ನರೇಂದ್ರ ಮೋದಿ ಬೆಂಗಳೂರಿನಲ್ಲಿ ಇಂದು ಇಂಧನ ಸಪ್ತಾಹ ಕಾರ್ಯಕ್ರಮಕ್ಕೆ (India Energy Week) ಚಾಲನೆ ಕೊಡುವ ವೇಳೆ ಹಸಿರು ಇಂಧನದ ಬಗ್ಗೆ ಒಂದಷ್ಟು ಮಹತ್ವದ ವಿಚಾರ ಹಂಚಿಕೊಂಡರು. ಭಾರತದಲ್ಲಿ ಮರುಬಳಕೆ ಇಂಧನ, ಪರಿಸರಸ್ನೇಹಿ ಇಂಧನ ಹೇಗೆ ಬೆಳೆಯುತ್ತಿದೆ, ಗ್ರೀನ್ ಎನರ್ಜಿ ಕ್ಷೇತ್ರದಲ್ಲಿ ಭಾರತ ಹೇಗೆ ಮುಂಚೂಣಿಗೆ ಬರುತ್ತಿದೆ ಎಂಬುದನ್ನು ಅವರು ವಿವರಿಸಿದರು. ಅಷ್ಟಕ್ಕೂ ಏನಿದು ಗ್ರೀನ್ ಎನರ್ಜಿ, ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಈ ಕ್ಷೇತ್ರದಲ್ಲಿ ಎಷ್ಟು ಬೆಳವಣಿಗೆ ಸಾಧಿಸಿದೆ ಎಂಬತ್ತ ಒಂದು ಪುಟ್ಟ ನೋಟ ಇಲ್ಲಿದೆ.
ಗ್ರೀನ್ ಎನರ್ಜಿ (Green Energy) ಎಂದರೇನು?: ನಾವು ವಾಹನಗಳಿಗೆ ಬಳಸುವ ಪೆಟ್ರೋಲ್, ಡೀಸೆಲ್ಗಳು ಪೆಟ್ರೋಲಿಯಂ ಉತ್ಪನ್ನಗಳಾಗಿವೆ. ಇವು ಕೋಟ್ಯಂತರ ವರ್ಷಗಳ ಕಾಲ ಭೂಮಿಯೊಳಗೆ ಹುದುಗಿಹೋದ ಪಳೆಯುಳಿಕೆಗಳಿಂದ ನೈಸರ್ಗಿಕವಾಗಿ ತಯಾರಾಗುವ ತೈಲವಾಗಿದೆ. ಇವು ಭೂಮಿಯಲ್ಲಿ ಸೀಮಿತ ಪ್ರಮಾಣದಲ್ಲಿ ಮಾತ್ರ ಲಭ್ಯ ಇರುತ್ತದೆ. ಹಾಗೆಯೇ, ಕಲ್ಲಿದ್ದಲಿನಿಂದ (Coal) ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇಂಥ ನೈಸರ್ಗಿಕ ವಸ್ತುಗಳನ್ನು ಬಳಸಿದಷ್ಟೂ ಇವುಗಳು ಕಡಿಮೆ ಆಗುತ್ತಲೇ ಹೋಗುತ್ತದೆ. ಆದ್ದರಿಂದ ಮನುಷ್ಯರು ತಮ್ಮ ಬಳಕೆಗೆ ಪರ್ಯಾಯ ಇಂಧನ (Alternate Energy Sources) ಕಂಡುಕೊಳ್ಳಬೇಕಿದೆ. ಅದುವೇ ಮರುಬಳಕೆ ಇಂಧನ (Renewable Energy). ನೈಸರ್ಗಿಕ ಸಂಪತ್ತು ನಶಿಸದ ರೀತಿಯಲ್ಲಿ ತಯಾರಾಗುವ ಇಂಧನ ಇದು. ಇಲ್ಲಿ ಗ್ರೀನ್ ಎನರ್ಜಿ ಅಥವಾ ಹಸಿರು ಶಕ್ತಿ ಎಂದರೆ ಪರಿಸರಕ್ಕೆ ಹಾನಿಯಾಗದ ಅಥವಾ ನೈಸರ್ಗಿಕ ಸಂಪತ್ತು ನಶಿಸದ ಹಾಗೆ ಉತ್ಪಾದನೆಯಾಗುವ ಇಂಧನ ಎನ್ನಬಹುದು.
ರಿನಿವಬಲ್ ಎನರ್ಜಿಯಲ್ಲಿ ಪ್ರಮುಖವಾದುದು ಜನವಿದ್ಯುತ್, ವಾಯುಶಕ್ತಿ ಮತ್ತು ಸೌರಶಕ್ತಿ. ಹಾಗೆಯೆ, ಗೊಬ್ಬರ ಇತ್ಯಾದಿಯಿಂದ ತಯಾರಾಗುವ ಜೈವಿಕ ಅನಿಲವೂ ಈ ಗುಂಪಿಗೆ ಸೇರುತ್ತದೆ. ಭಾರತ ಕೆಲವಾರು ವರ್ಷಗಳಿಂದ ಈ ಪರ್ಯಾಯ ಇಂಧನ ಉತ್ಪಾದನೆಯತ್ತ ಗಮನ ಕೊಟ್ಟ ಫಲವಾಗಿ ಈಗ ಭಾರತ ಈ ಕ್ಷೇತ್ರದಲ್ಲಿ ಜಾಗತಿಕವಾಗಿ ಗಮನ ಸೆಳೆಯುವ ರೀತಿಯಲ್ಲಿ ಬೆಳೆದಿದೆ.
ಇದನ್ನೂ ಓದಿ: India Energy Week: ಏನಿದು E20 ಇಂಧನ; ಇದು ಯಾವ ವಾಹನಗಳಲ್ಲಿ ಬಳಸಬಹುದು?, ಇಲ್ಲಿದೆ ಮಾಹಿತಿ
ಮರುಬಳಕೆ ಇಂಧನದ ಸ್ಥಾಪಿತ ಪ್ರಮಾಣದಲ್ಲಿ ಜಾಗತಿಕವಾಗಿ ಭಾರತ 4ನೇ ಸ್ಥಾನದಲ್ಲಿದೆ. ಅಂದರೆ ಮರುಬಳಕೆ ಇಂಧನ ಉತ್ಪಾದನೆಯಲ್ಲಿ ಭಾರತದ್ದು 4ನೇ ಸ್ಥಾನ. ಇನ್ನು, ವಾಯುಶಕ್ತಿ ಅಥವಾ ವಿಂಡ್ ಎನರ್ಜಿ ಸಾಮರ್ಥ್ಯದಲ್ಲಿ ಹಾಗೂ ಸೌರ ಶಕ್ತಿ ಉತ್ಪಾದನೆಯಲ್ಲೂ ಭಾರತ 4ನೇ ಸ್ಥಾನದಲ್ಲಿದೆ.
2022 ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ರಿನಿವಬಲ್ ಎನರ್ಜಿ ಉತ್ಪಾದನೆ ಸಾಮರ್ಥ್ಯ 166 ಗೀಗಾವ್ಯಾಟ್ ತಲುಪಿದೆ. ನಮ್ಮ ದೇಶದ ಒಟ್ಟಾರೆ ಸ್ಥಾಪಿತ ವಿದ್ಯುತ್ ಸಾಮರ್ಥ್ಯದಲ್ಲಿ ರಿನಿವಬಲ್ ಎನರ್ಜಿ ಪಾಲು ಶೇ. 40ಕ್ಕಿಂತಲೂ ಹೆಚ್ಚಾಗಿದೆ. 2030ರಷ್ಟರಲ್ಲಿ ಈ ಸಾಮರ್ಥ್ಯವನ್ನು 500 ಜಿಡಬ್ಲ್ಯೂಗೆ ಹೆಚ್ಚಿಸುವ ಮಹತ್ವಾಕಾಂಕ್ಷಿ ಗುರಿ ಭಾರತದ ಮುಂದಿದೆ. ಇದು ಸಾಕಾರಗೊಂಡರೆ ಮರುಬಳಕೆ ಇಂಧನ ಉತ್ಪಾದನೆಯಲ್ಲಿ ಭಾರತವೇ ನಂಬರ್ ಒನ್ ಎನಿಸುತ್ತದೆ.
ಇದನ್ನೂ ಓದಿ: PM Narendra Modi: ಒನ್ ನೇಷನ್-ಒನ್ ಗ್ರಿಡ್ ಸಾಕಾರದತ್ತ ದಾಪುಗಾಲು; ಇಂಧನ ಸಪ್ತಾಹದಲ್ಲಿ ಮೋದಿ ಮಾತು
ಜಾಗತಿಕವಾಗಿ ಹೇಗಿದೆ ಸ್ಥಿತಿ?
ಸದ್ಯ ಚೀನಾ ವಾಯುಶಕ್ತಿ ಮತ್ತು ಸೌರಶಕ್ತಿ ಬಳಕೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಆದರೆ ಒಟ್ಟಾರೆ ಇಂಧನದಲ್ಲಿ ರಿನಿವಬಲ್ ಎನರ್ಜಿ ಪಾಲು ಶೇ. 25ರಷ್ಟಿದೆಯಾದರೂ ವಿಶ್ವಾದ್ಯಂತ ಮರುಬಳಕೆ ಇಂಧನ ಯೋಜನೆಗಳಲ್ಲಿ ಚೀನಾ ಬಹಳಷ್ಟು ಹೂಡಿಕೆ ಮಾಡಿದೆ.
ತಮ್ಮ ಇಂಧನ ಅಗತ್ಯತೆಯನ್ನು ಬಹುತೇಕ ಸಂಪೂರ್ಣವಾಗಿ ರಿನಿವಬಲ್ ಎನರ್ಜಿ ಮೂಲಗಳಿಂದ ಪಡೆಯುತ್ತಿರುವ ದೇಶಗಳಲ್ಲಿ ಐಸ್ಲೆಂಡ್, ಉರುಗ್ವೆ, ಸ್ವೀಡನ್ ಮತ್ತು ಕೋಸ್ಟಾ ರಿಕಾ ಆಗಿವೆ. ಈ ದೇಶಗಳ ಇಂಧನ ಉತ್ಪಾದನೆ ವ್ಯವಸ್ಥೆ ಜಾಗತಿಕ ದೇಶಗಳಿಗೆ ಮಾದರಿಯಾಗಬಹುದು ಎಂದು ವಿಶ್ವಸಂಸ್ಥೆಯೇ ಸರ್ಟಿಫಿಕೇಟ್ ಕೊಟ್ಟಿದೆ.
ಜರ್ಮನಿ, ನ್ಯೂಜಿಲೆಂಡ್ ಮೊದಲಾದ ಕೆಲ ದೇಶಗಳು ತಮ್ಮ ವಿದ್ಯುತ್ ಅವಶ್ಯಕತೆಯಲ್ಲಿ ಶೇ. 80ಕ್ಕಿಂತ ಹೆಚ್ಚು ಇಂಧನವನ್ನು ಸೌರಶಕ್ತಿ, ವಾಯುಶಕ್ತಿ ಮತ್ತು ಜಲಶಕ್ತಿಯಿಂದ ಪಡೆಯುತ್ತವೆ. ಉತ್ತರ ಆಫ್ರಿಕಾದ ಮೊರಾಕೋ ದೇಶ ಸೌರಶಕ್ತಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ವಿಶ್ವದ ಅತಿದೊಡ್ಡ ಸೋಲಾರ್ ಫಾರ್ಮ್ ಈ ದೇಶದಲ್ಲಿದೆ. ಈ ಸೌರ ಪಾರ್ಕ್ನಲ್ಲಿ ಉತ್ಪಾದನೆಯಾಗುವ ವಿದ್ಯುತ್ ಒಂದು ಮಧ್ಯಮಮಟ್ಟದ ನಗರಕ್ಕೆ ಸಂಪೂರ್ಣ ವಿದ್ಯುತ್ ಒದಗಿಸಬಲ್ಲುದು.
Published On - 1:32 pm, Mon, 6 February 23