Pegasus Spyware: ನ್ಯೂಯಾರ್ಕ್​ ಟೈಮ್ಸ್ ವರದಿ ಬೆನ್ನಲ್ಲೇ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ವಕೀಲ; ಎಫ್​ಐಆರ್​ ದಾಖಲಿಸಲು ಆಗ್ರಹ

| Updated By: Lakshmi Hegde

Updated on: Jan 30, 2022 | 3:11 PM

ನಿನ್ನೆ ನ್ಯೂಯಾರ್ಕ್​ ಟೈಮ್ಸ್ ವರದಿಯೊಂದನ್ನು ಮಾಡಿದೆ. The Battle for the World’s Most Powerful Cyberweapon ಎಂಬ ಹೆಡ್​​ಲೈನ್​​ನಲ್ಲಿ ವರದಿ ಪ್ರಕಟಿಸಿದೆ. 2017ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಸ್ರೇಲ್​ಗೆ ಭೇಟಿ ಕೊಟ್ಟಿದ್ದ ವೇಳೆ ನಡೆದ ಒಪ್ಪಂದದ ಭಾಗವಾಗಿ ಪೆಗಾಸಸ್​ ಸ್ಪೈವೇರ್​ ಖರೀದಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

Pegasus Spyware: ನ್ಯೂಯಾರ್ಕ್​ ಟೈಮ್ಸ್ ವರದಿ ಬೆನ್ನಲ್ಲೇ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ವಕೀಲ; ಎಫ್​ಐಆರ್​ ದಾಖಲಿಸಲು ಆಗ್ರಹ
ಸುಪ್ರೀಂಕೋರ್ಟ್​
Follow us on

2017ರಲ್ಲಿ ಕೇಂದ್ರ ಸರ್ಕಾರ ಇಸ್ರೇಲ್​​ನೊಂದಿಗೆ ಮಾಡಿಕೊಂಡ ಒಂದು ಆಧುನಿಕ ಶಸ್ತ್ರಾಸ್ತ್ರಗಳ ಒಪ್ಪಂದದ ಭಾಗವಾಗಿ ಪೆಗಾಸಸ್​ ಸ್ಪೈವೇರ್ (Pegasus spyware)​​ನ್ನು ಖರೀದಿ ಮಾಡಿತ್ತು ಎಂದು ನಿನ್ನೆ ನ್ಯೂಯಾರ್ಕ್​ ಟೈಮ್ಸ್​ ವರದಿ ಮಾಡಿದ ಬೆನ್ನಲ್ಲೇ, ಹಿರಿಯ ವಕೀಲರೊಬ್ಬರು ಸುಪ್ರೀಂಕೋರ್ಟ್​ಗೆ ಹೊಸದಾಗಿ ಅರ್ಜಿ ಸಲ್ಲಿಸಿ, ಈ ವಿಚಾರವನ್ನು ಸುಪ್ರೀಂಕೋರ್ಟ್ ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಹೇಳಿದ್ದಾರೆ. ಅಂದಹಾಗೇ, ಈಗ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಹಿರಿಯ ವಕೀಲರ ಹೆಸರು ಎಂ.ಎಲ್​. ಶರ್ಮಾ ಎಂದಾಗಿದ್ದು, ಪೆಗಾಸಸ್​​ ಸ್ಪೈವೇರ್ ಖರೀದಿಯಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳು, ಆಡಳಿತಗಳ ವಿರುದ್ಧ ಕೂಡಲೇ ಎಫ್​ಐಆರ್​ ದಾಖಲು ಮಾಡಬೇಕು. ತನಿಖೆಯೂ ಪ್ರಾರಂಭವಾಗಬೇಕು ಎಂದೂ ಆಗ್ರಹಿಸಿದ್ದಾರೆ. 

ಈ ಪೆಗಾಸಸ್​ ಸ್ಪೈವೇರ್​​  2021ರಲ್ಲಿ ಭರ್ಜರಿ ಸುದ್ದಿ ಮಾಡಿತ್ತು. ಭಾರತದಲ್ಲಿ ಇಸ್ರೇಲಿ ಮೂಲದ ಪೆಗಾಸಸ್​ ಬಳಸಿ, ರಾಜಕಾರಣಿಗಳು, ಪತ್ರಕರ್ತರು, ಮತ್ತಿತರ ಗಣ್ಯರೆಲ್ಲ ಸೇರಿ 300ಕ್ಕೂ ಹೆಚ್ಚು ಜನರ ಫೋನ್​ ಟ್ಯಾಪ್​ ಮಾಡಲಾಗಿದೆ ಎಂದು ದಿ ವೈರ್​ ಪ್ರಕಟಿಸಿತ್ತು. ಹಾಗೇ ಬಹುಮುಖ್ಯವಾಗಿ ಯಾರೆಲ್ಲರ ಫೋನ್​ ಟ್ಯಾಪ್​ ಆಗಿದೆ ಎಂಬ ಹೆಸರುಗಳನ್ನೂ ಬಹಿರಂಗಪಡಿಸಲಾಗಿತ್ತು. ಅದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ತಂತ್ರಜ್ಞ ಪ್ರಶಾಂತ್​ ಕಿಶೋರ್​ ಸೇರಿ ಅನೇಕರ ಹೆಸರುಗಳು ಇದ್ದವು.  ಪೆಗಾಸಸ್​ ಸ್ನೂಪಿಂಗ್​ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್​​ನಿಂದ ಸಮಿತಿ ರಚಿಸಲಾಗಿದ್ದು, ತನಿಖೆ ನಡೆಯುತ್ತಲೂ ಇದೆ.

ಇದೆಲ್ಲದರ ಮಧ್ಯೆ ನಿನ್ನೆ ನ್ಯೂಯಾರ್ಕ್​ ಟೈಮ್ಸ್ ವರದಿಯೊಂದನ್ನು ಮಾಡಿದೆ. The Battle for the World’s Most Powerful Cyberweapon ಎಂಬ ಹೆಡ್​​ಲೈನ್​​ನಲ್ಲಿ ವರದಿ ಪ್ರಕಟಿಸಿದೆ. 2017ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಸ್ರೇಲ್​ಗೆ ಭೇಟಿ ಕೊಟ್ಟಿದ್ದರು. ಇಸ್ರೇಲ್​ಗೆ ಭೇಟಿ ನೀಡಿದ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಎಂಬ ಹೆಗ್ಗಳಿಕೆಯೊಂದಿಗೆ ಇತಿಹಾಸ ಸೃಷ್ಟಿಸಿದರು. ಇದೇ ಭೇಟಿ ವೇಳೆ ಭಾರತ -ಇಸ್ರೇಲ್​ ನಡುವೆ 2 ಬಿಲಿಯನ್ ಯುಎಸ್​​ ಡಾಲರ್​ ಮೊತ್ತದ ರಕ್ಷಣಾ ಒಪ್ಪಂದ ನಡೆಯಿತು. ಅದಕ್ಕೆ ಎರಡೂ ದೇಶಗಳು ಸಹಿ ಹಾಕಿದವು. ಇದೇ ವೇಳೆ ಪೆಗಾಸಸ್​ ಸ್ಪೈವೇರ್​​ನ್ನು ಕೂಡ ಭಾರತದ ಕೇಂದ್ರ ಸರ್ಕಾರ ಇಸ್ರೇಲ್​​ನಿಂದ ಖರೀದಿ ಮಾಡಿದೆ. ಈ ಸ್ಪೈವೇರ್​​ನ್ನು ಎನ್ಎಸ್​ಒ ಎಂಬ ಇಸ್ರೇಲ್​ ಸಂಸ್ಥೆ ಉತ್ಪಾದಿಸಿದ್ದು, ಇದು ಮಿಲಿಟರಿ ದರ್ಜೆಯ ಸಾಫ್ಟ್​ವೇರ್​ ಆಗಿದೆ ಎಂದು ವಿವರಿಸಿದೆ.

ಪೆಗಾಸಸ್​ ಬಗ್ಗೆ ಹೀಗೊಂದು ವರದಿ ಹೊರಬೀಳುತ್ತಿದ್ದಂತೆ ಪ್ರತಿಪಕ್ಷಗಳೂ ಕೂಡ ಮತ್ತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿಕಾರುತ್ತಿವೆ. ನಿನ್ನೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್​ ಖರ್ಗೆ ಸೇರಿ ಅನೇಕರು ಟ್ವೀಟ್ ಮಾಡಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶದ್ರೋಹವನ್ನು ಎಸಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಕನ್ನಡಿಗನ ಕಥೆಯಲ್ಲಿ ಬಾಲಿವುಡ್​ ನಟ ಅಕ್ಷಯ್​ ಕುಮಾರ್​? ಅಕ್ಕಿ ಪಾಲಿಗೆ ಮತ್ತೊಂದು ಬಯೋಪಿಕ್