ಬೀದಿಗೆ ಬಂದ ಪೆಟ್ ಡಾಗ್ ಜಗಳ: ಲಿಫ್ಟ್ ಒಳಗೆ ಮಹಿಳೆಯರ ನಡುವೆ ಜಗಳ, ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

ಗಾಜಿಯಾಬಾದ್‌ನ ವಸತಿ ಸೊಸೈಟಿಯ ಲಿಫ್ಟ್‌ನಲ್ಲಿ ಸಾಕು ನಾಯಿ ವಿಚಾರಕ್ಕೆ ಇಬ್ಬರು ಮಹಿಳೆಯರ ನಡುವೆ ತೀವ್ರ ಜಗಳ ನಡೆದಿದೆ. ಶಿಕ್ಷಕಿ ಹೀನಾ ಬಾರಿ ಮತ್ತು ಶ್ವೇತಾ ಸುಬೆ ನಾಯಿ ಮಾಲೀಕತ್ವ ಮತ್ತು ಲಿಫ್ಟ್ ಬಳಕೆಯ ಕುರಿತು ವಾದಿಸಿ, ಕೈಕೈ ಮಿಲಾಯಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹೀನಾ ಪೊಲೀಸರಿಗೆ ದೂರು ನೀಡಿದ್ದಾರೆ. ಸಾಕುಪ್ರಾಣಿ ನಿಯಮಗಳ ಉಲ್ಲಂಘನೆ ಇಂತಹ ಘಟನೆಗಳಿಗೆ ಕಾರಣವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೀದಿಗೆ ಬಂದ ಪೆಟ್ ಡಾಗ್ ಜಗಳ: ಲಿಫ್ಟ್ ಒಳಗೆ ಮಹಿಳೆಯರ ನಡುವೆ ಜಗಳ, ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
ಲಿಫ್ಟ್​

Updated on: Sep 14, 2026 | 3:16 PM

ಗಾಜಿಯಾಬಾದ್, ಸೆಪ್ಟೆಂಬರ್ 14: ಉತ್ತರ ಪ್ರದೇಶದ ಗಾಜಿಯಾಬಾದ್‌ನ ಐಷಾರಾಮಿ ಅಪಾರ್ಟ್‌ಮೆಂಟ್‌ ಒಂದರಲ್ಲಿ ಸಾಕು ನಾಯಿಯನ್ನು ಲಿಫ್ಟ್‌ನಲ್ಲಿ ಕರೆದೊಯ್ಯುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರ ನಡುವೆ ನಡೆದ ವಾಗ್ವಾದ ವಿಕೋಪಕ್ಕೆ ಹೋಗಿ, ಶಾಲಾ ಶಿಕ್ಷಕಿಯೊಬ್ಬರ ಮೇಲೆ ಇನ್ನೊಬ್ಬ ಮಹಿಳೆ ಕೋಲು ಹಾಗೂ ಕೈಯಿಂದ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ರಾಜ್ ನಗರ ಎಕ್ಸ್‌ಟೆನ್ಶನ್‌ನಲ್ಲಿರುವ ‘ವಿಂಡ್ಸರ್ ಪ್ಯಾರಡೈಸ್’ ವಸತಿ ಸೊಸೈಟಿಯಲ್ಲಿ ಈ ಘಟನೆ ನಡೆದಿದ್ದು, ಲಿಫ್ಟ್ ಒಳಗೆ ನಡೆದ ಹಲ್ಲೆಯ ಸಂಪೂರ್ಣ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಘಟನೆ ನಡೆದದ್ದು ಯಾವಾಗ?

ಸೆಪ್ಟೆಂಬರ್ 12ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಇಂದಿರಾಪುರಂ ಶಾಲೆಯಿಂದ ಶಿಕ್ಷಕಿ ಹೀನಾ ಬಾರಿ ಅವರು ಕರ್ತವ್ಯ ಮುಗಿಸಿ ತಮ್ಮ ಫ್ಲಾಟ್‌ಗೆ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹೀನಾ ಅವರು ಸೊಸೈಟಿಯ ಲಿಫ್ಟ್‌ ಪ್ರವೇಶಿಸಿದಾಗ, ಅಲ್ಲಿ ಶ್ವೇತಾ ಸುಬೆ ಎಂಬ ಮಹಿಳೆ ತನ್ನ ಸಾಕು ನಾಯಿಯೊಂದಿಗೆ ನಿಂತಿದ್ದರು. ಶ್ವೇತಾ ತನ್ನ ನಾಯಿಯನ್ನು ಮುಂದಿಟ್ಟುಕೊಂಡು ಇತರ ನಿವಾಸಿಗಳು ಲಿಫ್ಟ್ ಪ್ರವೇಶಿಸದಂತೆ ತಡೆಯುತ್ತಿದ್ದಾರೆ ಎಂದು ಹೀನಾ ಆಕ್ಷೇಪ ವ್ಯಕ್ತಪಡಿಸಿದ್ದು ಮಾತಿನ ಚಕಮಕಿಗೆ ಕಾರಣವಾಗಿದೆ.

ವಾಗ್ವಾದ ತಾರಕಕ್ಕೇರಿದಾಗ ಶ್ವೇತಾ ತನ್ನ ಕೈಯಲ್ಲಿದ್ದ ಕೋಲಿನಿಂದ ಶಿಕ್ಷಕಿ ಹೀನಾ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಕಪಾಳಮೋಕ್ಷ ಮಾಡಿದ್ದಾರೆ. ಶಿಕ್ಷಕಿ ಪ್ರತಿದಾಳಿ ನಡೆಸಿದಾಗ ಇಬ್ಬರ ನಡುವೆ ಲಿಫ್ಟ್‌ನಲ್ಲೇ ತೀವ್ರ ಕೈಕೈ ಮಿಲಾಯಿಸುವಿಕೆ ನಡೆದಿದೆ. ಗಲಾಟೆಯನ್ನು ಗಮನಿಸಿದ ಹೊರಗಿದ್ದ ಭದ್ರತಾ ಸಿಬ್ಬಂದಿ ಕೂಡಲೇ ಲಿಫ್ಟ್ ಒಳಗೆ ಬಂದು ಇಬ್ಬರನ್ನೂ ಬಿಡಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಪೊಲೀಸ್ ಠಾಣೆಗೆ ದೂರು: ಹಲ್ಲೆಯಿಂದ ನೊಂದ ಶಿಕ್ಷಕಿ ಹೀನಾ ಬಾರಿ ನಂದಗ್ರಾಮ್ ಪೊಲೀಸ್ ಠಾಣೆಗೆ ತೆರಳಿ ಶ್ವೇತಾ ಸುಬೆ ವಿರುದ್ಧ ಅಧಿಕೃತವಾಗಿ ಲಿಖಿತ ದೂರು ಸಲ್ಲಿಸಿ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದ್ದಾರೆ.

ಮತ್ತಷ್ಟು ಓದಿ: ಹೆಂಡತಿಯನ್ನು ಕಂಡು ಬೊಗಳಿದ್ದಕ್ಕೆ ನಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ವ್ಯಕ್ತಿ! ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ನೋಯ್ಡಾ, ಗಾಜಿಯಾಬಾದ್ ಮತ್ತು ಗುರುಗ್ರಾಮದ ಬಹುಮಹಡಿ ಕಟ್ಟಡಗಳಲ್ಲಿ ಸಾಕು ನಾಯಿಗಳಿಗೆ ಮಾಸ್ಕ್ ಹಾಕದಿರುವುದು, ಲಿಫ್ಟ್‌ನಲ್ಲಿ ಒಯ್ಯುವಾಗ ಇತರರಿಗೆ ಭಯ ಹುಟ್ಟಿಸುವುದು ಹಾಗೂ ನಾಯಿ ಕಡಿತದ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿದ್ದು, ನಿವಾಸಿಗಳ ನಡುವೆ ಪದೇ ಪದೇ ಘರ್ಷಣೆಗಳು ನಡೆಯುತ್ತಿವೆ.

ವಿಡಿಯೋ

ನಂದಗ್ರಾಮ್ ಠಾಣಾ ಪೊಲೀಸರು ಲಿಫ್ಟ್‌ನಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರು ಮಹಿಳೆಯರ ಹೇಳಿಕೆಗಳನ್ನು ಪಡೆದು ತನಿಖೆ ಮುಂದುವರಿಸಿದ್ದಾರೆ.

ಪಾಲಿಕೆ ನಿಯಮಗಳ ಉಲ್ಲಂಘನೆ: ಸ್ಥಳೀಯ ಮುನ್ಸಿಪಲ್ ಕಾರ್ಪೊರೇಷನ್ ನಿಯಮಗಳ ಪ್ರಕಾರ, ಅಪಾರ್ಟ್‌ಮೆಂಟ್‌ಗಳ ಸಾಮಾನ್ಯ ಲಿಫ್ಟ್‌ಗಳಲ್ಲಿ ಸಾಕುಪ್ರಾಣಿಗಳನ್ನು ಕರೆದೊಯ್ಯುವಾಗ ಮುನ್ನೆಚ್ಚರಿಕಾ ಕ್ರಮವಾಗಿ ಬಾಯಿಗೆ ಪಟ್ಟಿ ಕಟ್ಟುವುದು ಕಡ್ಡಾಯವಾಗಿದ್ದು, ಇಂತಹ ನಿಯಮಗಳ ಪಾಲನೆಯಾಗುತ್ತಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ಪ್ರಮುಖ ಆರೋಪವಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us