PM Narendra Modi: ಒನ್ ನೇಷನ್-ಒನ್ ಗ್ರಿಡ್ ಸಾಕಾರದತ್ತ ದಾಪುಗಾಲು; ಇಂಧನ ಸಪ್ತಾಹದಲ್ಲಿ ಮೋದಿ ಮಾತು
ಭಾರತದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಸ್ಥಿರ ಸರ್ಕಾರವಿದೆ. ಹೀಗಾಗಿಯೇ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಪೂರಕವಾಗುವ ಹಲವು ಕ್ರಮಗಳನ್ನು ಜಾರಿಗೆ ತರಲಾಗಿದೆ.
ಬೆಂಗಳೂರು: ನೆಲಮಂಗಲದ ಮಾದವಾರದ ಬಳಿ ಇರುವ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (Bengaluru International Exhibition Centre) ಪ್ರಧಾನಿ ನರೇಂದ್ರ ಮೋದಿ(Narendra Modi) ಇಂಧನ ಸಪ್ತಾಹ ಕಾರ್ಯಕ್ರಮವನ್ನು(India Energy Week 2023) ಉದ್ಘಾಟಿಸಿದ್ರು. ಮಾದಾವರದಲ್ಲಿರುವ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಇಂಧನ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಗೆಹ್ಲೋಟ್ ಸೇರಿದಂತೆ ಹಲವು ದೇಶಗಳ ಇಂಧನ ಸಚಿವರು ಪಾಲ್ಗೊಂಡಿದ್ದಾರೆ.
ಟರ್ಕಿ ದುರಂತಕ್ಕೆ ಮೋದಿ ವಿಷಾದ
ಟರ್ಕಿಯಲ್ಲಿ ಸಂಭವಿಸಿದ ವಿನಾಶಕಾರಿ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ವಿಷಾದ ವ್ಯಕ್ತಪಡಿದುವ ಮೂಲಕ ಭಾಷಣ ಆರಂಭಿಸಿದರು. ಭೂಕಂಪ ಸಂತ್ರಸ್ತರಿಗೆ ಭಾರತವು ಸಾಧ್ಯವಾಗುವ ಎಲ್ಲ ರೀತಿಯಲ್ಲಿಯೂ ನೆರವಾಗಲಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.
ಇದು ಭಾರತದಲ್ಲಿ ಜಿ-20 ಅಧ್ಯಕ್ಷತೆ ದೊರೆತ ನಂತರ ನಡೆಯುತ್ತಿರುವ ಮೊದಲ ಕಾರ್ಯಕ್ರಮ. ತಂತ್ರಜ್ಞಾನದ ರಾಜಧಾನಿ ಎನಿಸಿದ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಇಂಧನ ಕ್ಷೇತ್ರಕ್ಕೆ ಇಂದಿನ ದಿನಮಾನಗಳಲ್ಲಿ ಬಹಳ ಮಹತ್ವವಿದೆ. ಇಂಧನ ಉತ್ಪಾದನೆ ಮತ್ತು ವಿತರಣೆಯಲ್ಲಿ ಭಾರತವು ಇಂದು ವಿಶ್ವದ ಅತ್ಯಂತ ಮುಂದುರವರಿದ ಶಕ್ತಿಗಳ ಪೈಕಿ ಒಂದಾಗಿದೆ. ಐಎಂಎಫ್ 2023ರ ಪ್ರಗತಿಯ ಮುನ್ಸೂಚನೆ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿ ಸ್ಥಾನ ಪಡೆದಿದೆ. ಮಹಾಮಾರಿ ಹಾಗೂ ಯುದ್ಧದ ಪ್ರಭಾವದ ನಡುವೆಯೂ ಭಾರತವು ಜಾಗತಿಕ ಆಶಾಕಿರಣ (ಬ್ರೈಟ್ ಸ್ಪಾಟ್) ಆಗಿದೆ. ಆಂತರಿಕ ಸತ್ವದಿಂದಾಗಿ ಭಾರತವು ಬಾಹ್ಯ ಒತ್ತಡಗಳನ್ನು ತಡೆದುಕೊಂಡಿದೆ.
ಇದನ್ನೂ ಓದಿ: Energy Week: ದೇಶದ ಇವಿ ರಾಜಧಾನಿ ಕರ್ನಾಟಕ: ಬಸವರಾಜ ಬೊಮ್ಮಾಯಿ
ಭಾರತದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಸ್ಥಿರ ಸರ್ಕಾರವಿದೆ. ಹೀಗಾಗಿಯೇ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಪೂರಕವಾಗುವ ಹಲವು ಕ್ರಮಗಳನ್ನು ಜಾರಿಗೆ ತರಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಮಹತ್ವದ ಬದಲಾವಣೆಗಳು ಕಂಡು ಬಂದಿವೆ. ಅವುಗಳ ಫಲಾನುಭವಿಗಳ ಸಂಖ್ಯೆಯು ಹಲವು ಅಭಿವೃದ್ಧಿ ಹೊಂದಿದ ದೇಶಗಳ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಾಗಿದೆ. ಇಂದು ದೇಶದಲ್ಲಿ ಕೋಟ್ಯಂತರ ಜನರ ಬದುಕಿನ ರೀತಿ ಬದಲಾಗಿದೆ. ಹಳ್ಳಿಹಳ್ಳಿಗಳಲ್ಲಿ ಇಂಟರ್ನೆಟ್ ತಲುಪಿದೆ. ಇದಕ್ಕಾಗಿ 5 ಲಕ್ಷ ಕಿಮೀಗೂ ಹೆಚ್ಚು ಉದ್ದದಷ್ಟು ಆಪ್ಟಿಕಲ್ ಫೈಬರ್ ಅಳವಡಿಸಲಾಗಿದೆ. ಬ್ರಾಡ್ಬಾಂಡ್ ಬಳಕೆದಾರರ ಸಂಖ್ಯೆ 13 ಪಟ್ಟು ಹೆಚ್ಚಾಗಿದೆ. ಇಂಟರ್ನೆಟ್ ಬಳಕೆ ಪ್ರಮಾಣ 3 ಪಟ್ಟು ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಇಂಟರ್ನೆಟ್ ಬಳಕೆ ಹೆಚ್ಚಾಗಿದೆ. ಬಡವರ್ಗದಲ್ಲಿದ್ದವರು ಮಧ್ಯಮವರ್ಗಕ್ಕೆ ಬಂದಿದ್ದಾರೆ. ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರತ ಮುಂಚೂಣಿಗೆ ಬಂದಿದೆ ಎಂದರು.
ವಿಶ್ವದಲ್ಲಿಯೇ ಅತಿಹೆಚ್ಚು ಆಕಾಂಕ್ಷೆ ಹೊಂದಿರುವವರ ನಾಡಾಗಿ ನಮ್ಮ ಭಾರತ ವಿಕಸಿತಗೊಳ್ಳುತ್ತಿದೆ. ಭಾರತದಲ್ಲಿ ಇಂಧನದ ಬೇಡಿಕೆ ಹೆಚ್ಚಾಗುತ್ತಿದೆ. ಅಭಿವೃದ್ಧಿಯ ವೇಗ ಗಮನಿಸಿದರೆ ಬರುವ ವರ್ಷಗಳಲ್ಲಿ ಭಾರತದಲ್ಲಿ ಹಲವು ಹೊಸ ನಗರಗಳು ರೂಪುಗೊಳ್ಳಲಿವೆ. ಅಂತರರಾಷ್ಟ್ರೀಯ ಇಂಧನ ಸಂಸ್ಥೆಯು ಇದೇ ಮಾತು ಹೇಳಿದೆ. ಇದೇ ದಶಕದಲ್ಲಿ ಭಾರತದಲ್ಲಿ ಇಂಧನದ ಬೇಡಿಕೆಯು ವಿಶ್ವದಲ್ಲಿಯೇ ಅತ್ಯಂತ ಹೆಚ್ಚಾಗಲಿದೆ. ಹೀಗಾಗಿಯೇ ನಿಮ್ಮಂಥ ಹೂಡಿಕೆದಾರರು ಹಾಗೂ ಸಹವರ್ತಿಗಳಿಗೆ ಹೊಸ ಅವಕಾಶಗಳು ಲಭ್ಯವಾಗಲಿವೆ.
ಇಂಧನ ಬೇಡಿಕೆ ಹೆಚ್ಚಳವಾಗಲಿದೆ
ಭಾರತದಲ್ಲಿ ಪ್ರಸ್ತುತ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ವಿಶ್ವದ ಒಟ್ಟು ಬೇಡಿಕೆಯಲ್ಲಿ ಶೇ 5ರಷ್ಟು ಇದೆ. ಇದು ಮುಂದಿನ ಕೆಲವೇ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ಭಾರತದ ಅಭಿವೃದ್ಧಿಗೆ 4 ಮುಖ್ಯ ಸ್ತಂಭಗಳಿವೆ. 1) ದೇಶೀಯ ಉತ್ಪಾದನೆಯ ಹೆಚ್ಚಳ. 2) ಪೂರೈಕೆಯಲ್ಲಿ ವೈವಿಧ್ಯ. 3) ಜೈವಿಕ ಇಂಧನ, ಸೋಲಾರ್ನಂಥ ಪರ್ಯಾಯ ಇಂಧನ ಬಳಕೆಯಲ್ಲಿ ವೃದ್ಧಿ. 4) ಎಲೆಕ್ಟ್ರಿಕ್ ಮತ್ತು ಹೈಡ್ರೋಜನ್ ವಾಹನಗಳ ಬಳಕೆಗೆ ಒತ್ತು. ಈ ನಾಲ್ಕೂ ಅಂಶಗಳಲ್ಲಿ ಭಾರತ ವೇಗವಾಗಿ ಕೆಲಸ ಮಾಡುತ್ತಿದೆ ಎಂದು ನರೇಂದ್ರ ಮೋದಿ ತಿಳಿಸಿದರು.
ಒನ್ ನೇಷನ್, ಒನ್ ಗ್ರಿಡ್ ಆಶಯದತ್ತ ದಾಪುಗಾಲು
ನಮ್ಮ ಪೆಟ್ರೋಲಿಯಂ ಸಂಸ್ಕರಣಾಗಾರಗಳ ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸುತ್ತಿದ್ದೇವೆ. ಇಲ್ಲಿ ಸ್ಟಾರ್ಟಪ್ಗಳಿಗೆ ಹೆಚ್ಚು ಉತ್ತೇಜನವಿದೆ. ನೀವು ಇಲ್ಲಿನ ಇಂಧನ ಕ್ಷೇತ್ರದ ವಿಕಸನದ ಸಹಭಾಗಿಗಳಾಗಬಹುದು. ನೈಸರ್ಗಿಕ ಅನಿಲ ಕ್ಷೇತ್ರದಲ್ಲಿಯೂ ಸುಧಾರಣೆಗೆ ಸತತ ಪ್ರಯತ್ನ ನಡೆಯುತ್ತಿದೆ. ನಮ್ಮ ‘ಒನ್ ನೇಷನ್, ಒನ್ ಗ್ರಿಡ್’ ಆಶಯ ಸಾಕಾರಗೊಳಿಸಲು ಸತತ ಪ್ರಯತ್ನಗಳು ನಡೆಯುತ್ತಿವೆ. ಎನರ್ಜಿ ಟರ್ಮಿನಲ್ಗಳ ಸಾಮರ್ಥ್ಯ ವೃದ್ಧಿಸಲಾಗುತ್ತಿದೆ. ಸಿಎನ್ಜಿ ಸ್ಟೇಷನ್ಗಳು 2014ಲ್ಲಿ 900 ಮಾತ್ರವೇ ಇತ್ತು. ಆದರೆ ಈಗ 5000ಕ್ಕೆ ಮುಟ್ಟಿವೆ. ಗ್ಯಾಸ್ ಪೈಪ್ಲೈನ್ ಜಾಲ ವಿಸ್ತರಿಸಲು ಶ್ರಮಿಸುತ್ತಿದ್ದೇವೆ. 2014ರಲ್ಲಿ 14 ಸಾವಿರ ಕಿಮೀ ಪೈಪ್ಲೈನ್ ಇತ್ತು. ಈಗ 20 ಸಾವಿರ ಕಿಮೀ ದಾಟಿದೆ. ಶೀಘ್ರದಲ್ಲಿಯೇ ಇದು 35 ಸಾವಿರ ಕಿಮೀ ದಾಟಲಿದೆ. ಭಾರತವು ನಿಮ್ಮ ಹೂಡಿಕೆಗೆ ಅತ್ಯಂತ ಮಹತ್ವದ ಅವಕಾಶ ನೀಡಲಿದೆ. ಗ್ರೀನ್ ಹೈಡ್ರೋಜನ್ ಕ್ಷೇತ್ರದಲ್ಲಿ ಭಾರತವು ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ. 2030ರ ಹೊತ್ತಿಗೆ 4 ಎಂಎಂಟಿ ಯಷ್ಟು ಗ್ರೀನ್ ಹೈಡ್ರೋಜನ್ ಉತ್ಪಾದಿಸುತ್ತೇವೆ. ಇದಕ್ಕಾಗಿ 8 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಮಾಡಲಿದ್ದೇವೆ ಎಂದರು.
ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ದರ ಕಡಿತಕ್ಕೆ ಕ್ರಮ
ಇವಿ ಬ್ಯಾಟರಿಗಳ ದರ ಕಡಿಮೆ ಮಾಡಲು ಕ್ರಮ ತೆಗೆದುಕೊಂಡಿದ್ದೇವೆ. 50 ಗಿಗಾವ್ಯಾಟ್ಗಳಷ್ಟು ಸಾಮರ್ಥ್ಯದ ಅತ್ಯಾಧುನಿಕ ಕೆಮಿಸ್ಟ್ರಿ ಸೆಲ್ ತಯಾರಿಕೆಗಾಗಿ ವಿಶೇಷ ಪ್ರೋತ್ಸಾಹ ನೀಡಿದ್ದೇವೆ. ದೇಶದಲ್ಲಿ ಬ್ಯಾಟರಿ ಉತ್ಪಾದನೆಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಲಾಗಿದೆ. ಭಾರತದಲ್ಲಿ ಸೌರಶಕ್ತಿ ಉತ್ಪಾದನೆ ಶೇ 20ರಷ್ಟು ಹೆಚ್ಚಾಗಿದೆ. ಪವನ ವಿದ್ಯುತ್ ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲಿ 4ನೇ ಸ್ಥಾನದಲ್ಲಿದೆ. ಈ ದಶಕದ ಅಂತ್ಯದಲ್ಲಿ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಅರ್ಧದಷ್ಟನ್ನು ಪರಿಸರಸ್ನೇಹಿ ಮೂಲಗಳಿಂದಲೂ ಉತ್ಪಾದಿಸುವ ಗುರಿ ಇರಿಸಿಕೊಂಡಿದ್ದೇವೆ.
ಇ-20 ಆಶಯಗಳ ಆನಾವರಣ
ಇ-20 ಗುರಿಗಳನ್ನು ಇಂದು ಪರಿಚಯಿಸಲಾಗುತ್ತಿದೆ. ಆರಂಭದಲ್ಲಿ ಇದು ಕೆಲವೇ ನಗರಗಳಲ್ಲಿ ಮಾತ್ರವೇ ಇರುತ್ತದೆ. ಮುಂದಿನ ದಿನಗಳಲ್ಲಿ ಇಡೀ ದೇಶಕ್ಕೆ ಇದನ್ನು ವಿಸ್ತರಿಸಲಾಗುತ್ತದೆ. ವಿದ್ಯುತ್ ಉತ್ಪಾದನೆ, ವಿತರಣೆ, ಬಳಕೆಯಲ್ಲಿ ಉಳಿತಾಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ನವೀಕರಿಸಬಹುದಾದ ಇಂಧನ ಮೂಲಗಳಿಗೆ ಆದ್ಯತೆ ಸಿಗಲಿದೆ. ಸೋಲಾರ್ ಶಕ್ತಿಯಿಂದ ಮನೆ, ಗ್ರಾಮ, ಏರ್ಪೋರ್ಟ್, ಕೃಷಿ ಮುನ್ನಡೆಯುತ್ತಿರುವ ಹಲವು ಉದಾಹರಣೆಗಳಿವೆ. ಮುಂದಿನ ಕೆಲವೇ ದಿನಗಳಲ್ಲಿ ಎಲ್ಲ ಕುಟುಂಬಗಳಲ್ಲಿ ಸೋಲಾರ್ ಒಲೆಗಳು ಬಳಕೆಗೆ ಬರಲಿವೆ. ಇದರಿಂದ ಇಂಧನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಆಗಲಿದೆ.
ಪ್ಲಾಸ್ಟಿಕ್ ಬಾಟಲಿಯಿಂದ ಸಮವಸ್ತ್ರ
ಪ್ಲಾಸ್ಟಿಕ್ ಬಾಟಲಿಗಳಿಂದ ನಾವು ರೂಪಿಸಿರುವ ಸಮವಸ್ತ್ರಗಳು ಯಾವುದೇ ರೀತಿಯಲ್ಲಿ ಗುಣಮಟ್ಟ ಅಥವಾ ಫ್ಯಾಷನ್ ವಿಚಾರದಲ್ಲಿ ಕಡಿಮೆಯಾಗಿಲ್ಲ. 10 ಕೋಟಿ ಪ್ಲಾಸ್ಟಿಕ್ ಬಾಟಲಿಗಳನ್ನು ಹೀಗೆ ಮರುಬಳಕೆ ಮಾಡಲಾಗುವುದು. ಇದರಿಂದ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ. ಭಾರತದಲ್ಲಿ ಇಂಧನ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಗಮನಿಸಿ, ಬಳಸಿಕೊಳ್ಳಿ. ನಿಮ್ಮ ಹೂಡಿಕೆಗೆ ಭಾರತವು ಅತ್ಯಂತ ಪ್ರಶಸ್ತ ತಾಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:55 pm, Mon, 6 February 23