣ ಸಂಗ್ರಹವಾಗಿದೆ ಎಂದು NHAI ತಿಳಿಸಿದೆ. ಅದೇ ರೀತಿ ಇನ್ನೂ ಫಾಸ್​ಟ್ಯಾಗ್ ಅಳವಡಿಸಿಕೊಳ್ಳದೇ ಇದ್ದರೇ ಒಂದಕ್ಕೆ ಎರಡು ಪಟ್ಟು ಹಣ ತೆರಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದೆ.

ಒಂದುವೇಳೆ ಜನರ ಫಾಸ್​ಟ್ಯಾಗ್ ಖಾತೆಯಲ್ಲಿ ಹಣವಿದ್ದು, ಟೋಲ್​ಪ್ಲಾಜಾಗಳ ತಾಂತ್ರಿಕ ದೋಷದ ಕಾರಣ ಸ್ಕ್ಯಾನ್​ ಆಗದೇ ಇದ್ದರೆ ಅಂತಹ ಸಂದರ್ಭದಲ್ಲಿ ವಾಹನ ಸವಾರರು ಯಾವುದೇ ಹಣ ನೀಡದೇ ಮುಂದೆ ಹೋಗಲು ಅವಕಾಶ ನೀಡಲಾಗಿದೆ. ಪ್ರಸ್ತುತ 10 ರಲ್ಲಿ ಸುಮಾರು 9 ಜನರು ಫಾಸ್​ಟ್ಯಾಗ್​ ಬಳಕೆ ಆರಂಭಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ 2.5ಲಕ್ಷ ಫಾಸ್​ಟ್ಯಾಗ್ ಮಾರಾಟವಾಗಿದ್ದು, ಈಗ ಅಳವಡಿಸಿಕೊಳ್ಳುತ್ತಿರುವವರಿಗಾಗಿ ದೇಶದ ಒಟ್ಟು 770 ಟೋಲ್​ ಪ್ಲಾಜಾಗಳಲ್ಲಿ ಮಾರ್ಚ್​ 1ರ ತನಕ ಫಾಸ್​ಟ್ಯಾಗ್ ವಿತರಣೆ ನಡಯಲಿದೆ ಎಂದು NHAI ಪ್ರಕಟಣೆ ತಿಳಿಸಿದೆ.

ಫಾಸ್​ಟ್ಯಾಗ್ ಬಳಕೆದಾರರು ತಮ್ಮ ಖಾತೆಯಲ್ಲಿ ಹಣವಿದೆಯೇ ಇಲ್ಲವೇ ಎಂದು ಪರಿಶೀಲಿಸಲು NHAI ಬಿಡುಗಡೆಗೊಳಿಸಿರುವ ‘My FASTag App’ ಬಳಸಿಕೊಳ್ಳಬಹುದಾಗಿದೆ. ಇದರಲ್ಲಿ ವಾಹನದ ಸಂಖ್ಯೆಯನ್ನು ನಮೂದಿಸಿದರೆ ಹಸಿರು, ಕಿತ್ತಳೆ ಮತ್ತು ಕೆಂಪು ಈ ಮೂರು ವಿಧದ ಬಣ್ಣ ಕಾಣಿಸಿಕೊಳ್ಳಲಿದ್ದು ಇದರ ಮೂಲಕ ಖಾತೆಯ ಸ್ಥಿತಿಗತಿಯನ್ನು ಅರಿಯಬಹುದಾಗಿದೆ. ಒಂದು ವೇಳೆ ಹಸರಿರು ಬಣ್ಣವಿದ್ದರೆ ಖಾತೆಯಲ್ಲಿ ಹಣವಿದೆ ಎಂದೂ, ಕಿತ್ತಳೆ ಬಣ್ಣವಿದ್ದರೆ ತಕ್ಷಣ ರೀಚಾರ್ಜ್​ ಮಾಡಿಸಬೇಕೆಂದೂ ಮತ್ತು ಕೆಂಪು ಬಣ್ಣವಿದ್ದರೆ ಖಾತೆ ಬರಿದಾಗಿದೆಯೆಂದೂ ಆ್ಯಪ್​ ಸೂಚಿಸುತ್ತದೆ.

ಫಾಸ್​ಟ್ಯಾಗ್ ಖಾತೆಯಲ್ಲಿ ಹಣ ಖಾಲಿಯಾಗಿದ್ದರೆ ಬಳಕೆದಾರರು ಆ್ಯಪ್​ ಮೂಲಕ ತಕ್ಷಣವೇ ರೀಚಾರ್ಜ್​ ಮಾಡಿಕೊಳ್ಳಬಹುದು ಅಥವಾ ಟೋಲ್​ಪ್ಲಾಜಾಗಳಲ್ಲಿ ಹಣ ಪಾವತಿಸಿ ರೀಚಾರ್ಜ್​ ಮಾಡಿಸಿಕೊಳ್ಳಲೂಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: FASTag ಡೆಡ್​ಲೈನ್​ಗೆ ಕೆಲವೇ ದಿನ ಬಾಕಿ: ಹೊಸ FASTag ಖರೀದಿಸೋದು ಹೇಗೆ? ಇಲ್ಲಿದೆ ಉತ್ತರ