ತೈಲ ಮತ್ತು ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾದ ಬೆನ್ನಲ್ಲೇ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರು ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಲ್ಕು ರಾಜ್ಯಗಳಲ್ಲಿ ಹೊಸದಾಗಿ ಅಧಿಕಾರ ಹಿಡಿದ ಖುಷಿಗೆ ಬಿಜೆಪಿ ದೇಶದ ಜನರಿಗೆ ನೀಡುತ್ತಿರುವ ಉಡುಗೊರೆ ಇದು ಎಂದು ಹೇಳಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗೃಹಬಳಕೆ ಸಿಲಿಂಡರ್ ಗ್ಯಾಸ್ ಬೆಲೆ ಏರಿಕೆಯಾಗುತ್ತದೆ ಎಂದು ನಾನು ಮೊದಲೇ ಹೇಳಿದ್ದೆ. ಅದರಂತೆ ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಹಿಡಿದ ನಂತರ ಬಿಜೆಪಿ ಮೊದಲು ನೀಡುತ್ತಿರುವ ಉಡುಗೊರೆಯೇ ತೈಲ ಬೆಲೆ ಏರಿಕೆ ಮತ್ತು ಗ್ಯಾಸ್ ಬೆಲೆ ಏರಿಕೆ ಎಂದು ಹೇಳಿದರು.
ಹಾಗೇ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಕೂಡ ಇಂಧನ ಮತ್ತು ಗ್ಯಾಸ್ ಬೆಲೆ ಏರಿಕೆಯನ್ನು ಖಂಡಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ದೇಶದ ಹಲವು ನಗರಗಳಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ 1000 ರೂಪಾಯಿ ತಲುಪಿದ್ದಕ್ಕೆ ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು. ಇನ್ನು ಪೆಟ್ರೋಲ್-ಡೀಸೆಲ್ ಬೆಲೆಯಲ್ಲೂ ಇನ್ನು ಮುಂದೆ ದೈನಂದಿನ ವಿಕಾಸ (ಪ್ರತಿ ದಿನ ಏರಿಕೆ) ಆಗುತ್ತದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಕೈಗೆಟಕುವ ಅಂಶಗಳೆಂದರೆ ಕೋಮುವಾದ ಮತ್ತು ದ್ವೇಷ. ಉಳಿದಿದ್ದೆಲ್ಲ ದುಬಾರಿ ಎಂದು ವ್ಯಂಗ್ಯ ಮಾಡಿದ್ದಾರೆ.
ನವೆಂಬರ್ಗೂ ಮೊದಲು ಪೆಟ್ರೋಲ್-ಡೀಸೆಲ್ ಬೆಲೆ ಪ್ರತಿದಿನ ಏರಿಕೆಯಾಗುತ್ತಿತ್ತು. ಆದರೆ ನವೆಂಬರ್ನಲ್ಲಿ ದೀಪಾವಳಿ ಉಡುಗೊರೆಯಾಗಿ ಕೇಂದ್ರ ಸರ್ಕಾರ ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 10 ರೂ. ಮತ್ತು 5ರೂಪಾಯಿ ಕಡಿತಗೊಳಿಸಿತ್ತು. ಅಂದಿನಿಂದಲೂ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರತೆ ಕಾಯ್ದುಕೊಂಡಿತ್ತು. ಆದರೆ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದೆ. ಅದರ ಬೆನ್ನಲ್ಲೇ ನಿನ್ನೆ (ಮಾರ್ಚ್ 22) ಪೆಟ್ರೋಲ್-ಡೀಸೆಲ್ ಬೆಲೆಯನ್ನು 80 ಪೈಸೆ ಹೆಚ್ಚಳ ಮಾಡಲಾಗಿತ್ತು. ಇಂದೂ ಕೂಡ ಹೆಚ್ಚಿಸಲಾಗಿದೆ.
ಇದನ್ನೂ ಓದಿ: IPL 2022: ಐಪಿಎಲ್ ಆರಂಭದಲ್ಲೇ ಮುಂಬೈಗೆ ಆಘಾತ! ಬಲಿಷ್ಠ ಡೆಲ್ಲಿ ಎದುರಿನ ಪಂದ್ಯಕ್ಕೆ ತಂಡದ ಸ್ಟಾರ್ ಬ್ಯಾಟರ್ ಅಲಭ್ಯ
Published On - 8:12 am, Wed, 23 March 22