ತೆಲಂಗಾಣ ಸರ್ಕಾರದಿಂದ ಬಂಧನ ಯತ್ನ; ರಾಷ್ಟ್ರಪತಿ ಮುರ್ಮು, ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ ಪತ್ರ ಬರೆದ ಕಿಶನ್ ರೆಡ್ಡಿ

|

Updated on: Jul 20, 2023 | 6:50 PM

ರಾಚಕೊಂಡ ಪೊಲೀಸ್ ಕಮಿಷನರ್ ಮತ್ತು ಇತರ ಪೊಲೀಸ್ ಸಿಬ್ಬಂದಿ ನನ್ನನ್ನು ಬಂಧಿಸಿದ್ದಾರೆ. ನಾನು ಯೋಜನೆಯ ಪ್ರಗತಿಯನ್ನು ಪರಿಶೀಲಿಸಲು ಬಟಸಿಂಗಾರಂಗೆ ಭೇಟಿ ನೀಡಲು ನಿರ್ಧರಿಸಿದ್ದೇನೆಯೇ ಹೊರತು ಆಂದೋಲನ ಅಥವಾ ಧರಣಿ ಧರಣಿ ನಡೆಸಲು ಅಲ್ಲ ಎಂದು ಪರಿಪರಿಯಾಗಿ ಹೇಳಿದರೂ ಅವರು ನನ್ನನ್ನು ಬಿಡಲಿಲ್ಲ ಎಂದು ಕಿಶನ್ ರೆಡ್ಡಿ ಪತ್ರದಲ್ಲಿ ಬರೆದಿದ್ದಾರೆ.

ತೆಲಂಗಾಣ ಸರ್ಕಾರದಿಂದ ಬಂಧನ ಯತ್ನ; ರಾಷ್ಟ್ರಪತಿ ಮುರ್ಮು, ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ ಪತ್ರ ಬರೆದ ಕಿಶನ್ ರೆಡ್ಡಿ
ಜಿ ಕಿಶನ್ ರೆಡ್ಡಿ
Follow us on

ಹೈದರಾಬಾದ್ ಜುಲೈ 20: ಭಾರತ್ ರಾಷ್ಟ್ರ ಸಮಿತಿ (BRS) ಸರ್ಕಾರದ ಬಡವರಿಗೆ ವಸತಿ ಯೋಜನೆಯ ಸ್ಥಳವನ್ನು ಪರಿಶೀಲಿಸಲು ಕೇಂದ್ರ ಸಚಿವ ಮತ್ತು ತೆಲಂಗಾಣ (Telangana) ಬಿಜೆಪಿ ಅಧ್ಯಕ್ಷ ಜಿ ಕಿಶನ್ ರೆಡ್ಡಿ (G Kishan Reddy) ಶಂಶಾಬಾದ್ ವಿಮಾನ ನಿಲ್ದಾಣದಿಂದ ಬಟಸಿಂಗಾರಂಗೆ ತೆರಳುತ್ತಿದ್ದಾಗ ಪೊಲೀಸರು ಮುನ್ನೆಚ್ಚರಿಕೆಯಾಗಿ ಅವರನ್ನು ವಶಪಡಿಸಿಕೊಂಡಿದ್ದರು. ಘಟನೆ ನಡೆದ ಕೂಡಲೇ ಪಕ್ಷದ ಇತರ ಮುಖಂಡರೊಂದಿಗೆ ಔಟರ್ ರಿಂಗ್ ರಸ್ತೆಯಲ್ಲೇ ಕುಳಿತು ರೆಡ್ಡಿ ಪೊಲೀಸರ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇದಾದ ನಂತರ ತನ್ನನ್ನು ಬಂಧಿಸಲು ತೆಲಂಗಾಣ ಸರ್ಕಾರದ ಪ್ರಯತ್ನ ನಡೆಸಿದೆ ಎಂದು ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲೇನಿದೆ?

ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲರಿಗೂ ವಸತಿ ಕಲ್ಪಿಸಲು ಮಾಡಿದ ಪ್ರಯತ್ನಗಳ ಬಗ್ಗೆ ನಿಮಗೆ ಗೊತ್ತಿದೆ. ಪ್ರತಿಯೊಬ್ಬ ಬಡವರಿಗೂ ಅವರ ತಲೆಯ ಮೇಲೆ ಸೂರು ಇದೆ ಎಂದು ಖಚಿತಪಡಿಸಿಕೊಳ್ಳಲು, ಭಾರತ ಸರ್ಕಾರವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 3 ಕೋಟಿ ಮನೆಗಳನ್ನು ನಿರ್ಮಿಸಿದೆ. ಈ ಉಪಕ್ರಮದ ಭಾಗವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ ತೆಲಂಗಾಣ ರಾಜ್ಯದಲ್ಲಿ ಸರಿಸುಮಾರು 2.5 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ.


ಅದೇ ವೇಳೆ ತೆಲಂಗಾಣದಲ್ಲಿ ಎಲ್ಲರಿಗೂ ವಸತಿ ಮಾಡಲು ಅಗತ್ಯವಿರುವಷ್ಟು ಮನೆಗಳನ್ನು ನೀಡಲು ಭಾರತ ಸರ್ಕಾರ ಸಿದ್ಧವಾಗಿದೆ. ಭಾರತ ಸರ್ಕಾರವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಾಗಿ ಮತ್ತು ತೆಲಂಗಾಣದ ಲೋಕಸಭಾ ಸದಸ್ಯರಾಗಿ, ಭಾರತ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವುದು ನನ್ನ ಕರ್ತವ್ಯ ಎಂದು ನಾನು ಭಾವಿಸುತ್ತೇನೆ. ಈ ನಿಟ್ಟಿನಲ್ಲಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ ಮಂಜೂರಾದ ಮನೆಗಳ ನಿರ್ಮಾಣವನ್ನು ಪರಿಶೀಲಿಸಲು ನಾನು ಹೈದರಾಬಾದ್‌ನ ಬಟಸಿಂಗಾರಂಗೆ ಭೇಟಿ ನೀಡಲು ಹೋಗಿದ್ದೆ.

ಆಗ ರಾಚಕೊಂಡ ಪೊಲೀಸ್ ಕಮಿಷನರ್ ಮತ್ತು ಇತರ ಪೊಲೀಸ್ ಸಿಬ್ಬಂದಿ ನನ್ನನ್ನು ಬಂಧಿಸಿದ್ದಾರೆ. ನಾನು ಯೋಜನೆಯ ಪ್ರಗತಿಯನ್ನು ಪರಿಶೀಲಿಸಲು ಬಟಸಿಂಗಾರಂಗೆ ಭೇಟಿ ನೀಡಲು ನಿರ್ಧರಿಸಿದ್ದೇನೆಯೇ ಹೊರತು ಆಂದೋಲನ ಅಥವಾ ಧರಣಿ ಧರಣಿ ನಡೆಸಲು ಅಲ್ಲ ಎಂದು ಪರಿಪರಿಯಾಗಿ ಹೇಳಿದರೂ ಅವರು ನನ್ನನ್ನು ಬಿಡಲಿಲ್ಲ. ಈ ಪತ್ರದ ಜತೆ ಲಗತ್ತಿಸುತ್ತಿರುವ ನನ್ನ ಪ್ರವಾಸ ಕಾರ್ಯಕ್ರಮದ ಪ್ರತಿಯಲ್ಲಿಯೂ ಇದು ಸ್ಪಷ್ಟವಾಗಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಕಿಶನ್ ರೆಡ್ಡಿಯನ್ನು ವಶಕ್ಕೆ ಪಡೆದ ಪೊಲೀಸ್; ನಾನೇನು ಭಯೋತ್ಪಾದಕನೇ? ಎಂದು ಪ್ರಶ್ನಿಸಿದ ಕೇಂದ್ರ ಸಚಿವ

ಭದ್ರತೆ ದೃಷ್ಟಿಯಿಂದ ಮತ್ತು ನನ್ನ ವಿರುದ್ಧ ಹೆಚ್ಚಿದ ಬೆದರಿಕೆಯ ಗ್ರಹಿಕೆಯಿಂದಾಗಿ, ನಾನು ಇಂದಿನ (20 ಜುಲೈ 2023) ನನ್ನ ಪ್ರವಾಸ ಕಾರ್ಯಕ್ರಮವನ್ನು ನಿನ್ನೆಯೇ ಪ್ರಕಟಿಸಿದ್ದೇನೆ. ಅದರ ಪ್ರತಿಯನ್ನು ತೆಲಂಗಾಣದ ಪೊಲೀಸ್ ಮಹಾನಿರ್ದೇಶಕರಿಗೂ ಕಳುಹಿಸಲಾಗಿದೆ.
ತೆಲಂಗಾಣ ಪೊಲೀಸರ ಈ ಕೃತ್ಯವನ್ನು ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ವ್ಯವಹಾರದ ನಡವಳಿಕೆಯ ನಿಯಮಗಳ ನಿಯಮ ಸಂಖ್ಯೆ 229 ರ ಪ್ರಕಾರ ವಿಶೇಷಾಧಿಕಾರದ ಉಲ್ಲಂಘನೆ ಎಂದು ನಾನು ಪರಿಗಣಿಸುತ್ತೇನೆ. ಈ ವಿಷಯದಲ್ಲಿ ನೀವು ಗಮನ ಹರಿಸಬೇಕು ಎಂದು ನಾನು ಮನವಿ ಮಾಡುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ